SUDDIKSHANA KANNADA NEWS/ DAVANAGERE/ DATE:09-02-2024
ದಾವಣಗೆರೆ: ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಹಾಗೂ ವಂಚನೆ ಕುರಿತಂತೆ ನಾನು ಸುಳ್ಳು ಹೇಳುತ್ತೇನೆ ಎನ್ನುವುದಾದರೆ ರಾಜಕೀಯ ಬಿಟ್ಟುಬಿಡ್ತೀನಿ. ಮಾಜಿ ಸಿಎಂ ಯಡಿಯೂರಪ್ಪ ಸುಮ್ಮನಿದ್ದಾರೆ, ತಲೆ ಆಡಿಸುತ್ತಾರೆ ಎಂದರೆ ನಾವು ಹಾಗೆ ಮಾಡಲು ಆಗುತ್ತದೆಯಾ. ಅನ್ಯಾಯವಾದರೆ ಸಹಿಸಿಕೊಂಡು ಸುಮ್ಮನಿರಬೇಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.
ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ತೆರಳುವ ಮುನ್ನ ಹೆಲಿಪ್ಯಾಡ್ ನಲ್ಲಿ ಮಾಧ್ಯಮವದರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಹೇಳಿದ್ದಾರೆ ಅಂತಾ ನೀನು ಹೇಳ್ತಾ ಇರೋದು. ಅನ್ಯಾಯ ಆದರೆ ಪ್ರತಿಭಟಿಸಬಾರದಾ. ಯಡಿಯೂರಪ್ಪ ಪ್ರತಿಭಟಿಸಲಿಲ್ಲಾ, ಬಾಯಿ ಮುಚ್ಚಿಕೊಂಡು ಇದ್ದಾರೆ ಅಂತಾ ನಾವು ಬಾಯಿ ಮುಚ್ಚಿಕೊಂಡು ಇರಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.
ನಾವು ನೂರು ರೂಪಾಯಿ ತೆರಿಗೆ ಕೊಟ್ಟರೆ ನಮಗೆ ಬರುತ್ತಿರುವುದು ಕೇವಲ 12 ರಿಂದ 13 ರೂಪಾಯಿ ಮಾತ್ರ. ಅವ್ರು ಜೇಬಿನಿಂದ ಕೊಡುವುದಿಲ್ಲ. ಇಡೀ ದೇಶದಲ್ಲಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೂ
ವಂಚನೆ ಮಾಡಲಾಗುತ್ತಿದೆ. ನೀವು ಕನ್ನಡಿಗರು. ಇದನ್ನು ಒಪ್ಪಿಕೊಳ್ಳುತ್ತೀರಾ. ಪ್ರತಿಭಟಿಸಬೇಕಲ್ವಾ. ನಾನು ಸುಳ್ಳು ಹೇಳುತ್ತಿದ್ದೇನೆಂದು ಸಾಬೀತುಪಡಿಸಿದರೆ ರಾಜಕೀಯ ಬಿಡುತ್ತೇನೆ ಎಂದು ಸವಾಲು ಹಾಕಿದರು.
ಈ ವರ್ಷ ಕರ್ನಾಟಕದಲ್ಲಿ 4 ಕೋಟಿ 30 ಲಕ್ಷ ರೂಪಾಯಿಗೂ ಹೆಚ್ಚು ತೆರಿಗೆ ಹೆಚ್ಚು ಸಂಗ್ರಹವಾಗುತ್ತಿದೆ. ಆದ್ರೆ, ನಮಗೆ ಬರುತ್ತಿರುವುದು ತುಂಬಾನೇ ಕಡಿಮೆ. ರೈತರಿಗೆ 2 ಸಾವಿರ ರೂಪಾಯಿ ತಾತ್ಕಾಲಿಕ ಬರ ಪರಿಹಾರ ನೀಡಿದ್ದೇವೆ. 34 ಲಕ್ಷ
ರೈತರಿಗೆ 650 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರವು ಹಲವು ಯೋಜನೆಗಳಿಗೆ ಅನುದಾನ, ಹಣ ನೀಡುತ್ತಿಲ್ಲ. ಅವರೇ ಇಟ್ಟುಕೊಳ್ಳುತ್ತಿದ್ದಾರೆ. ಕರ್ನಾಟಕದ ಬಿಜೆಪಿ ಮುಖಂಡರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಯಡಿಯೂರಪ್ಪ, ಆರ್. ಅಶೋಕ, ಬಸವರಾಜ್ ಬೊಮ್ಮಾಯಿ, ಬಿ. ವೈ. ವಿಜಯೇಂದ್ರ ಅವರು ಈ ಬಗ್ಗೆ ಮಾತನಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಜೊತೆ ಮಾತನಾಡಲಿ. ಅದನ್ನು ಬಿಟ್ಟು ಕೇವಲ ಭಾಷಣ ಮಾಡುತ್ತಾರೆ
ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಮೇವು ಕೊಡುತ್ತಿದ್ದೇವೆ. 860 ಕೋಟಿ ರೂಪಾಯಿ ಎಲ್ಲಾ ಡಿಸಿಗಳ ಬಳಿ ಇದೆ. ಪ್ರತಿ ಜಿಲ್ಲೆಗೂ 25 ಕೋಟಿಯಿಂದ 30 ಕೋಟಿ ರೂಪಾಯಿ ಇದೆ. ಕುಡಿಯುವ ನೀರು,
ಮೇವಿಗೆ ಸಮಸ್ಯೆ ಆಗಬಾರದು, ಯಾರೂ ಗುಳೆ ಹೋಗಬಾರದು. ಈ ರೀತಿಯಲ್ಲಿ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಅಸಮಾಧಾನಗೊಂಡ ಸಚಿವರು ಸಭೆ ನಡೆಸಿರುವ ಕುರಿತಂತೆ ಮಾಹಿತಿ ಇಲ್ಲ. ಊಹಾಪೋಹ ಪತ್ರಿಕೋದ್ಯಮದ ಪ್ರಶ್ನೆಗಳಿಗೆ ಉತ್ತರಿಸಲು ಹೋಗಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಮಾಧ್ಯಮವದರ ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.
ಈ ವೇಳೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಚಿವ ನಾಗೇಂದ್ರ, ಜಿಲ್ಲಾಧಿಕಾರಿ ಎಂ. ವಿ. ವೆಂಕಟೇಶ್ ಮತ್ತಿತರರು ಹಾಜರಿದ್ದರು.