ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧ ಪಕ್ಷಗಳ ವಿರುದ್ಧದ ವಾಗ್ದಾಳಿಗೆ ತೀಕ್ಷ್ಣ ತಿರುಗೇಟು ನೀಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ವಿದೇಶಿ ಬೆಂಬಲ ಹಾಗೂ ಸಹಾಯದಿಂದಲೇ ದೇಶದ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಿದ್ದಾರೆ ಮತ್ತು ಮುಂದುವರಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಧಮ್ ಇದ್ದರೆ ಯಾವುದೇ ವೇದಿಕೆಯಲ್ಲಿ, ಯಾವುದೇ ಸಮಯದಲ್ಲಿ ತನ್ನೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.
ಗುಜರಾತಿನ ಏಕತೆಯ ಪ್ರತಿಮೆ ಬಳಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಸಮಾರಂಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ವಿರೋಧ ಪಕ್ಷಗಳು ರಚನಾತ್ಮಕ ಪಾತ್ರ ನಿರ್ವಹಿಸುವ ಬದಲು ಅಭಿವೃದ್ಧಿಗೆ ಅಡ್ಡಿಪಡಿಸುತ್ತಿವೆ ಮತ್ತು ವಿದೇಶಿ ಹಾಗೂ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿವೆ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಎಕ್ಸ್ (ಟ್ವಿಟರ್) ಮೂಲಕ ಕಟುವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ಮೋದಿಜೀ, ದೇಶಕ್ಕೆ ಸುಳ್ಳು ಹೇಳುವುದನ್ನು ನಿಲ್ಲಿಸಿ. ನೀವು ವಿದೇಶಿ ಸಹಾಯದಿಂದ ಪ್ರಧಾನಿಯಾಗಿದ್ದೀರಿ ಮತ್ತು ವಿದೇಶಿ ಸಹಾಯದಿಂದಲೇ ಆ ಅಧಿಕಾರದಲ್ಲಿದ್ದೀರಿ” ಎಂದು ತಿವಿದಿದ್ದಾರೆ.
ವಿದೇಶಿ ಬೆಂಬಲ ಆರೋಪ: ಭಾರತದ ಸಂಪೂರ್ಣ ಆರ್ಥಿಕ ವ್ಯವಸ್ಥೆಯು ವಿದೇಶಿಯರ ನಿಯಂತ್ರಣದಲ್ಲಿದೆ ಹಾಗೂ ವಿದೇಶಿ ಸಾಮಾಜಿಕ ಜಾಲತಾಣಗಳು ಪ್ರಧಾನಿ ಮೋದಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿವೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ.
ಬಹಿರಂಗ ಚರ್ಚೆಗೆ ಸವಾಲು: ಈ ವಿಷಯದ ಕುರಿತು ಯಾವುದೇ ವೇದಿಕೆಯಲ್ಲಿ, ಯಾವುದೇ ಸಮಯದಲ್ಲಿ ಮುಖಾಮುಖಿ ಚರ್ಚೆ ನಡೆಸಲು ಸಿದ್ಧನಿದ್ದೇನೆ. ದಮ್ಮಿದ್ದರೆ ಚರ್ಚೆಗೆ ಬನ್ನಿ ಎಂದು ಪ್ರಧಾನಿಗೆ ಸವಾಲು ಹಾಕಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ: ತಮ್ಮ ಬಳಿ ಇರುವ ಮಾಹಿತಿಗೆ ಪ್ರಧಾನಿ ಮೋದಿ ಭಯಪಟ್ಟಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ.





Leave a comment