ಬೆಂಗಳೂರು: ಅದು 2006ನೇ ಇಸವಿ. ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಯಲ್ಲಿ ನೆಟ್ಸ್ ಅಭ್ಯಾಸ ನಡೆಸುತ್ತಿದ್ದ ಭಾರತೀಯ ಆಟಗಾರರ ನಡುವೆ, ದಿನವಿಡೀ ಬಿಡುವಿಲ್ಲದೆ ಅತ್ತಿಂದಿತ್ತ ಓಡಾಡುತ್ತಾ ಚೆಂಡೆಸೆಯುತ್ತಿದ್ದ ಒಬ್ಬ ಸಣಕಲು ದೇಹದ ಹುಡುಗನಿದ್ದ. ಕ್ರಿಕೆಟ್ ಜಗತ್ತಿಗೆ ಸಂಪೂರ್ಣ ಅಪರಿಚಿತನಾಗಿದ್ದ ಆ ಹುಡುಗ, ಇಂದು ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಮುಖ ‘ಬ್ಯಾಕ್‌ಬೋನ್’ ಹಾಗೂ ವರ್ಲ್ಡ್ ಕ್ಲಾಸ್ ಥ್ರೋಡೌನ್ ಸ್ಪೆಷಲಿಸ್ಟ್. ಅವರೇ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ರಾಘವೇಂದ್ರ ದಿವಗಿ (ರಘು).
₹21 ಹಿಡಿದು ಮನೆ ಬಿಟ್ಟಿದ್ದ ರಾಘವೇಂದ್ರ: ಸ್ಮಶಾನದಲ್ಲೇ 4.5 ವರ್ಷ ವಾಸ!
ರಾಘವೇಂದ್ರ ಅವರ ಯಶೋಗಾಥೆ ಸುಲಭವಾಗಿ ಸಿಕ್ಕಿದ್ದಲ್ಲ. ಬಾಲ್ಯದಲ್ಲಿ ಕ್ರಿಕೆಟ್‌ನತ್ತ ತೀವ್ರ ಆಕರ್ಷಿತರಾಗಿದ್ದ ಅವರಿಗೆ, ಮನೆಯವರ ಬೆಂಬಲ ಸಿಗಲಿಲ್ಲ. ತಂದೆಯ ಎಚ್ಚರಿಕೆಯ ನಂತರ, ಕೈಯಲ್ಲಿ ಕೇವಲ ₹21 ಹಿಡಿದು ಕುಮಟಾದಿಂದ ಹುಬ್ಬಳ್ಳಿಗೆ ಬಂದಿಳಿದರು. ಬಸ್ ನಿಲ್ದಾಣ, ದೇವಸ್ಥಾನಗಳಲ್ಲಿ ದಿನ ದೂಡಿದ ಅವರು, ನಂತರ ಅನಿವಾರ್ಯವಾಗಿ ಹುಬ್ಬಳ್ಳಿಯ ಸ್ಮಶಾನದ ಪಾಳುಬಿದ್ದ ಕೊಠಡಿಯೊಂದರಲ್ಲಿ ಬಸದಿಯ ಹಳೆಯ ಚಾಪೆ ಹೊದ್ದು ಬೊಬ್ಬೆ ಹೊಡೆಯುವ ಚಳಿಯಲ್ಲಿ ಸುಮಾರು 4.5 ವರ್ಷಗಳ ಕಾಲ ವಾಸವಿದ್ದರು.
ಕ್ರಿಕೆಟರ್ ಆಗಬೇಕೆಂಬ ಕನಸು ಹೊತ್ತಿದ್ದಾಗ ಅವರ ಬಲಗೈ ಮೂಳೆ ಮುರಿದು, ಆಟಗಾರನಾಗುವ ಹಾದಿ ಮುಚ್ಚಿಹೋಯಿತು. ಆದರೆ ಕ್ರಿಕೆಟ್ ಅನ್ನೇ ಉಸಿರಾಗಿಸಿಕೊಂಡಿದ್ದ ರಾಘವೇಂದ್ರ, ಮೈದಾನ ತೊರೆಯಲಿಲ್ಲ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದು ಕರುನಾಡ ಆಟಗಾರರಿಗೆ ನೆಟ್ಸ್‌ನಲ್ಲಿ ಚೆಂಡೆಸೆಯುವ ಕೆಲಸ ಆರಂಭಿಸಿದರು. ಮಾಜಿ ವಿಕೆಟ್ ಕೀಪರ್ ತಿಲಕ್ ನಾಯ್ಡು ಮತ್ತು ಜವಗಲ್ ಶ್ರೀನಾಥ್ ಅವರ ಕಣ್ಣಿಗೆ ಬಿದ್ದ ರಾಘವೇಂದ್ರ, ಮುಂದೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನೆರವು ನೀಡಲು ಆರಂಭಿಸಿದರು.
