ಬುಲಂದ್‌ಶಹರ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಜಿನಾಮಾಯಿ ಗ್ರಾಮದಲ್ಲಿ ರಾತ್ರಿ ವೇಳೆ ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಬಂದ 28 ವರ್ಷದ ಯುವಕ ಪುಷ್ಪೇಂದ್ರ ಎಂಬಾತನನ್ನು ಮಹಿಳೆಯ ಪತಿ ಮತ್ತು ಆಕೆಯ ಚಿಕ್ಕಪ್ಪ ಸೇರಿ ದೊಣ್ಣೆಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬುಲಂದ್‌ಶಹರ್‌ನ ಜಿನಾಮಾಯಿ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ರಕ್ತಸಿಕ್ತ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಪುಷ್ಪೇಂದ್ರ ಎಂಬ ಯುವಕ ರಾತ್ರಿಯ ವೇಳೆ ಗ್ರಾಮದ ವಿವಾಹಿತ ಮಹಿಳೆಯ ಮನೆಗೆ ತೆರಳಿದ್ದಾಗ ಆಕೆಯ ಪತಿ ಮತ್ತು ಚಿಕ್ಕಪ್ಪ ಆತನನ್ನು ತಡೆದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಪುಷ್ಪೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಂಗಳವಾರ ಬೆಳಿಗ್ಗೆ ಘಟನೆಯ ಕುರಿತು ಮಾಹಿತಿ ತಿಳಿದ ತಕ್ಷಣವೇ ಅನೂಪ್‌ಶಹರ್ ಸರ್ಕಲ್ ಆಫೀಸರ್ ಹಾಗೂ ಛತಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಫೋರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಈ ಸಂಬಂಧ ಗ್ರಾಮೀಣ ಎಸ್ಪಿ ಅಂತರಿಕ್ಷ್ ಜೈನ್ ಮಾತನಾಡಿ, “ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ” ಎಂದು ತಿಳಿಸಿದ್ದಾರೆ.





Leave a comment