ಬೆಂಗಳೂರು: ರಾಜ್ಯದ ಜವಳಿ ಮತ್ತು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಕಾನೂನುಬಾಹಿರ ಕಲ್ಲು ಗಣಿಗಾರಿಕೆ ಮತ್ತು ನಿಯಮ ಉಲ್ಲಂಘನೆಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ₹3.52 ಕೋಟಿ ದಂಡ ವಿಧಿಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಈಗ ಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಏನ್ ಮಾಡ್ತಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಇವರಷ್ಟೇ ಅಲ್ಲದೆ, ಕಾಂಗ್ರೆಸ್ ಶಾಸಕ ಬಸವರಾಜ ಶಿವಣ್ಣನವರ ಕುಟುಂಬಸ್ಥರು ಸೇರಿದಂತೆ 46 ಕಲ್ಲು ಕ್ವಾರಿ ಗುತ್ತಿಗೆದಾರರಿಗೆ ಬರೋಬ್ಬರಿ ₹26.32 ಕೋಟಿ ದಂಡ ವಿಧಿಸಲಾಗಿದೆ. ಕೆಎಸ್‌ಆರ್‌ಎಸ್‌ಎಸಿ ಡ್ರೋನ್ ಸಮೀಕ್ಷೆ ಮತ್ತು ತನಿಖಾ ವರದಿಯಿಂದ ಕಾಂಗ್ರೆಸ್ ನಾಯಕರು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕಲ್ಲು ತೆಗೆದು, ಸರಕಾರಿ ಹಾಗೂ ಅಕ್ಕಪಕ್ಕದ ಜಮೀನುಗಳನ್ನು ಒತ್ತುವರಿ ಮಾಡಿ ಸ್ವಂತ ಜೇಬು ತುಂಬಿಸಿಕೊಂಡಿರುವುದು ಸ್ಪಷ್ಟವಾಗಿ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಿಎಂ ಡಿ. ಕೆ. ಶಿವಕುಮಾರ್ ಗೆ ನೇರ ಪ್ರಶ್ನೆಗಳನ್ನು ಆರ್. ಅಶೋಕ್ ಕೇಳಿದ್ದಾರೆ. ರಾಹುಲ್ ಗಾಂಧಿ ನಿಮ್ಮ ಸಂಪುಟದ ಸಚಿವರೇ ಬಹಿರಂಗವಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದು ಕಾನೂನು ಮುರಿಯುತ್ತಿರುವುದೇ ನೀವು ದೇಶದಾದ್ಯಂತ ಹೊಗಳಿ ಮುಗಿಲಿಗೆರಿಸುವ “ಕರ್ನಾಟಕ ಮಾಡೆಲ್” ಆಡಳಿತವೇ? ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ರುದ್ರಪ್ಪ ಲಮಾಣಿ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸುತ್ತೀರಾ ಅಥವಾ ಈ ರೀತಿಯ ಅಕ್ರಮ, ಅವ್ಯವಹಾರ ಮತ್ತು ಭ್ರಷ್ಟಾಚಾರವೇ ನಿಮ್ಮ ಸರ್ಕಾರದಲ್ಲಿ ಸಚಿವರಾಗಲು ಮುಖ್ಯ ಅರ್ಹತೆಯೇ? ಎಂದು ರಾಹುಲ್ ಗಾಂಧಿ ಹಾಗೂ ಡಿ. ಕೆ. ಶಿವಕುಮಾರ್ ಅವರಿಗೆ ಕೇಳಿದ್ದಾರೆ.
ಸ್ವತಃ ನಿಮ್ಮದೇ ಪಕ್ಷದ ರಾಜ್ಯ ಸರ್ಕಾರದ ಇಲಾಖೆಯೇ ಕ್ಯಾಬಿನೆಟ್ ಸಚಿವರಿಗೆ ₹3.52 ಕೋಟಿ ದಂಡದ ನೋಟಿಸ್ ನೀಡುತ್ತಿರುವಾಗ, ಈ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿದಿದೆ. ರಾಜ್ಯದ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿ ಕಾಂಗ್ರೆಸ್ ಹೈಕಮಾಂಡ್‌ಗೆ ಕಮಿಷನ್ ತಲುಪಿಸಲು ಇಡೀ ಆಡಳಿತ ಯಂತ್ರವನ್ನೇ ಎಟಿಎಂ ಸರ್ಕಾರವನ್ನಾಗಿ ಮಾಡಿಕೊಂಡಿದ್ದೀರಾ? ಎಂದು ಕೇಳಿದ್ದಾರೆ.
ಬೊಕ್ಕಸದ ಹಣ ಲೂಟಿ ಮಾಡುವುದರಿಂದ ಹಿಡಿದು ಕಲ್ಲು ಕ್ವಾರಿಗಳನ್ನು ಅಕ್ರಮವಾಗಿ ಒತ್ತುವರಿ ಮಾಡುವವರೆಗೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಲೂಟಿಕೋರರ ಅಡ್ಡಾವನ್ನಾಗಿ ಮಾಡಿದೆ. ಸಚಿವ ರುದ್ರಪ್ಪ ಲಮಾಣಿ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಮ್ಮ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಪ್ರತಿಯೊಬ್ಬ ಭ್ರಷ್ಟ ಕಾಂಗ್ರೆಸ್ ನಾಯಕರಿಗೆ ತಕ್ಕ ಶಾಸ್ತಿ ಮಾಡುವವರೆಗೂ ಬಿಜೆಪಿ ಕರ್ನಾಟಕ ವಿಶ್ರಮಿಸದು ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
- Haveri quarry illegal extraction.
- Karnataka Congress mining scam
- Karnataka illegal mining
- KSRSAC drone survey
- KSRSAC ಡ್ರೋನ್ ಸಮೀಕ್ಷೆ
- R Ashok allegations
- Rudrappa Lamani quarry fine
- Stone quarrying rules violation
- ಆರ್ ಅಶೋಕ್ ಆರೋಪ
- ಕರ್ನಾಟಕ ಅಕ್ರಮ ಗಣಿಗಾರಿಕೆ
- ಕರ್ನಾಟಕ ಕಾಂಗ್ರೆಸ್ ಭ್ರಷ್ಟಾಚಾರ ಆರೋಪ
- ಕಲ್ಲು ಕ್ವಾರಿ ಒತ್ತುವರಿ
- ಕಲ್ಲು ಗಣಿಗಾರಿಕೆ ನಿಯಮ ಉಲ್ಲಂಘನೆ.
- ರುದ್ರಪ್ಪ ಲಮಾಣಿ ದಂಡ






Leave a comment