SUDDIKSHANA KANNADA NEWS/ DAVANAGERE/ DATE:28-02-2024
ದಾವಣಗೆರೆ: ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾಸೀರ್ ಅಹ್ಮದ್ ಜಯಶಾಲಿಯಾದ ಬಳಿಕ ಪಾಕ್ ಜಿಂದಾಬಾದ್ ಘೋಷಣೆಯು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿ, ಕೋಲಾಹಲಕ್ಕೆ ಕಾರಣವಾಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ಯುದ್ಧ ನಡೆದು, ಮೇಯರ್ ಐದು ನಿಮಿಷ ಸಭೆ ಮುಂದೂಡಿದ ಪ್ರಸಂಗ ಜರುಗಿತು.
ಸಭೆಗೆ ಮುನ್ನವೇ ಕೈಗೆ ಕಪ್ಪು ಬಟ್ಟೆ ಧರಿಸಿ ಬಿಜೆಪಿ ಸದಸ್ಯರು ಆಗಮಿಸಿದ್ದರು. ನಾಡಗೀತೆ, ರಾಷ್ಟ್ರಗೀತೆ ಹಾಡು ಮುಗಿಯುತ್ತಿದ್ದಂತೆಯೇ ಪಾಕ್ ಜಿಂದಾಬಾದ್ ಘೋಷಣೆ ಕೂಗಿದ್ದು, ಖಂಡನಾ ನಿರ್ಣಯ ತೆಗೆದುಕೊಳ್ಳಬೇಕು ಎಂದು ಪಟ್ಟುಹಿಡಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರಾದ ಎ. ನಾಗರಾಜ್ ಹಾಗೂ ಗಡಿಗುಡಾಳ್ ಮಂಜುನಾಥ್ ಅವರು, ಈ ಪ್ರಕರಣ ಇನ್ನು ತನಿಖಾ ಹಂತದಲ್ಲಿದೆ. ಈಗ ಖಂಡನಾ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದ್ರು. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿತು. ಈ ವೇಳೆ ದೇಶದ್ರೋಹಿಗಳ ಬೆಂಬಲಿಸುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ನಾಡಗೀತೆ, ರಾಷ್ಟ್ರಗೀತೆ ಹಾಡುವಾಗ ಕೈಗೆ ಕಪ್ಪು ಬಟ್ಟೆ ಧರಿಸಿದ್ದ ಬಿಜೆಪಿಗರು ರಾಷ್ಟ್ರಗೀತೆ ಅಪಚಾರ ಎಸಗಿದ್ದಾರೆ ಧಿಕ್ಕಾರ ಎಂದು ಹೇಳಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷದ ಸದಸ್ಯರು ಪರಸ್ಪರ ಧಿಕ್ಕಾರ ಕೂಗಿದರು.
ಮೇಯರ್ ಮುಂಭಾಗದಲ್ಲಿ ಬಂದು ಎರಡೂ ಪಕ್ಷಗಳ ಸದಸ್ಯರು ಮಾತಿನ ಚಕಮಕಿ ಜೋರಾಗುತ್ತಿದ್ದಂತೆ ಏನೂ ಕೇಳಿಸುತ್ತಿರಲಿಲ್ಲ. ಈ ವೇಳೆ ಮೇಯರ್ ಐದು ನಿಮಿಷ ಸಭೆ ಮುಂದೂಡಿದರು. ಸಭೆ ಮತ್ತೆ ಆರಂಭವಾಗುತ್ತಿದ್ದಂತೆ ಆರಂಭದಲ್ಲಿ ಈ ವಿಷಯ ಪ್ರಸ್ತಾಪವಾಯಿತು. ಯಾರೇ ತಪ್ಪು ಮಾಡಿದ್ದರೂ
ತಪ್ಪೇ. ಈ ನೆಲದ ಅನ್ನ, ನೀರು ಕುಡಿದವರು ಪಾಕಿಸ್ತಾನಕ್ಕೆ ಜೈ ಎಂಬ ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧ. ಗುಂಡಿಟ್ಟು ಹೊಡೆಯಲಿ ಎಂದು ಕೆ. ಚಮನ್ ಸಾಬ್ ಹೇಳಿದರು.
