ದಾವಣಗೆರೆ: ಯುವಶಕ್ತಿಯೇ ರಾಷ್ಟ್ರದ ಶಕ್ತಿ ಎಂಬ ಸ್ವಾಮಿ ವಿವೇಕಾನಂದರ ಮಾತು ಇಂದಿಗೂ ಅತ್ಯಂತ ಪ್ರಸ್ತುತ. ವಾಸ್ತವವೂ ಹೌದು. ಒಂದು ದೇಶದ ಪ್ರಗತಿಯು ಆ ದೇಶದ ಯುವಜನತೆಯ ಕೈಯಲ್ಲಿರುವ ನಾಯಕತ್ವದ ಗುಣಗಳ ಮೇಲೆ ಅವಲಂಬಿತವಾಗಿರುತ್ತದೆ. ರಾಜಕಾರಣದಲ್ಲಿ ಇಂದು ನಾಯಕತ್ವ ಅತ್ಯಂತ ಪ್ರಮುಖವಾದದ್ದು. ಸಂಘಟನೆ, ಹಿಂದುತ್ವ, ನಿಸ್ವಾರ್ಥ ಸೇವೆ, ಜನಸೇವೆಯನ್ನೇ ಉಸಿರಾಗಿಸಿಕೊಂಡು ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವ ಯುವ ನಾಯಕರು, ಸಂಘಟನಾ ಚತುರರು ರಾಜನಹಳ್ಳಿ ಶಿವಕುಮಾರ್ ಅವರ ನಾಯಕತ್ವ ಎಲ್ಲರ ಮನ ಗೆದ್ದಿದೆ.
ಯುವಕರು, ಹಿರಿಯರು ಸೇರಿದಂತೆ ಎಲ್ಲಾ ವರ್ಗದವರ ಸೆಳೆಯುವಂಥ ನಾಯಕತ್ವ ಮೈಗೂಡಿಸಿಕೊಂಡವರು. ಇದೇ ಕಾರಣಕ್ಕೆ ಬಿಜೆಪಿಯಲ್ಲಿ ವಿವಿಧ ಹುದ್ದೆಗಳು ಅರಸಿ ಬಂದಿವೆ. ರಾಜ್ಯ ಘಟಕದಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು
ದುಡಿದ ಸೇವೆಗಾಗಿ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವೂ ಒಲಿದು ಬಂದಿತ್ತು. ಇಷ್ಟರ ಮಟ್ಟಿಗೆ ಬೆಳೆಯಲು ರಾಜನಹಳ್ಳಿ ಶಿವಕುಮಾರ್ ಅವರು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಅನುಭವಿಸಿರುವ ನೋವು, ಅವಮಾನ,
ನಿರಂತರ ಪ್ರಯತ್ನ, ಸತತ ಪರಿಶ್ರಮದ ಫಲವಾಗಿ ಇಂದು ದಾವಣಗೆರೆಯಲ್ಲಿ ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ರಾಜನಹಳ್ಳಿ ಶಿವಕುಮಾರ್ ಅವರ ಬಾಲ್ಯ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಕಲ್ಲುಮಣ್ಣಿನ ಹಾದಿಯಾಗಿತ್ತು. ಎಲ್ಲವನ್ನೂ ಮೀರಿ ಇಂದು ಜಿಲ್ಲಾ ಬಿಜೆಪಿ ಅಷ್ಟೇ ಅಲ್ಲ, ರಾಜ್ಯ ಬಿಜೆಪಿಯಲ್ಲಿಯೂ ಸೂಜಿಗಲ್ಲಿನಂತೆ ಸೆಳೆಯುವಷ್ಟರ ಮಟ್ಟಿಗೆ ಬೆಳೆದ ಹಿಂದಿದೆ ಅವಿರತ ಶ್ರಮದ ರೋಚಕ ಕಥೆ.
