ನವದೆಹಲಿ: ಭಾರತೀಯ ಪ್ರತ್ರಿರಕ್ಷಣಾ ರಂಗದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಭಾರತೀಯ ವಾಯುಪಡೆಯ (IAF) ಹಿರಿಯ ಅಧಿಕಾರಿಯಾಗಿರುವ ಶಕ್ತಿ ಶರ್ಮಾ ಅವರು ‘ಏರ್ ವೈಸ್ ಮಾರ್ಷಲ್’ (Air Vice Marshal) ಶ್ರೇಣಿಗೆ ಬಡ್ತಿ ಹೊಂದುವ ಮೂಲಕ, ಭಾರತೀಯ ತ್ರಿವಿಧ ಪಡೆಗಳಲ್ಲಿ ಈ ಹುದ್ದೆಗೇರಿದ ಮೊದಲ ವೈದ್ಯಕೀಯೇತರ (non-medical) ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೆಪ್ಟೆಂಬರ್ 1, 2026 ರಂದು ನವದೆಹಲಿಯ ಏರ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಅವರು ಸಹಾಯಕ ವಾಯುಪಡೆ ಮುಖ್ಯಸ್ಥರಾಗಿ (ಶಿಕ್ಷಣ ವಿಭಾಗ – Education Branch) ಅಧಿಕಾರ ವಹಿಸಿಕೊಂಡರು.
ಮೂಲತಃ ಶಿಕ್ಷಣ ವಿಭಾಗದ ಅಧಿಕಾರಿ:
ಶಕ್ತಿ ಶರ್ಮಾ ಅವರು 1994 ರ ಜೂನ್ 18 ರಂದು ಭಾರತೀಯ ವಾಯುಪಡೆಯ ಶಿಕ್ಷಣ ವಿಭಾಗಕ್ಕೆ ಸೇರ್ಪಡೆಗೊಂಡಿದ್ದರು. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಸೇವಾವಧಿಯಲ್ಲಿ ಅವರು ತರಬೇತಿ ಸಂಸ್ಥೆಗಳು, ಕಮಾಂಡ್ ಹೆಡ್‌ಕ್ವಾರ್ಟರ್ಸ್ ಹಾಗೂ ಏರ್ ಹೆಡ್‌ಕ್ವಾರ್ಟರ್ಸ್‌ಗಳಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಪ್ರಮುಖ ಸಾಧನೆಗಳು:
ಸೈನಿಕ ಶಾಲೆಯ ಮೊದಲ ಮಹಿಳಾ ಪ್ರಾಂಶುಪಾಲೆ: ತ್ರಿವಿಧ ಪಡೆಗಳಿಂದ ಸೈನಿಕ ಶಾಲೆಯೊಂದರ ಮುಖ್ಯಸ್ಥರಾಗಿ/ಪ್ರಾಂಶುಪಾಲರಾಗಿ ನಿಯೋಜನೆಗೊಂಡ ಮೊದಲ ಮಹಿಳಾ ಅಧಿಕಾರ ಎಂಬ ಹೆಗ್ಗಳಿಕೆಯೂ ಶಕ್ತಿ ಶರ್ಮಾ ಅವರಿಗಿದೆ (ಕಪುರ್ತಲಾ ಸೈನಿಕ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ).
ಸಂಶೋಧನೆ ಮತ್ತು ಶೈಕ್ಷಣಿಕ ನೆರವು: ಐಐಟಿ ಕಾನ್ಪುರ ಮತ್ತು ಪುಣೆ ವಿಶ್ವವಿದ್ಯಾಲಯಗಳಲ್ಲಿ ‘ಐಎಎಫ್ ಚೇರ್ಸ್ ಆಫ್ ಎಕ್ಸಲೆನ್ಸ್’ (IAF Chairs of Excellence) ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ರಕ್ಷಣಾ ಕ್ಷೇತ್ರ ಮತ್ತು ಶೈಕ್ಷಣಿಕ ರಂಗದ ನಡುವಿನ ಸಹಕಾರಕ್ಕೆ ಚಾಲನೆ ನೀಡಿದ್ದರು.
ಭಾರತೀಯ ವಾಯುಪಡೆಯು ತಮ್ಮ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ಶಕ್ತಿ ಶರ್ಮಾ ಅವರ ಸಾಧನೆಯನ್ನು ಶ್ಲಾಘಿಸಿದ್ದು, “ಇದು ಭಾರತೀಯ ರಕ್ಷಣಾ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳ ಸಶಕ್ತೀಕರಣದ ಹೊಸ ಅಧ್ಯಾಯ” ಎಂದು ಬಣ್ಣಿಸಿದೆ.





Leave a comment