ಹೈದರಾಬಾದ್: ಕಚೇರಿಯ ಕೆಲಸದ ನಡುವೆ ಸಿಗುವ ಸಣ್ಣ ವಿರಾಮದಲ್ಲೂ ಮಾನವೀಯತೆ ಮೆರೆಯಲು ಸಾಧ್ಯ ಎಂಬುದಕ್ಕೆ ಹೈದರಾಬಾದ್‌ನ ಯುವತಿಯೊಬ್ಬರು ಉದಾಹರಣೆಯಾಗಿದ್ದಾರೆ. ಆಫೀಸ್ ಬ್ರೇಕ್ ಸಮಯದಲ್ಲಿ ತಮ್ಮ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿಕೊಳ್ಳುತ್ತಿದ್ದ ಯುವತಿ, ಅದನ್ನು ಆಸಕ್ತಿಯಿಂದ ನೋಡುತ್ತಿದ್ದ ಕಚೇರಿಯ ಹೌಸ್‌ಕೀಪಿಂಗ್ (ಸ್ವೀಪರ್) ಸಿಬ್ಬಂದಿಗೂ ನೇಲ್ ಪಾಲಿಶ್ ಹಚ್ಚುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹೈದರಾಬಾದ್‌ನ ಸೌಂದರ್ಯ ಪಾಟೀಲ್ (Soundarya Patil) ಎಂಬ ಯುವತಿ ಈ ಭಾವನಾತ್ಮಕ ಕ್ಷಣವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (@sona.sayss) ಹಂಚಿಕೊಂಡಿದ್ದಾರೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
https://www.instagram.com/reel/DcPnvG8tW6d/?utm_source=ig_embed&ig_rid=Azqb6nJnPR-tJx8TSg7Qq72
ನಡೆದಿದ್ದೇನು?
ಸೌಂದರ್ಯ ಆಫೀಸ್ ಬ್ರೇಕ್‌ನಲ್ಲಿ ಟೀ ಕುಡಿಯುತ್ತಾ ತಮ್ಮ ಉಗುರುಗಳಿಗೆ ಬಣ್ಣ ಹಚ್ಚಿಕೊಳ್ಳುತ್ತಿದ್ದರು. ಅದನ್ನು ಕಂಡ ಹೌಸ್‌ಕೀಪಿಂಗ್ ಮಹಿಳೆ ಹತ್ತಿರ ಬಂದು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಇದನ್ನು ಗಮನಿಸಿದ ಸೌಂದರ್ಯ, “ನಿಮಗೂ ನೇಲ್ ಪಾಲಿಶ್ ಹಚ್ಚಬೇಕೇ?” ಎಂದು ಕೇಳಿದಾಗ ಆ ಮಹಿಳೆ ತಕ್ಷಣವೇ ಒಪ್ಪಿಕೊಂಡರು. ಸೌಂದರ್ಯ ಅವರ ಗೆಳತಿಯೊಬ್ಬರು ಈ ಸುಂದರ ಕ್ಷಣವನ್ನು ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ.
ಆ ಮಹಿಳೆಗೆ ಕೆಂಪು (Red) ಬಣ್ಣದ ನೇಲ್ ಪಾಲಿಶ್ ಬೇಕಿತ್ತು, ಆದರೆ ಆ ಸಮಯದಲ್ಲಿ ಸೌಂದರ್ಯ ಬಳಿ ತಾವು ಹಚ್ಚಿಕೊಂಡಿದ್ದ ಬಣ್ಣ ಮಾತ್ರ ಇತ್ತು. ಹೀಗಾಗಿ ಮುಂದಿನ ಬಾರಿ ಖಂಡಿತ ಕೆಂಪು ಬಣ್ಣದ ನೇಲ್ ಪಾಲಿಶ್ ತಂದು ಹಚ್ಚುವುದಾಗಿ ಅವರು ಭರವಸೆ ನೀಡಿದ್ದಾರೆ.
ಭಾಷೆಯ ಗಡಿ ಮೀರಿದ ಪ್ರೀತಿ:
ಇಬ್ಬರ ನಡುವೆ ಭಾಷೆಯ ತೊಡಕಿದ್ದರೂ, ಅವರಿಬ್ಬರ ನಡುವೆ ಈಗಾಗಲೇ ಒಂದು ಆಪ್ತ ಬಂಧ ಬೆಳೆದಿತ್ತು. ಹೌಸ್‌ಕೀಪಿಂಗ್ ಮಹಿಳೆ ಪ್ರತಿದಿನ ಸೌಂದರ್ಯ ಅವರ ಬಳಿ ‘ಊಟ ಮಾಡಿದಿರಾ?’ ಎಂದು ವಿಚಾರಿಸುತ್ತಿದ್ದರು ಹಾಗೂ ಪರಸ್ಪರ ಅರ್ಥಮಾಡಿಕೊಳ್ಳಲು ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಪ್ರೀತಿ ಮತ್ತು ಕಾಳಜಿಗೆ ಯಾವುದೇ ಭಾಷೆಯ ಹಂಗಿಲ್ಲ” ಎಂದು ನೆಟ್ಟಿಗರು ಯುವತಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.





Leave a comment