ಅಯೋಧ್ಯೆ/ಲಖನೌ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (SIT), ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹಾಗೂ ಮಾಜಿ ವಿಶ್ವಸ್ತ ಅನಿಲ್ ಮಿಶ್ರಾ ಅವರಿಗೆ ಸಂಪೂರ್ಣ ಕ್ಲೀನ್ ಚಿಟ್ ನೀಡಿದೆ.
ದೇಣಿಗೆ ಕಳ್ಳತನದ ಆರೋಪಗಳು ಕೇಳಿಬಂದ ಬೆನ್ನಲ್ಲೇ ಚಂಪತ್ ರೈ ಮತ್ತು ಅನಿಲ್ ಮಿಶ್ರಾ ಅವರು ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಉತ್ತರ ಪ್ರದೇಶದ ಗೃಹ ಇಲಾಖೆಯು ಎಸ್‌ಐಟಿ ಸಲ್ಲಿ ಸಿದ್ದ ಅಂತಿಮ ತನಿಖಾ ವರದಿಯನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಿದೆ.
ಪ್ರಕರಣದ ಹಿನ್ನೆಲೆ:
ಟ್ರಸ್ಟ್‌ನ ವಿನಂತಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ಜೂನ್ 13 ರಂದು ಲಖನೌ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಅವರ ನೇತೃತ್ವದಲ್ಲಿ ಮೂರು ಸದಸ್ಯರ ಎಸ್‌ಐಟಿ ತಂಡವನ್ನು ರಚಿಸಿತ್ತು. ಶ್ರೇಣಿ ಐಜಿ ಕಿರಣ್ ಎಸ್. ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಕುಮಾರ್ ಈ ತನಿಖಾ ತಂಡದ ಇತರ ಸದಸ್ಯರಾಗಿದ್ದಾರೆ.
ಜೂನ್ 23 ರಂದು ಸಲ್ಲಿಕೆಯಾಗಿದ್ದ ಪ್ರಾಥಮಿಕ ವರದಿಯ ಆಧಾರದ ಮೇಲೆ, ಟ್ರಸ್ಟ್ ಸದಸ್ಯ ಕೃಷ್ಣಮೋಹನ್ ನೀಡಿದ ದೂರಿನನ್ವಯ ಶ್ರೀ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಜೂನ್ 25 ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಅವಿನಾಶ್ ಶುಕ್ಲಾ, ಅನುಕಲ್ಪ ಮಿಶ್ರಾ, ಲವ್‌ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಮಾಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ್ ಶಂಕರ್ ಯಾದವ್ ಅಲಿಯಾಸ್ ತಿನ್ನು ಸೇರಿದಂತೆ 8 ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.
ಇದೀಗ ಸಲ್ಲಿಕೆಯಾಗಿರುವ ಅಂತಿಮ ವರದಿಯಲ್ಲಿ ಚಂಪತ್ ರೈ ಹಾಗೂ ಅನಿಲ್ ಮಿಶ್ರಾ ಅವರ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದ್ದು, ಅವರಿಗೆ ನಿರಾಳತೆ ಸಿಕ್ಕಂತಾಗಿದೆ.





Leave a comment