ಬಾಲ್ಯ ಜೀವನ:
ರಾಜನಹಳ್ಳಿ ಶಿವಕುಮಾರ್ ಅವರು ಹುಟ್ಟಿದ್ದು ಬೆಳೆದಿದ್ದು ದಾವಣಗೆರೆಯಲ್ಲಿ. ಆದರೆ ಮೂಲತಃ ಇವರ ತಂದೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯವರು. ಖ್ಯಾತ ವೈದ್ಯರೂ ಆದ ಬಡವರ ಡಾಕ್ಟರ್ ಎಂದೇ ಖ್ಯಾತರಾಗಿದ್ದ ಡಾ. ಎನ್. ಆರ್. ಹನುಮಂತಪ್ಪ ಮತ್ತು ಜಿ. ದುಗ್ಗಮ್ಮರ ದ್ವಿತೀಯ ಪುತ್ರ ರಾಜನಹಳ್ಳಿ ಶಿವಕುಮಾರ್. ಮೊದಲನೆಯವರು ರಾಜಶೇಖರ್. ಸದ್ಯ ಪೊಲೀಸ್ ಇಲಾಖೆಯಲ್ಲಿ ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಲ್ಯದಲ್ಲಿ ನಾಲ್ಕು ವರ್ಷಗಳ ಕಾಲ ರಾಜನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಆನಂತರ ದಾವಣಗೆರೆಯ ಬಾಪೂಜಿ ಹೈಸ್ಕೂಲ್ ನಲ್ಲಿ ಓದಿದರು. ಆರ್ಥಿಕ ಮುಗ್ಗಟ್ಟಿನಿಂದ ಕಾಲೇಜಿಗೆ ಹೋಗಲಾಗಲಿಲ್ಲ. ಆದರೆ ಕೈಹಿಡಿದದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಮೊದಲಿನಿಂದಲೂ ಅಂದರೆ 1994ರಲ್ಲಿಯೇ ಆರ್ ಎಸ್ ಎಸ್ ಶಾಖೆ ಸೇರಿದರು. ಸಂಘದ ಮೇಲೆ ಅಪಾರ ಪ್ರೀತಿ, ಹೇಳಿಕೊಡುತ್ತಿದ್ದ ಶಿಸ್ತು, ಬೆಳೆಸುತ್ತಿದ್ದ ನಾಯಕತ್ವ ಗುಣ, ಹಿಂದುತ್ವ ಕುರಿತ ವಿಚಾರಧಾರೆಯಿಂದ ಪ್ರೇರೇಪಿತರಾದವರು ರಾಜನಹಳ್ಳಿ ಶಿವಕುಮಾರ್ ಅವರು. ಆರ್ ಎಸ್ ಎಸ್ ನಿಷ್ಠಾವಂತ ಕಾರ್ಯಕರ್ತರಾದರು. ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಲು ಶುರು ಮಾಡಿದರು. ಬಿಜೆಪಿ ಪಕ್ಷದ ಪ್ರತಿಭಟನೆ, ಕಾರ್ಯಕ್ರಮಗಳು, ಸಭೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಅಂದಿನಿಂದಲೇ ರಾಜಕಾರಣಕ್ಕೆ ಬಂದು ಜನಸೇವೆ ಮಾಡಬೇಕೆಂಬ ಕನಸು ಕಂಡವರು.
ತಂದೆ ಹಾಕಿ ಕೊಟ್ಟ ಮಾರ್ಗದಲ್ಲಿ:
ತಂದೆ ಹಾಕಿ ಕೊಟ್ಟ ಮಾರ್ಗದಲ್ಲಿ ಜನಸೇವೆ ಮಾಡಲು ವಿದ್ಯಾಭ್ಯಾಸ ಇಲ್ಲದಿದ್ದರೇನೂ ರಾಜಕಾರಣದಲ್ಲಿ ಮಾಡಿ ತೋರಿಸಬಹುದು ಎಂಬುದನ್ನು ಬಲವಾಗಿ ನಂಬಿದ್ದವರು ರಾಜನಹಳ್ಳಿ ಶಿವಕುಮಾರ್ ಅವರು. ಈ ಕಾರಣಕ್ಕಾಗಿ ದೇಶಪ್ರೇಮ, ಹಿಂದುತ್ವ, ಸಂಘಟನೆಗೆ ಹೆಸರುವಾಸಿಯಾಗಿದ್ದ ಆರ್ ಎಸ್ ಎಸ್ ಕೈಬೀಸಿ ಕರೆಯಿತು. ಅಪ್ಪಿಕೊಂಡಿತು. ಅದನ್ನು ರಾಜನಹಳ್ಳಿ ಶಿವಕುಮಾರ್ ಅವರು ಅಷ್ಟೇ ನಿಷ್ಠೆಯಿಂದ ಅಪ್ಪಿಕೊಂಡು ಅಂದಿನಿಂದ ಇಂದಿವವರೆಗೆ ಪಾಲಿಸಿಕೊಂಡು ಬರುತ್ತಿದ್ದಾರೆ.
