SUDDIKSHANA KANNADA NEWS/ DAVANAGERE/ DATE:28-01-2025
ದಾವಣಗೆರೆ: ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ ಶಾಲಾ ಆವರಣಗಳು ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗದಂತೆ ರಕ್ಷಣೆ ಮಾಡಿಕೊಳ್ಳಬೇಕೆಂದು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಆವರಣದಲ್ಲಿ ಎಲ್ಲೆಂದರಲ್ಲಿ ಸಂಜೆಯ ವೇಳೆ ಮದ್ಯದ ಬಾಟಲಿಗಳು ಬಿದ್ದಿರುತ್ತವೆ. ಬೆಳಗ್ಗೆ ಶಾಲೆಗೆ ಆಗಮಿಸುವ ಮಕ್ಕಳು ಇದೆಲ್ಲವನ್ನು ಗಮನಿಸುವುದರಿಂದ ಅವರ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಪ್ರತಿ ಶಾಲೆಗೆ ಕಾಂಪೌಂಡ್ ಇರಬೇಕು. ಶಾಲೆಯ ಅಕ್ಕಪಕ್ಕದಲ್ಲಿರುವ ಅಂಗಡಿಗಳಲ್ಲಿ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ತಿನಿಸುಗಳು ಮತ್ತು ಇತರೆ ವಸ್ತುಗಳ ಮಾರಾಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂದರು.
ಗ್ರಾಮಾಂತರ ಪ್ರದೇಶಗಳಿಂದ ಪ್ರೌಢಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯದ ಅನಾನುಕೂಲದಿಂದ ಬೆಳಗಿನ ವೇಳೆ ನಡೆಸುವ ವಿಶೇಷ ತರಗತಿಗಳಿಗೆ ಆಗಮಿಸಲು ಸಮಸ್ಯೆ ಎದುರಾಗಿದೆ ಎಂದು ತಿಳಿಸಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಡಿಡಿಪಿಐಗೆ ತಿಳಿಸಿದರು.
ಒತ್ತುವರಿ ಕಡಿವಾಣಕ್ಕೆ ಕ್ರಮ; ನಗರ ಹಾಗೂ ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ ಹಾಗೂ ಚರಂಡಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡುವುದು ಕಂಡು ಬಂದಿದ್ದು ಸಾರ್ವಜನಿಕರಿಗೆ ಅನುಕೂಲವಾಗುವ
ನಿಟ್ಟಿನಲ್ಲಿ ಯಾರು ಸಹ ಚರಂಡಿ, ರಸ್ತೆಗಳನ್ನು ಒತ್ತುವರಿ ಮಾಡದಂತೆ ಮನೆ ನಿರ್ಮಾಣ ಮಾಡುವ ವೇಳೆ ಲೈಸೆನ್ಸ್ ನೀಡಬೇಕು. ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದರು.
ಓಬಜ್ಜಿಹಳ್ಳಿಯಲ್ಲಿ ರಸ್ತೆಗೆ ಮನೆ ನಿರ್ಮಾಣ ಮಾಡಿದ್ದರಿಂದ ಶವಸಂಸ್ಕಾರ ಮಾಡಲು ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದು ಪರಿಶೀಲನೆ ನಡೆಸಲು ತಿಳಿಸಿದರು.
ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಪೈಪ್‍ಲೈನ್ ಅಳವಡಿಸಲು ರಸ್ತೆ ಬಗೆಯುತ್ತಿರುವ ಬಗ್ಗೆ ದಾವಣಗೆರೆ ನಗರದಲ್ಲಿ ಪೈಪ್ ಗ್ಯಾಸ್ ಅಳವಡಿಕೆಗೆ ಹೊಸ ರಸ್ತೆಗಳನ್ನು ತುಂಡರಿಸಲಾಗುತ್ತಿದೆ. ಈ ಬಗ್ಗೆ ನಿಯಮಬದ್ದವಾಗಿ ಮಾಡಲು ಸಂಬಂಧಿಸಿದ ಇಂಜಿನಿಯರ್‍ಗಳು ಪರಿಶೀಲನೆ ನಡೆಸಬೇಕೆಂದರು.