ರಾಂಚಿ: ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ ಗಂಡು ಮಗುವಿನಾಸೆಗಾಗಿ ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಹಚ್ಚಿ, ಬಲವಂತವಾಗಿ ಗರ್ಭಪಾತ ಮಾಡಿಸಿದ ಹಿನ್ನೆಲೆಯಲ್ಲಿ 24 ವರ್ಷದ ಯುವತಿ ಕಿರಣ್ ಕುಮಾರಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪತಿ, ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ ಆಪರೇಟರ್, ಸಿಬ್ಬಂದಿ ಹಾಗೂ ನರ್ಸ್ ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಧನ್ಬಾದ್ನ ಶ್ಯಾಮದಿಹ್ ಚೌಕ್ನಲ್ಲಿರುವ ಖಾಸಗಿ ಕ್ಲಿನಿಕ್ನಲ್ಲಿ ಈ ಕೃತ್ಯ ನಡೆದಿದೆ. ಮೃತ ಯುವತಿಯ ತಂದೆ ರಾಜೇಂದ್ರ ಕುಮಾರ್ ಕೆವತ್ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕಿರಣ್ ಕುಮಾರಿ ಗರ್ಭದಲ್ಲಿದ್ದ ಭ್ರೂಣ ಹೆಣ್ಣು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಪತಿ ಸೋನು ಕೆವತ್ ಹಾಗೂ ಅತ್ತೆಯ ಮನೆಯವರು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ. ಈ ವೇಳೆ ಅತಿಯಾದ ರಕ್ತಸ್ರಾವದಿಂದ ಯುವತಿಯ ಸ್ಥಿತಿ ಹದಗೆಟ್ಟಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಯಾವುದೇ ಅರ್ಹ ವೈದ್ಯರ ಮೇಲ್ವಿಚಾರಣೆಯಿಲ್ಲದೆ ಅಕ್ರಮವಾಗಿ ಈ ಪ್ರಕ್ರಿಯೆ ನಡೆಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಘಟನೆಯ ಹಿನ್ನೆಲೆ: ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ ಗಂಡು ಮಗುವಿನಾಸೆಗಾಗಿ 24 ವರ್ಷದ ಕಿರಣ್ ಕುಮಾರಿ ಎಂಬುವರಿಗೆ ಅಕ್ರಮ ಗರ್ಭಪಾತ ಮಾಡಿಸಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.
ನಾಲ್ವರು ಆರೋಪಿಗಳ ಬಂಧನ: ಮೃತಳ ಪತಿ ಸೋನು ಕೆವತ್, ಸೆಂಟ್ರಲ್ ಡಯಾಗ್ನೋಸ್ಟಿಕ್ ಸೆಂಟರ್ ಆಪರೇಟರ್ ಸಚಿನ್ ಕುಮಾರ್ ಕೆವತ್, ಸಿಬ್ಬಂದಿ ವಿಜಯ್ ಗೋಸ್ವಾಮಿ ಹಾಗೂ ನರ್ಸ್ ಸುಲೋಚನಾ ದೇವಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಂದೆಯ ದೂರು: ಹೆಣ್ಣು ಭ್ರೂಣವೆಂದು ತಿಳಿದ ತಕ್ಷಣ ಪತಿ ಮತ್ತು ಮನೆಯವರು ಬಲವಂತವಾಗಿ ಗರ್ಭಪಾತ ಮಾಡಿಸಿದ್ದರಿಂದಲೇ ಮಗಳು ಸಾವನ್ನಪ್ಪಿದ್ದಾಳೆ ಎಂದು ಮೃತಳ ತಂದೆ ರಾಜೇಂದ್ರ ಕುಮಾರ್ ದೂರು ದಾಖಲಿಸಿದ್ದಾರೆ.
ತನಿಖೆ ಮುಂದುವರಿಕೆ: ತಲೆಮರೆಸಿಕೊಂಡಿರುವ ಮಾವ, ಅತ್ತೆ, ಮೈದುನ ಹಾಗೂ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.





Leave a comment