SUDDIKSHANA KANNADA NEWS/ DAVANAGERE/ DATE:02-01-2025
ದಾವಣಗೆರೆ: ಸಚಿವ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಮತ್ತು ಬಿಜೆಪಿಗೆ ಸಿಂಹ ಸ್ವಪ್ನ. ಹಾಗಾಗಿ ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ.ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ದ್ವೇಷದಿಂದ ಬಿಜೆಪಿ ಮಾಡಿರುವ ಆರೋಪ ಅಷ್ಟೇ ಎಂದರು.
ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರನ ಡೆತ್ ನೋಟ್ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಯವರ ಹೆಸರಿಲ್ಲ. ಈ ಪ್ರಕರಣದಲ್ಲಿ ಅವರ ಪಾತ್ರವಾಗಲಿ, ಸಾಕ್ಷ್ಯವಾಗಲಿ ಇಲ್ಲ. ಆದ್ದರಿಂದ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿಯವರು ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ರಾಜ್ಯದ ಪೊಲೀಸರ ಬಗ್ಗೆ ಬಿಜೆಪಿಯವರಿಗೆ ನಂಬಿಕೆಯಿಲ್ಲವೇ? ಬಿಜೆಪಿಯವರು ಅಧಿಕಾರದಲ್ಲಿದ್ದಾಗ, ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ. ಆದ್ದರಿಂದ ಸಿಬಿಐಗೆ ತನಿಖೆ ವಹಿಸಬೇಕೆಂಬ ಬೇಡಿಕೆ ಮುಂದಿರಿಸಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ರೂಪಿಸಿರುವ ಸುಳ್ಳುಗಳ ಟೂಲ್ಕಿಟ್ ಬಹಳ ಸೊಗಸಾಗಿದೆ ಎಂದು ಕಿಡಿಕಾರಿದರು.
ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ಬಿಜೆಪಿಯ ಆಂದೋಲನ ಸಮಿತಿಯ ವಾಟ್ಸಪ್ ಚಾಟ್ಗಳ ಸ್ಟೀನ್ ಶಾಟ್ ಗಳೇ ಸಾಕ್ಷಿ. ರಾಜ್ಯದ ಜನಕ್ಕೆ ಗೊತ್ತಿದೆ ಬಿಜೆಪಿ ಎಸಗಿದ ದ್ರೋಹಕ್ಕೆ ಪ್ರಾಯಶ್ಚಿತ್ತ ಇಲ್ಲ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂಬ ಗೊಬೆಲ್ಸ್ ಸಿದ್ದಾಂತವನ್ನು ಮೆಚ್ಚಿ ನೆಚ್ಚಿಕೊಂಡಿರುವ ಬಿಜೆಪಿ ಮುಖಂಡರು ಮುಂದಿನ ದಿನಗಳಲ್ಲಿ ಗೊಬೆಲ್ಸ್ ಕೂಡಾ ನಾಚುವಂತ ಸುಳ್ಳುಗಾರರಾಗಿ ಹೊರಹೊಮ್ಮಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಬಡಿದಾಟವನ್ನು ಮರೆಮಾಚಲು ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟ ಎಂಬ ಹೊಸ ನಾಟಕ ಶುರು ಮಾಡಿಕೊಂಡಿದೆ. ಬಿಜೆಪಿಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಈಗ ಪ್ರಿಯಾಂಕ್ ಖರ್ಗೆ ಹೆಸರು ಅನಿವಾರ್ಯವಾಗಿದೆ, ಹಾಗಾಗಿ ಅವರ ವಿರುದ್ಧದ ಪಿತೂರಿಯ “ಟೂಲ್ ಕಿಟ್” ರೂಪಿಸಿದೆ. ರಾಜ್ಯ ಬಿಜೆಪಿ ನಾಯಕರು ಹೈಕಮಾಂಡಿಗೆ ತಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ತೋರಿಸಲು ಪ್ರಿಯಾಂಕ್ ಖರ್ಗೆ ಹೆಸರಿನಲ್ಲಿ ಹೋರಾಟದ ನಾಟಕ ಆರಂಭಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಹೆಸರಿನ ಮೂಲಕ ವಿಜಯೇಂದ್ರರವರು ಸಂಕ್ರಾಂತಿಯ ಡೆಡ್ ಲೈನ್ ದಾಟುವ ಪ್ರಯತ್ನ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಹಿಳೆಯರ ಅತ್ಯಾಚಾರಗೈದು, ದಲಿತರ ನಿಂದಿಸಿ, ಒಕ್ಕಲಿಗ ಮಹಿಳೆಯರನ್ನು ಮಂಚಕ್ಕೆ ಕರೆದ ಮುನಿರತ್ನರವರ ವಿರುದ್ಧ ಬಿಜೆಪಿ ಯಾಕೆ ಹೋರಾಟ ಮಾಡಲಿಲ್ಲ. ನೂರಾರು ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿದ ಪ್ರಜ್ವಲ್ ರೇವಣ್ಣನ ವಿರುದ್ಧ ಯಾಕೆ ಹೋರಾಟ ಮಾಡಲಿಲ್ಲ. ಇನ್ನು ಇಂತಹದೇ ಪ್ರಕರಣದಲ್ಲಿ ಈ ಹಿಂದೆ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆಯಲಾಗಿತ್ತು. ಈಶ್ವರಪ್ಪನ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ ಪರವಾಗಿ ತಮ್ಮದೇ ಪಕ್ಷದ ಈಶ್ವರಪ್ಪನ ವಿರುದ್ಧ ಯಾಕೆ ಹೋರಾಟ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಹಗರಣ, ಭೋವಿ ಅಭಿವೃದ್ಧಿ ನಿಗಮ ಹಾಗು ನೀರಾವರಿ ಹಗರಣದ ಬಗ್ಗೆ ಯಾಕೆ ಹೋರಾಟ ಮಾಡಲಿಲ್ಲ. ಈ ದೇಶಕ್ಕೆ ಅತ್ಯಮೂಲ್ಯ ಸಂವಿಧಾನ ಕೊಟ್ಟಂತಹ ಮಹಾನುಭಾವನ ಬಗ್ಗೆ ಕೆಟ್ಟದಾಗಿ
ಮಾತನಾಡಿರುವ ಅಮಿತ್ ಶಾರನ್ನು ಕಾಪಾಡಲು ಬಿಜೆಪಿ ಪಕ್ಷ ಈ ಹೋರಾಟ ಮಾಡುತ್ತಿದೆ. ಈ ಹೋರಾಟದಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಈ ಟೂಲ್ ಕಿಟ್ ಮೂಲಕ ಬಿಜೆಪಿ ಪಕ್ಷ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರ ಬಿ. ಎನ್. ವಿನಾಯಕ್, ಎಂ. ಲಿಯಾಖತ್ ಅಲಿ ಮತ್ತಿತರರು ಹಾಜರಿದ್ದರು.