SUDDIKSHANA KANNADA NEWS/ DAVANAGERE/ DATE:28-02-2024
ದಾವಣಗೆರೆ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ರಾಷ್ಟ್ರದ್ರೋಹಿಗಳ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತು.
ಎಸ್. ನಿಜಲಿಂಗಪ್ಪ ಬಡಾವಣೆಯ ಜವಾನ್ ಸ್ಮಾರಕ ಉದ್ಯಾನವನದ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಅಲ್ಲಿಂದ ಕಾಂಗ್ರೆಸ್ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ಸಮೀಪ ಪ್ರತಿಭಟನಾಕಾರರ ವಶಕ್ಕೆ ಪಡೆದರು. ಆ ಬಳಿಕ ಬಿಡುಗಡೆಗೊಳಿಸಿದರು.
ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿರುವುದು ದೇಶ ವಿರೋಧಿ ಕೃತ್ಯ. ದೇಶದ್ರೋಹಿ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್, ಕಾಂಗ್ರೆಸ್ ಪಕ್ಷದ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ದೇಶ ವಿರೋಧಿ ಕೃತ್ಯ. ದೇಶದ್ರೋಹಿ ಘೋಷಣೆ ಕೂಗಿದವರನ್ನು ಬಂಧಿಸಬೇಕು. ಇನ್ನೂ ಇದನ್ನು ಪ್ರಶ್ನಿಸಿದ ಮಾಧ್ಯಮದವರನ್ನು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಾಸೀರ್ ಹುಸೇನ್ ಮಾಧ್ಯಮದವರನ್ನು ಗದರಿಸಿ ಅಸಭ್ಯ ವರ್ತಿಸಿರುವುದು ಸರಿಯಲ್ಲ. ಇದು ಅನಾಗರಿಕ ವರ್ತನೆ ತೋರುತ್ತದೆ ಎಂದು ಕಿಡಿಕಾರಿದರು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ , ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾರಕ ಕಾಯಿಲೆ ಇದ್ದಂತೆ. ಅದರಲ್ಲೂ ದೇಶ ದ್ರೋಹಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಇಂತಹ ಖದೀಮರು ಕರ್ನಾಟಕದಿಂದ ಆಯ್ಕೆ ಆಗಿರುವುದು ಇಡೀ ಕನ್ನಡ ನಾಡಿನ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ತಕ್ಷಣ ಕಾಂಗ್ರೆಸ್ ಪಕ್ಷ ಇಂತಹ ದೇಶದ್ರೋಹಿ ಚಟುವಟಿಕೆಗಳ ಬಗ್ಗೆ ತನ್ನ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಬಿಜೆಪಿ ಎಸ್ಟಿ ಘಟಕದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಾಯಕೊಂಡ ಬಿಜೆಪಿ ಯುವ ಮುಖಂಡ ಜಿ.ಎಸ್.ಶ್ಯಾಮ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಬಿಜೆಪಿ ಜಿಲ್ಲಾ ಮಾಧ್ಯಮ್ ಪ್ರಮುಖ್ ಹೆಚ್. ಪಿ. ವಿಶ್ವಾಸ್, ಎಸ್.ರಮೇಶ್ ನಾಯ್ಕ, ಟಿಪ್ಪು ಸಾಬ್, ಪಿ. ಸಿ. ಶ್ರೀನಿವಾಸ್, ಧನುಷ್, ಕಿಶೋರ್ ಕುಮಾರ್, ಅತಿಥ್ ಅಂಬರಕರ್, ನಾಸೀರ್ ಅಹಮದ್, ನಂದಕುಮಾರ್, ಶಿವಪ್ರಕಾಶ್, ರಾಜೇಶ್ವರಿ, ಟಿಂಕರ್ ಮಂಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.