ಮಾಸ್ಟರ್ ಬ್ಲಾಸ್ಟರ್ ಸಚಿನ್ ಗಮನ ಸೆಳೆದ ಶ್ರದ್ಧೆ:
ಬೆಂಗಳೂರಿನ ಎನ್‌ಸಿಎಗೆ ಸಚಿನ್ ತೆಂಡೂಲ್ಕರ್ ಬಂದಾಗಲೆಲ್ಲಾ ರಾಘವೇಂದ್ರ ಅವರ ಬದ್ಧತೆ ಮತ್ತು ಕಠಿಣ ಪರಿಶ್ರಮವನ್ನು ಗಮನಿಸುತ್ತಿದ್ದರು. 2 ಗಂಟೆ, 4 ಗಂಟೆ ಅಥವಾ ದಿನವಿಡೀ ಎಷ್ಟೇ ಆಯಾಸವಾದರೂ 150 km/h ವೇಗದಲ್ಲಿ ನಿರಂತರವಾಗಿ ಕರಾರುವಾಕ್ ಚೆಂಡೆಸೆಯುವ ಅವರ ಸಾಮರ್ಥ್ಯ ಸಚಿನ್ ಅವರಿಗೆ ಭಾರೀ ಮೆಚ್ಚುಗೆಯಾಯಿತು.
2011ರ ಏಕದಿನ ವಿಶ್ವಕಪ್ ವೇಳೆಗೆ ಸಚಿನ್ ಅವರ ನೆರವಿನಿಂದಲೇ ರಾಘವೇಂದ್ರ ಭಾರತೀಯ ಕ್ರಿಕೆಟ್ ತಂಡದ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ನೇಮಕಗೊಂಡರು. 2011ರ ಡಿಸೆಂಬರ್‌ನಲ್ಲಿ ಧೋನಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದಾಗ, ಆಸ್ಟ್ರೇಲಿಯಾ ಮಾಧ್ಯಮಗಳು ಈ ಕನ್ನಡಿಗನ ಪರಿಶ್ರಮವನ್ನು ಕಂಡು ಬೆರಗಾಗಿದ್ದವು.
ಟೀಮ್ ಇಂಡಿಯಾದಲ್ಲಿ 15 ವರ್ಷಗಳ ಐತಿಹಾಸಿಕ ಪಯಣ:
ಕಳೆದ 15 ವರ್ಷಗಳಲ್ಲಿ ರಾಘವೇಂದ್ರ ಭಾರತ ತಂಡದೊಂದಿಗೆ:
6 ಟಿ20 ವಿಶ್ವಕಪ್‌ಗಳು (2 ಬಾರಿಯ ಚಾಂಪಿಯನ್)
3 ಏಕದಿನ ವಿಶ್ವಕಪ್‌ಗಳು
2 ಚಾಂಪಿಯನ್ಸ್ ಟ್ರೋಫಿಗಳು
3 ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂ.ಎಸ್. ಧೋನಿ ಅವರಂತಹ ದಿಗ್ಗಜ ಆಟಗಾರರು ವಿದೇಶಿ ಪಿಚ್‌ಗಳಲ್ಲಿ ವೇಗದ ಬೌಲಿಂಗ್‌ಗೆ ಸುಲಭವಾಗಿ ಹೊಂದಿಕೊಳ್ಳಲು ರಾಘವೇಂದ್ರ ಅವರ ಥ್ರೋಡೌನ್ ಸೈಡ್‌ಆರ್ಮ್ ಬೌಲಿಂಗ್ ಪ್ರಮುಖ ಕಾರಣ. “ನೆಟ್ಸ್‌ನಲ್ಲಿ ರಘು ಅವರ 150 ಕಿ.ಮೀ ವೇಗದ ಎಸೆತಗಳನ್ನು ಎದುರಿಸಿದ ಮೇಲೆ, ಪಂದ್ಯದಲ್ಲಿ ಪ್ರಪಂಚದ ಅತ್ಯಂತ ವೇಗದ ಬೌಲರ್‌ಗಳೂ ಸಾಧಾರಣವಾಗಿ ಕಾಣಿಸುತ್ತಾರೆ” ಎಂದು ವಿರಾಟ್ ಕೊಹ್ಲಿ ಹಲವು ಬಾರಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಯಾವುದೇ ಪ್ರಚಾರದ ಹಂಬಲವಿಲ್ಲದೆ, ಪರದೆಯ ಹಿಂದೆ ನಿಂತು ಶ್ರದ್ಧೆ, ನಂಬಿಕೆ ಮತ್ತು ಕಠಿಣ ಪರಿಶ್ರಮದಿಂದ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ದಿವಗಿ ಅವರ ಕಥೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿದಾಯವಾಗಿದೆ.





Leave a comment