ಕೃಷ್ಣನಗರ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರಿಗೆ ತಮ್ಮದೇ ಸ್ವಕ್ಷೇತ್ರವಾದ ಕೃಷ್ಣನಗರದ ಚಾಪ್ರಾ ಪ್ರದೇಶದಲ್ಲಿ ತೀವ್ರ ಕಪ್ಪು ಬಾವುಟ ಪ್ರತಿಭಟನೆ ಹಾಗೂ ‘ಗೋ ಬ್ಯಾಕ್’ ಘೋಷಣೆಗಳ ಬಿಸಿ ತಟ್ಟಿದೆ.
ಚಾಪ್ರಾದಲ್ಲಿ ನಡೆದ ಪಕ್ಷದ ಸಾಂಸ್ಥಿಕ ಕಾರ್ಯಕರ್ತರ ಸಭೆ ಮುಗಿಸಿ ಹೊರಬರುತ್ತಿದ್ದ ವೇಳೆ ಪ್ರತಿಭಟನಾಕಾರರ ಗುಂಪು ಮಹುವಾ ಅವರ ವಾಹನವನ್ನು ಸುತ್ತುವರೆದು ಆಕ್ರೋಶ ವ್ಯಕ್ತಪಡಿಸಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿ ಭದ್ರತೆ ಒದಗಿಸಿದರು. ಈ ಘಟನೆಯು ಟಿಎಂಸಿ ಬಂಡಾಯ ಶಾಸಕ ಜಾಬರ್ ಶೇಖ್ ಮತ್ತು ಸಂಸದೆ ಮಹುವಾ ಮೊಯಿತ್ರಾ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ.
ಕಾರ್ಯಕರ್ತರ ಸಭೆ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿರುವ ಮಹುವಾ ಮೊಯಿತ್ರಾ, ಈ ಪ್ರತಿಭಟನೆಯ ಹಿಂದೆ ಬಂಡಾಯ ಶಾಸಕ ಜಾಬರ್ ಶೇಖ್ ಹಾಗೂ ಬಿಜೆಪಿ ಬೆಂಬಲಿಗರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಪಕ್ಷದ ಚಿಹ್ನೆಯಿಂದ ಗೆದ್ದು ವಿರೋಧಿಗಳ ಜತೆ ಕೈಜೋಡಿಸಿದವರನ್ನು “ದ್ರೋಹಿಗಳು” ಎಂದು ಕರೆದಿರುವ ಅವರು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಪಂಚಾಯತ್ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಶಾಸಕ ಜಾಬರ್ ಶೇಖ್, “ಎರಡು ಬಾರಿ ಸಂಸದೆಯಾಗಿದ್ದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ” ಎಂದಿದ್ದಾರೆ. ಸ್ಥಳೀಯ ನಿವಾಸಿಗಳು ಹಾಗೂ ಬಿಜೆಪಿ ನಾಯಕರು ಮಾತನಾಡಿ, ಕ್ಷೇತ್ರದಲ್ಲಿ ಹೆಚ್ಚುತ್ತಿರುವ ರಾಜಕೀಯ ಅಶಾಂತಿ ಹಾಗೂ ಸಂಸದೆ ಈ ಹಿಂದೆ ಹಿಂದೂ ದೇವತೆಗಳ ಕುರಿತು ನೀಡಿದ್ದ ಹೇಳಿಕೆಗಳ ವಿರುದ್ಧ ಈ ಸ್ವಯಂಪ್ರೇರಿತ ಪ್ರತಿಭಟನೆ ನಡೆದಿದೆ ಎಂದು ತಿಳಿಸಿದ್ದಾರೆ.





Leave a comment