ತಂದೆ ಎಂಬಿಬಿಎಸ್ ವೈದ್ಯರು:
ರಾಜನಹಳ್ಳಿ ಶಿವಕುಮಾರ್ ಅವರ ತಂದೆ ಎನ್. ಆರ್. ಹನುಮಂತಪ್ಪ ಅವರು ಆಗಿನ ಕಾಲದಲ್ಲಿಯೇ ಎಂಬಿಬಿಎಸ್ ಪೂರೈಸಿ ವೈದ್ಯರಾಗಿದ್ದವರು. ಎಂದಿಗೂ ಹಣಕ್ಕಾಗಿ ಆಸೆ ಪಟ್ಟವರಲ್ಲ. ವೈದ್ಯ ವೃತ್ತಿಯನ್ನು ಸೇವೆಯಂತೆ ಪರಿಗಣಿಸಿ ಜನರಿಗೆ ಚಿಕಿತ್ಸೆ ನೀಡಿ ಬಡವರ ಡಾಕ್ಟರ್ ಎಂದೇ ಖ್ಯಾತಿ ಗಳಿಸಿದ್ದರು. ಹನುಮಂತಪ್ಪರ ತಂದೆ ತನ್ನ ಪುತ್ರ ಎಂಬಿಬಿಎಸ್ ಓದಬೇಕೆಂಬ ಕಾರಣಕ್ಕೆ ಆಗಿನ ಕಾಲದಲ್ಲಿಯೇ ಹತ್ತು ಎಕರೆ ಜಮೀನು ಮಾರಿ ವಿದ್ಯಾಭ್ಯಾಸ ಕೊಡಿಸಿದ್ದರು. ತಂದೆಯ ಆಸೆ ಈಡೇರಿಸಿದ್ದ ಹನುಮಂತಪ್ಪ ಅವರು ಬಡವರು, ದೀನದಲಿತರು ಸೇರಿದಂತೆ ಶೋಷಿತರು, ಸಮಾಜದ ಕೆಳವರ್ಗದವರಿಗೆ ಅತ್ಯಂತ ಕಡಿಮೆ ದರದಲ್ಲಿ ರಾಜನಹಳ್ಳಿಯಲ್ಲಿ ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಿ, ಉಚಿತವಾಗಿ ಔಷಧ ನೀಡಿ ಸೈ ಎನಿಸಿಕೊಂಡವರು.
ಹನುಮಂತಪ್ಪರ ಹೆಸರು ಚಿರಸ್ಥಾಯಿ:
ಸುಮಾರು ಐದು ವರ್ಷಗಳ ಕಾಲ ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸಿದ ಹನುಮಂತಪ್ಪರ ಸೇವೆ ಕಂಡ ಕೆಲವರು ಇದಕ್ಕೆ ಅಡ್ಡಿಪಡಿಸಿದರು. ಆ ನಂತರ ಆಸ್ಪತ್ರೆ ಮುಚ್ಚಲ್ಪಟ್ಟಿತು. ಆದರೂ ಉಸಿರು ಇರುವವರೆಗೆ ತನ್ನ ಕೈಯಲಾದಷ್ಟು ಸೇವೆ ಮಾಡಿದ್ದ
ಹನುಮಂತಪ್ಪರ ಹೆಸರು ಇಂದಿಗೂ ಚಿರಸ್ಥಾಯಿ. ತಂದೆ ನಿಧನರಾದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತದ್ದು ರಾಜನಹಳ್ಳಿ ಶಿವಕುಮಾರ್ ಅವರ ತಾಯಿ ದುಗ್ಗಮ್ಮರು ತನ್ನಿಬ್ಬರು ಮಕ್ಕಳ ಬದುಕು ರೂಪಿಸಲು ಕಷ್ಟಪಟ್ಟರು. ಅದರಂತೆ ರಾಜನಹಳ್ಳಿ ಶಿವಕುಮಾರ್ ರಾಜಕಾರಣದಲ್ಲಿ ಈಗ ಎತ್ತರಕ್ಕೆ ಬೆಳೆದಿದ್ದರೆ, ಸಹೋದರ ಪೊಲೀಸ್ ಇಲಾಖೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದಾರೆ.
