SUDDIKSHANA KANNADA NEWS/ DAVANAGERE/ DATE:22-02-2024
ದಾವಣಗೆರೆ: ದಾವಣಗೆರೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ನೌಕರರನ್ನು ನೇಮಿಸಿಕೊಂಡಿರುವುದು ಹಾಗೂ ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿಷೇಧ)1970 ಕಾಯ್ದೆಯಡಿ ನೋಂದಣಿ ಪ್ರಮಾಣ ಪತ್ರವನ್ನು ಪಡೆಯದೇ, ಗುತ್ತಿಗೆದಾರರಿಂದ ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿರುತ್ತದೆ. 20 ಕ್ಕಿಂತ ಹೆಚ್ಚು ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡಲ್ಲಿ 1970 ರ ಕಾಯ್ದೆಯಡಿ ಮೂಲ ಮಾಲೀಕರು ನೋಂದಣಿ ಪತ್ರವನ್ನು ಪಡೆಯಬೇಕು ಹಾಗೂ ಮೂಲ ಮಾಲೀಕರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರು ಪರವಾನಗಿಯನ್ನು ಪಡೆಯಬೇಕಾಗಿರುತ್ತದೆ.
ಗುತ್ತಿಗೆ ಕಾರ್ಮಿಕರ ಅಧಿನಿಯಮ 1970 ರ ಹಾಗೂ ಕರ್ನಾಟಕ ನಿಯಾಮವಳಿಯ 1974 ರ ನಿಯಮ 18(4) ರನ್ವಯ ನೋಂದಣಿ ಪ್ರಮಾಣ ಪತ್ರ ಪಡೆಯದಿದ್ದಲ್ಲಿ ಅದರ ಅಂಶಗಳ ಬದಲಾವಣೆ ಕುರಿತು ನೋಂದಣಿ ಪತ್ರವನ್ನು ತಿದ್ದುಪಡಿ ಮಾಡಿಕೊಳ್ಳಬೇಕಾಗಿರುತ್ತದೆ. ಅಂತರ್ಜಾಲ ವಿಳಾಸ www.labouronline.kar.nic.in ಆಗಿರುತ್ತದೆ. ಕಾರ್ಮಿಕರ ಕಾಯ್ದೆಯಡಿ ಆನ್ಲೈನ್ ಪ್ರಮಾಣ ಪತ್ರದ ನೋಂದಣಿ, ತಿದ್ದುಪಡಿ, ಪರವಾನಗಿಗಾಗಿ ದಾಖಲೆಗಳನ್ನು ಅಪ್ಲೋಡ್ ಮಾಡಿ ನಿಗಧಿತ ಶುಲ್ಕವನ್ನು ಇ-ಪೇಮೆಂಟ್ ಮೂಲಕ ಪಾವತಿಸಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಅರ್ಜಿದಾರರ ಗುರುತಿನ ಚೀಟಿ ( ಡ್ರೈವಿಂಗ್ ಲೈಸೆನ್ಸ್, ಪಾನ್ಕಾರ್ಡ್, ಆಧಾರ್ಕಾರ್ಡ್, ಪಾಸ್ಪೋರ್ಟ್, ಬ್ಯಾಂಕ್ ಪಾಸ್ಬುಕ್, ರೇಷನ್ ಕಾರ್ಡ್). ಪ್ರಧಾನ ಉದ್ಯೋಗದಾತ ಮತ್ತು ಗುತ್ತಿಗೆದಾರರ ನಡುವಿನ ಒಪ್ಪಂದ ಹಾಗೂ ಒಪ್ಪಂದದ ಪ್ರಮಾಣೀಕೃತ ಸಂಸ್ಥೆಯ ಪಾಲುದಾರರು, ನಿರ್ದೇಶಕರು, ಉದ್ಯೋಗದಾರರು, ಮಾಲೀಕರ ಪೂರ್ಣ ವಿಳಾಸ ಮತ್ತು ಗುರುತಿನ ಚೀಟಿಯೊಂದಿಗೆ ಪಟ್ಟಿ , ಗುತ್ತಿಗೆದಾರರ ಹೆಸರು ಮತ್ತು ವಿಳಾಸ ಸೇರಿದಂತೆ ಗುತ್ತಿಗೆ ಕಾರ್ಮಿಕರ ಸಂಖ್ಯೆ , ಕೆಲಸದ ಸ್ವರೂಪ, ಗುತ್ತಿಗೆದಾರರ ಕೆಲಸದ ಪ್ರಾರಂಭ ಮತ್ತು ಮುಕ್ತಾಯದ ದಿನಾಂಕ ಪ್ರಸ್ತುತ, ಹೊಸದಾಗಿ ಸೇರ್ಪಡೆ, ಅಳಿಸಲಾಗದ ಗುತ್ತಿಗೆದಾರರ ವಿವರಗಳು ಇರಬೇಕು.
ಈ ದಾಖಲಾತಿಗಳೊಂದಿಗೆ ನಿಗಧಿತ ನೋಂದಣಿ ಶುಲ್ಕ ಹಾಗೂ ಪರವಾನಗಿ ಶುಲ್ಕವನ್ನು ಪಾವತಿ ಮಾಡಿಕೊಂಡ ನಂತರ ಗುತ್ತಿಗೆದಾರರು ಆನ್ಲೈನ್ ಮುಖಾಂತರ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿ ಕೂಡಲೇ ನೋಂದಣಿ ಹಾಗೂ ಪರವಾನಗಿ ಪಡೆಯಬೇಕೆಂದು ಸಹಾಯಕ ಕಾರ್ಮಿಕ ಆಯುಕ್ತರಾದ ವೀಣಾ ತಿಳಿಸಿದ್ದಾರೆ.