SUDDIKSHANA KANNADA NEWS/ DAVANAGERE/ DATE:01-10-2024
ದಾವಣಗೆರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಕ್ಟೋಬರ್ 3 ರಂದು ಪಿಎಸ್ಐ ಪರೀಕ್ಷೆ ನಡೆಯಲಿದ್ದು ದಾವಣಗೆರೆ ನಗರದ 11 ಕೇಂದ್ರಗಳಲ್ಲಿ 6512 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು ಪರೀಕ್ಷೆಯಲ್ಲಿ ಕಟ್ಟೆಚ್ಚರ ವಹಿಸಿ ಯಾವುದೇ ದೂರು, ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಾದ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕ್ಟೋಬರ್ 3 ರಂದು ಪಿಎಸ್ಐ ಹುದ್ದೆಗಳ ಆಯ್ಕೆಗೆ 2 ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ. ನಂತರ ಮಧ್ಯಾಹ್ನ 12-30 ರಿಂದ 2ಗಂಟೆವರೆಗೆ 2 ನೇ ಅವಧಿಯ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕನಿಷ್ಠ ಎರಡು ಗಂಟೆಗೂ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಅಲ್ಲದೇ ಬೆಳಿಗ್ಗೆ 9-45ರ ನಂತರ ಯಾವುದೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಆವರಣವನ್ನು ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ತಿಳಿಸಿದರು.
ಮೊದಲನೆ ಪತ್ರಿಕೆಯ ನಂತರ ಎರಡನೇ ಪತ್ರಿಕೆ ಪ್ರಾರಂಭ ಅಗುವ ಮೊದಲು ಇರುವ ಮೂವತ್ತು ನಿಮಿಷಗಳ ಕಾಲಾವಧಿಯಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರ ಹೋಗಲು ಅನುಮತಿಸುವುದಿಲ್ಲ. ಅಭ್ಯರ್ಥಿಗಳು ತಮ್ಮೊಡನೆ ವೈದ್ಯಕೀಯ ಔಷಧಿ, ಮಾತ್ರೆಗಳನ್ನು ಮಾತ್ರ ತೆಗೆದುಕೊಂಡು ಹೋಗಬೇಕೆಂದು ಮಾಹಿತಿ ನೀಡಿದರು.
ಅಭ್ಯರ್ಥಿಯು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಮೊದಲ ತಪಾಸಣೆಗೆ ಒಳಗಾಗಬೇಕು, ಅಭ್ಯರ್ಥಿಯು ಕೇಂದ್ರದ ಆವರಣವನ್ನು ಪ್ರವೇಶಿಸಿದ ತಕ್ಷಣ, ಪೆಂಡಾಲಿನಲ್ಲಿ ಅವರು ತರುವ ವಸ್ತುಗಳನ್ನು ಇರಿಸಿಕೊಳ್ಳಲು ಮತ್ತು ತಪಾಸಣೆಗೆ ಒಳಗಾಗಲು ವ್ಯವಸ್ಥೆ ಮಾಡಬೇಕು, ಯಾವುದೇ ಕಾರಣಕ್ಕೆ ಪರೀಕ್ಷಾರ್ಥಿಗಳು ಒಮ್ಮೆ ಪೆಂಡಾಲ್ನೊಳಗೆ ತಮ್ಮ ವಸ್ತುಗಳನ್ನು ನೀಡಿದ ನಂತರ ಮತ್ತೆ ಮರಳಿ ಪಡೆಯಲು ಅನುಮತಿಸಬಾರದು. ಅಲ್ಲದೇ ಪರೀಕ್ಷೆ ಮುಗಿದ ನಂತರವೇ ಅವರ ವಸ್ತುಗಳನ್ನು ಮರಳಿ ಪಡೆಯಬೇಕು ಎಂದು ಹೇಳಿದರು.
ಅದರಲ್ಲೂ ಮುಖ್ಯವಾಗಿ ವಿರಾಮದ ಸಮಯದಲ್ಲಿ ಅವರಿಗೆ ಪ್ರತಿ ಅಭ್ಯರ್ಥಿಗಳಿಗೆ ಬಾಳೆಹಣ್ಣು ಮತ್ತು ಬಿಸ್ಕತ್ತು ಪ್ಯಾಕನ್ನು ಸರಬರಾಜು ಮಾಡಬೇಕು. ಪರೀಕ್ಷೆಯ ಕರ್ತವ್ಯಕ್ಕಾಗಿ ಒಬ್ಬ ಸ್ಕ್ವಾಡ್, ಒಬ್ಬ ವೀಕ್ಷಕ ಮತ್ತು ಒಬ್ಬ ಕಸ್ಟೋಡಿಯನ್ರನ್ನು ಗೊತ್ತುಪಡಿಸಲಾಗಿದೆ. ವಿರಾಮದ ವೇಳೆಯಲ್ಲಿಯೂ ಕೊಠಡಿ ಮೇಲ್ವಿಚಾರಕರು ಕೊಠಡಿಯಲ್ಲಿರಬೇಕು, ಯಾವುದೇ ಕಾರಣಕ್ಕೂ ರಿಲೀವರ್ ಇಲ್ಲದೇ ಕೊಠಡಿ ಬಿಡುವಂತಿಲ್ಲ ಎಂದು ತಿಳಿಸಿದರು.