ರಾಜ್ಯಸಭೆ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಬಿಜೆಪಿಯವರೇ ಪಿತೂರಿ ನಡೆಸಿರಬಹುದು ಎಂಬ ಅನುಮಾನವೂ ಮೂಡುತ್ತದೆ ಎಂದು ಹೇಳಿದರು. ಈ ವೇಳೆ ಬಿಜೆಪಿ ಸದಸ್ಯರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವವರಿಗೆ ಆಡಳಿತ ಪಕ್ಷ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಕೆಂಡಮಂಡಲರಾದರು. ಬಳಿಕ ಆಡಳಿತ ಪಕ್ಷದ ಎ. ನಾಗರಾಜ್, ಚಮನ್ ಸಾಬ್ ಅವರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದೇ ಆಗಿದ್ದರೆ ನಮ್ಮದು ಧಿಕ್ಕಾರ.. ಧಿಕ್ಕಾರ. ಕಾನೂನು ಕ್ರಮ ಆಗಲಿ. ಇದಕ್ಕೆ ನಮ್ಮ ಬೆಂಬಲ ಇದೆ. ದೇಶದ್ರೋಹಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದಂತೆ ಎಲ್ಲರೂ ಸುಮ್ಮನಾದರು.
ವಿದ್ಯಾರ್ಥಿಭವನದ ಬಳಿ ಇರುವ ಭರಣಿ ಹೊಟೇಲ್ ನಿಂದ ತ್ಯಾಜ್ಯ ಬರುತ್ತಿದೆ. ಕಡಿವಾಣ ಹಾಕುವಂತೆ ಎಷ್ಟೇ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ಇದೇ ರೀತಿಯಲ್ಲಿ ಹಲವು ಹೊಟೇಲ್, ರೆಸ್ಟೋರೆಂಟ್ ಗಳು ಇವೆ. ಯಾಕೆ ಕ್ರಮ ಆಗುತ್ತಿಲ್ಲ ಎಂದು ಅಬ್ದುಲ್ ಲತೀಫ್ ಪ್ರಶ್ನಿಸಿದರು. ಈ ವೇಳೆ ಆಯುಕ್ತರು ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರಲ್ಲದೇ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆಗೆ ಸಂಬಂಧಿಸಿದ ಜಾಗಗಳ ಒತ್ತುವರಿಯಾಗಿರುವ ಕುರಿತಂತೆ ಈ ಹಿಂದೆಯೇ ಗಮನಕ್ಕೆ ತರಲಾಗಿದೆ. ಪ್ರತಿ ವಾರ್ಡ್ ಗೂ ಹೋಗಿ ಭೇಟಿ ನೀಡಿ ಪರಿಶೀಲಿಸಬಹುದು. ಆಸ್ತಿ ಮಾರಾಟ ಮಾಡಿದ ಬಳಿಕವೂ ಇ-ಸ್ವತ್ತು, ಖಾತೆ ಬದಲಾವಣೆ ಮಾಡಿಕೊಡಲು ಜನರನ್ನು ಅಲೆದಾಡಿಸಲಾಗುತ್ತಿದೆ. ಒಮ್ಮೆ ಎಲ್ಲಾ ದಾಖಲಾತಿ ಕೊಟ್ಟು ಇ-ಆಸ್ತಿ, ಇ-ಸ್ವತ್ತು ಮಾಡಿಸಿರುತ್ತಾರೆ. ಪದೇ ಪದೇ ದಾಖಲಾತಿ ಕೇಳಿ ಜನರಿಗೆ ತೊಂದರೆ ಕೊಡುವುದು ನಿಲ್ಲಬೇಕು ಎಂದು ಪ್ರಸನ್ನಕುಮಾರ್ ಆಗ್ರಹಿಸಿದರು.
ಸಭೆಯಲ್ಲಿ ಮೇಯರ್ ವಿನಾಯಕ್ ಪೈಲ್ವಾನ್, ಉಪಮೇಯರ್ ಯಶೋಧಾ ಸೇರಿದಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಹಾಜರಿದ್ದರು.