SUDDIKSHANA KANNADA NEWS/ DAVANAGERE/ DATE:24-12-2024
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಜೊತೆ ಒಳಒಪ್ಪಂದ ಮಾಡಿಕೊಂಡಿರುವ ಬಿಜೆಪಿ ನಾಯಕರ ಹೆಸರನ್ನು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಬಹಿರಂಗಪಡಿಸಬೇಕು ಎಂದು ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ನಡುವೆ ಹೊಂದಾಣಿಕೆ ರಾಜಕೀಯವಿದೆ ಎಂದು ಶಿವಗಂಗಾ ಬಸವರಾಜ್ ಹೇಳಿಕೆ ನೀಡಿದ್ದಾರೆ ಬಿಜೆಪಿ ಮುಖಂಡರ ಹೆಸರು ಹೇಳಿಲ್ಲ. ಬಸವರಾಜ್ ಶಿವಗಂಗಾ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಯಾಕೆ ಬದಲಾಯಿಸಬೇಕು ಎಂಬ ಬಗ್ಗೆ ಮಾಧ್ಯಮಗಳಿಗೆ ಹೇಳಿದ್ದಾರೆ. ಹಾಗಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರೇ ಆ ಪಕ್ಷದ ಮೇಲೆ ಇರುವ ಪ್ರಾಮಾಣಿಕತೆ ಮತ್ತು ಮಂತ್ರಿಯ ಒಳಪ್ಪಂದವನ್ನು ಖಂಡಿಸಿ ಧೈರ್ಯವಾಗಿ ಮಾತನಾಡಿರುವುದಕ್ಕೆ ಅಭಿನಂದನೆ ಮತ್ತು ಕಾಂಗ್ರೆಸ್ ಪಕ್ಷ ನಿಷ್ಠೆ , ಪ್ರಾಮಾಣಿಕತೆ ರೀತಿಯಲ್ಲೇ ಬಿಜೆಪಿಯ ಕಾರ್ಯಕರ್ತರು ಸಹ ಇದ್ದಾರೆ ಆದ್ದರಿಂದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರನ್ನು ದಾವಣಗೆರೆ ಜಿಲ್ಲೆಯ ಜನ ಅನುಮಾನದಿಂದ ನೋಡುವ ಹಾಗೆ ಮಾಡುವುದು ಬೇಡ. ಯಾರು ಕಾಂಗ್ರೆಸ್ಸಿನ ಮಂತ್ರಿಯ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಆದ್ದರಿಂದ ಅವರ ಹೆಸರುಗಳನ್ನು ಶಾಸಕರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯಲ್ಲೂ ಪಕ್ಷಕ್ಕೆ ದ್ರೋಹ ಬಗೆದು ನಾವೇ ಪ್ರಾಮಾಣಿಕರೆಂದು ತಮಗೆ ತಾವೇ ಶಬ್ಬಾಸ್ ಗಿರಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇವರ ಮುಖವಾಡವನ್ನ ಕಳಚಬೇಕಾಗಿದೆ. ಸತ್ಯವನ್ನು ಬಹಳ ದಿನಗಳ ಕಾಲ ಮುಚ್ಚಿಡಲಾಗದು. ಸುಳ್ಳಿಗೆ ಆಯಸ್ಸು ಕಮ್ಮಿ. ಎಂದಿದ್ದರೂ ಸತ್ಯಕ್ಕೆ ಜಯ.ಕಾಂಗ್ರೆಸ್ ಮುಖಂಡರಿರಲಿ ಬಿಜೆಪಿ ಮುಖಂಡರಲಿ ತಮ್ಮ ಸ್ವಂತ ಅಧಿಕಾರದ ಆಸೆಗೆ ಪಕ್ಷದ ತತ್ವ ಸಿದ್ಧಾಂತವನ್ನು ಬಲಿಕೊಟ್ಟವರ ನಿಜ ಬಣ್ಣವನ್ನ ಬಯಲು ಮಾಡಿ ಸಾರ್ವಜನಿಕವಾಗಿ ತಿಳಿಸಿ ಶಾಶ್ವತವಾಗಿ ಮನೆಗೆ ಕಳಿಸಬೇಕಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಅಣಬೇರು ಜೀವನಮೂರ್ತಿ, ಎ. ವೈ. ಪ್ರಕಾಶ್, ನೀಲಗುಂದ ರಾಜು, ಗೋವಿಂದರಾಜ್, ಟಿಂಕರ್ ಮಂಜಣ್ಣ, ಶಿವನಗೌಡ ಟಿ ಪಾಟೀಲ್, ಗುರು ಸೋಗಿ ಉಪಸ್ಥಿತರಿದ್ದರು.