SUDDIKSHANA KANNADA NEWS/ DAVANAGERE/ DATE:15-10-2024
ದಾವಣಗೆರೆ: ಅಕ್ಟೋಬರ್ 16ರಂದು ನಗರದಲ್ಲಿನ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಉಳಿವು, ಪೇಮೆಂಟ್ ಸೀಟ್ ರದ್ದುಪಡಿಸಬೇಕು ಎಂದು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ದಾವಣಗೆರೆ ಬಂದ್ ಕರೆ ನೀಡಿದ್ದು, ಈ ಸಂಬಂಧ ವಿವಿಧ ಸಂಘಟನೆಗಳು ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿರುವುದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಂದ್ ಕರೆ ನೀಡಿದ ಆಯೋಜಕರು ಪೊಲೀಸ್ ಇಲಾಖೆಯು ಸೂಚನೆ ನೀಡಿದೆ.
ಬಂದ್ ಕರೆ ಸಂಬಂಧ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ಒತ್ತಾಯಪೂರ್ವಕವಾಗಿ ಅಥವಾ ಬಲವಂತವಾಗಿ ಯಾವುದೇ ಶಾಲಾ-ಕಾಲೇಜು, ಸರ್ಕಾರಿ/ಖಾಸಗಿ ಸಂಸ್ಥೆಗಳು ಮತ್ತು
ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಂತಿಲ್ಲ, ಒಂದು ವೇಳೆ ಪ್ರಯತ್ನಿಸಿದ್ದಲ್ಲಿ ಕಾನೂನು ರೀತ್ಯ ಕ್ರಮವಹಿಸಲಾಗುವುದು.
ಸಾರ್ವಜನಿಕರ ಜನ-ಜೀವನಕ್ಕೆ, ವಾಹನ ಮತ್ತು ಆಸ್ತಿ-ಪಾಸ್ತಿ ನಾಶ ಮಾಡುವಂತಿಲ್ಲ. ಯಾವುದೇ ರಸ್ತೆ ತಡೆಗೆ ಹಾಗೂ ವಾಹನ ಅಡ್ಡಗಟ್ಟುವುದಕ್ಕೆ ಅವಕಾಶ ಇಲ್ಲ ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವಂತಿಲ್ಲ. ಒಂದು ವೇಳೆ ಪ್ರಯತ್ನಿಸಿದ್ದಲ್ಲಿ ಕ್ರಮ ಖಚಿತ. ಯಾವುದೇ ಕಾರಣಕ್ಕೂ ತುರ್ತು ಸೇವೆಗಳಿಗೆ ಮತ್ತು ಅಗತ್ಯ ವಸ್ತುಗಳ ಸಾಗಾಣಿಕೆ ಅಡ್ಡಿಪಡಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಟೈಯರ್ಗಳನ್ನು ಹಾಕಿ ಹಚ್ಚಲು ಮತ್ತು ಯಾವುದೇ ಪ್ರತಿಕೃತಿಗಳನ್ನು ದಹನ ಮಾಡಲು ಅವಕಾಶ ಇಲ್ಲ. ಬಂದ್ ಹೆಸರಿನಲ್ಲಿ ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಂಡರೆ ಅವರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪೋಸ್ಟ್ ಗಳನ್ನು ಹಾಕುವುದಾಗಲೀ ಹಾಗೂ ಶೇರ್ ಮಾಡುವುದಾಗಲೀ ಕಂಡು ಬಂದರೆ
ಸೂಕ್ತ ಕಾನೂನು ಕ್ರಮ ಕೈಗೊಳ್ಳಾಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಹಾಗೂ ಸೌಹಾರ್ಧಯುತವಾಗಿ ಪ್ರತಿಭಟನೆ ನಡೆಸಬೇಕು. ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ. ಸ್ಥಳೀಯ ಪೊಲೀಸ್ ಠಾಣೆ/ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಮಾಹಿತಿ ನೀಡಿ.
ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ವತಿಯಿಂದ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಸಶಸ್ತ್ರ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.