ಚಿಕ್ಕವಯಸ್ಸಲ್ಲೇ ಬಿಜೆಪಿಯತ್ತ ಆಕರ್ಷಣೆ:
ಆಗಿನ್ನೂ ಮೀಸೆ ಮೂಡುವ ಸಮಯ. ಈ ವೇಳೆಯಲ್ಲೇ ಬಿಜೆಪಿಯತ್ತ ಆಕರ್ಷಣೆಗೊಳಗಾದ ರಾಜನಹಳ್ಳಿ ಶಿವಕುಮಾರ್ ಅವರು 1994ರಲ್ಲಿ ಪಕ್ಷದ ಪರ ಪ್ರಚಾರಕ್ಕೆ ಧುಮುಕಿದ್ದರು. ಆಗ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶಂಕರನಾರಾಯಣ ಅವರ ಎದುರಾಳಿ ಶಾಮನೂರು ಶಿವಶಂಕರಪ್ಪರಾಗಿದ್ದರೂ ಆಗಲೇ ಪಕ್ಷದ ಪಾಂಪ್ಲೆಟ್, ಬಾವುಟ ಹಿಡಿದು ಓಡಾಡಿದವರು. ಈ ಚುನಾವಣೆಯಲ್ಲಿ ಕೇವಲ ಒಂದು ಸಾವಿರ ಮತಗಳ ಅಂತರದಲ್ಲಿ ಅಷ್ಟೇ ಶಂಕರನಾರಾಯಣ ಅವರು ಸೋಲು ಕಂಡಿದ್ದರು. ರಾಜನಹಳ್ಳಿ ಶಿವಕುಮಾರ್ ಅವರಂಥ ಯುವಪಡೆಯು ಶಂಕರನಾರಾಯಣರ ಪರ ಕೆಲಸ ಮಾಡಿದ್ದರ ಫಲವಾಗಿ ಅಷ್ಟರ ಮಟ್ಟಿಗೆ ಹೋರಾಟ ನೀಡಲು ಸಾಧ್ಯವಾಗಿತ್ತು.
ಚುನಾವಣೆಯಲ್ಲಿ ಬಿಜೆಪಿ ಸೋತರೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತ್ತು. 1996ರಲ್ಲಿ ಯಶವಂತರಾವ್ ಜಾಧವ್ ಅವರು ನಗರಸಭೆಗೆ ಸ್ಪರ್ಧೆ ಮಾಡಿದಾಗ ಬಿಜೆಪಿ ಪರ ಪ್ರಚಾರ ನಡೆಸಿದರು. ಬಾವುಟ ಹಿಡಿದು ಪ್ರತಿ ಮನೆಮನೆಗೆ ತೆರಳಿ ಮತದಾರರ ಮನವೊಲಿಸಿದರು.
ಹಿಂದೂ ಸಂಘಟನೆಗಳಲ್ಲಿ ರಾಜನಹಳ್ಳಿ ಶಿವಕುಮಾರ್ ಛಾಪು:
ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡವರು. ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡರು. ಯುವಪಡೆಯನ್ನೇ ಕಟ್ಟಿದರು. ಯುವಕರು ಕಾಂಗ್ರೆಸ್, ಕಮ್ಯುನಿಷ್ಟ್ ಪಕ್ಷಗಳಿಂದ ಬಿಜೆಪಿಗೆ ಕರೆದುಕೊಂಡು ಬರುವಲ್ಲಿ ಪಾತ್ರ ವಹಿಸಿದವರಲ್ಲಿ ರಾಜನಹಳ್ಳಿ ಶಿವಕುಮಾರ್ ಕೂಡ ಒಬ್ಬರು.
