ಶಿವಮೊಗ್ಗ / ಸೊರಬ: ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ತೇವರತೆಪ್ಪ ಗ್ರಾಮದಲ್ಲಿ ರೈತರು ಸುಮಾರು 15 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ ಹಾಗೂ ಫಸಲು ನೀಡುತ್ತಿದ್ದ ನೂರಾರು ಅಡಿಕೆ ಮರಗಳನ್ನು ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ರೈತರ ಜೀವನಾಧಾರವಾದ ಅಡಿಕೆ ಮರಗಳನ್ನು ಕಡಿದು ಹಾಕಿರುವುದರಿಂದ ಸಂತ್ರಸ್ತ ಕುಟುಂಬಗಳಿಗೆ ಭಾರೀ ಆರ್ಥಿಕ ನಷ್ಟವುಂಟಾಗಿದೆ.
ಈ ಅನ್ಯಾಯವನ್ನು ಖಂಡಿಸಿ ಬಿಜೆಪಿ ಸೊರಬ ಮಂಡಲದ ವತಿಯಿಂದ ತೇವರತೆಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ (BY Raghavendra) ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದರು. ಪ್ರಕರಣದ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಡಿಕೆ ಮರಗಳ ತೆರವು ಖಂಡನೆ: 15 ವರ್ಷಗಳ ಕಾಲ ಬೆವರು ಸುರಿಸಿ ಬೆಳೆಸಿದ್ದ ಫಸಲು ನೀಡುವ ಅಡಿಕೆ ಮರಗಳನ್ನು ಯಾವುದೇ ಪೂರ್ವ ನೋಟಿಸ್ ನೀಡದೆ ತೆರವುಗೊಳಿಸಿರುವುದು ಅತ್ಯಂತ ಖಂಡನೀಯ.
ಉನ್ನತ ಮಟ್ಟದ ತನಿಖೆಗೆ ಒತ್ತಾಯ: ಘಟನೆಯ ಹಿಂದಿನ ಕಾರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ರೈತರಿಗೆ ಅನ್ಯಾಯ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ: ತೋಟ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಆಗಿರುವ ನಷ್ಟವನ್ನು ವೈಜ್ಞಾನಿಕವಾಗಿ ಅಂದಾಜಿಸಿ ತಕ್ಷಣವೇ ಪರಿಹಾರ ವಿತರಿಸಬೇಕು.
ಈ ಪ್ರತಿಭಟನೆಯಲ್ಲಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ, ಸೊರಬ ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಮತ್ತು ನೂರಾರು ರೈತರು ಉಪಸ್ಥಿತರಿದ್ದರು.





Leave a comment