ರಾಜನಹಳ್ಳಿ ಶಿವಕುಮಾರ್ ನಿರ್ವಹಿಸಿದ ಹುದ್ದೆಗಳು:
2003ರಲ್ಲಿ ಗಣೇಶಪೇಟೆಯ ಅಂದಿನ 10ನೇ ವಾರ್ಡ್ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಂದರೆ 23 ವರ್ಷಗಳ ಹಿಂದೆಯೇ ಹೊಣೆಗಾರಿಕೆ ದೊರೆತಿತ್ತು. ಉತ್ತಮ ಸಂಘಟನೆ ಮಾಡಿದ್ದರ ಫಲ ಎಂಬಂತೆ ಬಿಜೆಪಿ ನಗರ ಕಾರ್ಯದರ್ಶಿ ಹುದ್ದೆ ಅರಸಿ ಬಂದಿತ್ತು. ಆ ಬಳಿಕ ಎರಡು ಅವಧಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಹೋರಾಟ ಪ್ರಮುಖರಾಗಿ ಜವಾಬ್ದಾರಿ ಹೊತ್ತು ಸಮರ್ಥವಾಗಿ ನಿಭಾಯಿಸಿದ ಶ್ರೇಯ ಇವರದ್ದು.
ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆಯುವ ದಸರಾ ಶೋಭಾ ಯಾತ್ರೆಯ ಸಂಚಾಲಕನಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇಷ್ಟೆಲ್ಲಾ ಹೋರಾಟ, ಪಕ್ಷ ನಿಷ್ಠೆ, ಸಂಘಟನೆ ಮಾಡಿದ್ದ ರಾಜನಹಳ್ಳಿ ಶಿವಕುಮಾರ್ ಅವರಿಗೆ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ 2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನೀಡಲಾಗಿತ್ತು. ಈ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದ ಶ್ರೇಯ ರಾಜನಹಳ್ಳಿ ಶಿವಕುಮಾರ್ ಅವರಿಗೆ ಸಲ್ಲುತ್ತದೆ.
ಎರಡೂವರೆ ದಶಕದ ಸೇವೆ:
ಸುಮಾರು 25 ವರ್ಷಗಳಿಂದ ಸಂಘ ಪರಿವಾರ ಮತ್ತು ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ರಾಜನಹಳ್ಳಿ ಶಿವಕುಮಾರ್ ಅವರು ದಾವಣಗೆರೆ ಲೋಕಸಭೆಗೆ ನಡೆದ ಚುನಾವಣೆಗಳು, ದಾವಣಗೆರೆ ಉತ್ತರ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರ, ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.
ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರಿಗೆ ಆಪ್ತರಾಗಿರುವ ರಾಜನಹಳ್ಳಿ ಶಿವಕುಮಾರ್ ಅವರು ಎಂದಿಗೂ ವಿವಾದ ಮೇಲೆಳೆದುಕೊಂಡವರಲ್ಲ. ಹಾಗೆಂದ ಮಾತ್ರಕ್ಕೆ ಅವರ ತಂಟೆಗೆ ಬಂದವರನ್ನು ಸುಮ್ಮನೆ ಬಿಟ್ಟವರಲ್ಲ. ಹಿಂದುತ್ವ, ಪಕ್ಷಕ್ಕಾಗಿ ಸಮರ್ಪಣೆ ಮಾಡಿಕೊಂಡಿರುವ ರಾಜನಹಳ್ಳಿ ಶಿವಕುಮಾರ್ ಅವರ ನಾಯಕತ್ವ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಸೆಳೆದಿದೆ.
ಏನಂತಾರೆ ರಾಜನಹಳ್ಳಿ ಶಿವಕುಮಾರ್:
ಬಿಜೆಪಿ ಪಕ್ಷವು ನನಗೆ ಸ್ಥಾನಮಾನ, ಅಧಿಕಾರ, ಜವಾಬ್ದಾರಿ ನೀಡಿದೆ. ಹೋರಾಟ, ವ್ಯಕ್ತಿತ್ವ ರೂಪಿಸಿಕೊಳ್ಳಲು, ರಾಜಕಾರಣದಲ್ಲಿ ಜನರಿಗೆ ಚಿರಪರಿಚಿತವಾಗಲು ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ನಂಬಿಕೆಯೇ ಕಾರಣ. ತಂದೆಯವರು ವೈದ್ಯರಾಗಿ ಜನಸೇವೆ ಮಾಡಿದಂತೆ ನಾನೂ ಜನಸೇವೆಗೆಂದೇ ರಾಜಕಾರಣಕ್ಕೆ ಬಂದಿರುವೆ. ಇದುವರೆಗೆ ತನಗೆ ವಹಿಸಿದ ಜವಾಬ್ದಾರಿ ನಿಭಾಯಿಸುತ್ತೇನೆ. ಮುಂದೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯ, ಇದಕ್ಕಾಗಿ ಸಂಪೂರ್ಣ ಶ್ರಮ ಹಾಕುತ್ತೇನೆಂಬ ನಂಬಿಕೆ ಪಕ್ಷದ ವರಿಷ್ಠರಲ್ಲಿದೆ. ಯಾವ ಕೆಲಸ ಕೊಟ್ಟರೂ ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡುತ್ತೇನೆ ಎನ್ನುತ್ತಾರೆ ರಾಜನಹಳ್ಳಿ ಶಿವಕುಮಾರ್.
ಹೊಸತನವನ್ನು ಅಪ್ಪಿಕೊಳ್ಳುವ ತುಡಿತ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ಅವರಲ್ಲಿ ನಾಯಕತ್ವದ ಗುಣ ಬೆಳೆಸುವಂತೆ ಮಾಡಿದೆ. ಯುವ ನಾಯಕತ್ವದ ಹಾದಿ ಸುಗಮವಾಗಿಲ್ಲ ಎಂಬ ಅರಿವಿದ್ದರೂ ಅನುಭವದ ಆಧಾರದ ಮೇಲೆ ಕೈ ಹಿಡಿಯುತ್ತೆ ಎಂಬ ವಿಶ್ವಾಸ ಹೊಂದಿದ್ದರು. ದೂರದೃಷ್ಟಿತ್ವ. ಸಹಾನುಭೂತಿ, ಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಸ್ಪಂದಿಸುವ ಗುಣ ಇದ್ದದ್ದರಿಂದಲೇ ಅಧಿಕಾರವೂ ಸಿಕ್ಕಿತು. ಅಧಿಕಾರ, ಯಶಸ್ಸಿಗಿಂತ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದವರು. ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ರಾಜನಹಳ್ಳಿ ಶಿವಕುಮಾರ್ ಅವರಿಗೆ ರಾಜಕಾರಣದಲ್ಲಿ ಮತ್ತಷ್ಟು ಉನ್ನತ ಹುದ್ದೆಗಳು ಅರಸಿ ಬರಲಿ, ಜನಸೇವೆ ಮುಂದುವರಿಸಲಿ ಎಂಬುದು ಅವರ ಅಭಿಮಾನಿಗಳು, ಹಿತೈಷಿಗಳು, ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಭಿಮತ.
- BJP Karnataka
- Davanagere BJP Leader
- Davanagere Local News
- Davanagere-Harihara Urban Development Authority.
- DUDA Chairman
- Hindu Jagarana Vedike Davanagere
- Karnataka BJP Youth Leader
- Rajanahalli Shivakumar Biography
- Youth Leadership in Politics.
- ಕರ್ನಾಟಕ ರಾಜಕಾರಣ
- ಜಿಲ್ಲಾ ಬಿಜೆಪಿ ಯುವ ಮೋರ್ಚಾ
- ದಾವಣಗೆರೆ ಬಿಜೆಪಿ ನಾಯಕರು
- ದಾವಣಗೆರೆ ಸುದ್ದಿ
- ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ
- ದುಡಾ ಅಧ್ಯಕ್ಷರು
- ಯುವ ನಾಯಕತ್ವ. Rajanahalli Shivakumar
- ರಾಜನಹಳ್ಳಿ ಶಿವಕುಮಾರ್
- ರಾಜನಹಳ್ಳಿ ಹನುಮಂತಪ್ಪ
- ಹಿಂದುತ್ವ ಸಂಘಟನೆ















Leave a comment