SUDDIKSHANA KANNADA NEWS/ DAVANAGERE/ DATE:20-02-2024
ದಾವಣಗೆರೆ: ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಕಳೆದ ಹದಿನೈದು ದಿನಗಳಿಂದಲೂ ಇಳಿಮುಖ ಸಾಗುತ್ತಿದ್ದ ಅಡಿಕೆ ಧಾರಣೆಯಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಹೆಚ್ಚೇನೂ ಏರಿಕೆಯಾಗಿಲ್ಲ. ಆದ್ರೆ, ಇಳಿಮುಖದತ್ತವೇ ಇದ್ದ ದರ ಮತ್ತೆ ಏರುಮುಖದತ್ತ ವಹಿವಾಟು ನಡೆಸಿರುವ ಸ್ವಲ್ಪ ನೆಮ್ಮದಿ ಮೂಡಿಸಿದೆ.
ಬಿಸಿಲಿನ ಧಗೆ, ಸೂಳೆಕೆರೆ ನೀರು ಕಡಿಮೆ, ಭದ್ರಾ ನಾಲೆಯಿಂದ ಸಮರ್ಪಕವಾಗಿ ಬಾರದ ನೀರು ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಅಡಿಕೆ ಬೆಳೆಗಾರರು ತೋಟ ಉಳಿಸಿಕೊಳ್ಳುವುದೇ ಕಷ್ಟ ಎಂಬಂತ ಪರಿಸ್ಥಿತಿ ನಿರ್ಮಾಣ
ಆಗಿದೆ. ಜನವರಿ ತಿಂಗಳ ಕೊನೆಯಿಂದ ಇಳಿಮುಖದತ್ತ ಸಾಗಿದ್ದ ಅಡಿಕೆ ಧಾರಣೆಯು ಬರೋಬ್ಬರಿ 2500 ರೂಪಾಯಿಯಷ್ಟು ಕಡಿಮೆ ಆಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೇವಲ 100 ರೂಪಾಯಿ ಮಾತ್ರ ಕ್ವಿಂಟಲ್ ಗೆ
ಏರಿಕೆ ಆಗಿದೆ.
2024ರ ಪ್ರಾರಂಭದಲ್ಲಿ ಅಡಿಕೆ ಧಾರಣೆ ಏರುಮುಖದಲ್ಲಿ ಸಾಗುತ್ತಿದ್ದ ಕಾರಣ ಅಡಿಕೆ ಬೆಳೆಗಾರರು ಧಾರಣೆಯು 50 ಸಾವಿರ ರೂಪಾಯಿ ಗಡಿ ದಾಟಬಹುದು ಎಂದು ಅಂದಾಜಿಸಿದ್ದರು. ಮತ್ತೆ ಕೆಲವು ರೈತರಂತೂ ಪ್ರತಿ ಕ್ವಿಂಟಲ್ 60 ಸಾವಿರ
ರೂಪಾಯಿ ಆಗಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಆದ್ರೆ, ಕೇವಲ ಹದಿನೈದು ದಿನಕ್ಕೆ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿತ್ತು. ಅಡಿಕೆ ಧಾರಣೆಯು ಏರಿಕೆ ಆಗುತ್ತಿದ್ದರೂ ಹೆಚ್ಚು ಆಗುತ್ತಿರಲಿಲ್ಲ. ಆದ್ರೆ, ಜನವರಿ ಕೊನೆ ವಾರದಿಂದಲೂ ಇಳಿಕೆ ಆಗುತ್ತಾ ಸಾಗುತಿತ್ತು. ಬರೋಬ್ಬರಿ 2300 ರೂಪಾಯಿಯಷ್ಟು ಕುಸಿದಿತ್ತು. ಇದರಿಂದಾಗಿ ಅಡಿಕೆ ಬೆಳೆಗಾರರ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರು.
ಈಗ ಧಾರಣೆ ಏರಿಕೆಯಾಗಿರುವುದರಿಂದ ಮತ್ತೆ ಹೆಚ್ಚಳವಾಗಬಹುದು ಎಂಬ ಅಂದಾಜಿನಲ್ಲಿದ್ದಾರೆ. ಈಗಾಗಲೇ ಅಡಿಕೆ ಕೊಯ್ಲು ಬಹುತೇಕ ಪೂರ್ಣಗೊಂಡಿದೆ. ಈಗ ದಾಸ್ತಾನು ಮಾಡಿರುವ ಅಡಿಕೆ ಮಾರುಕಟ್ಟೆಗೆ ಬಿಡಬೇಕೋ ಇನ್ನು ಸ್ವಲ್ಪ
ದಿನಗಳ ಕಾಯಬೇಕೋ ಎಂಬ ಗೊಂದಲದಲ್ಲಿ ರೈತರಿದ್ದಾರೆ. ಅಡಿಕೆಯು ಈ ಬಾರಿ ಕಡಿಮೆ ಬಂದಿದೆ. ಬಿಸಿಲಿನ ಝಳ, ಸಮರ್ಪಕವಾಗಿ ಸಿಗದ ನೀರು, ಹವಾಮಾನ ವೈಪರೀತ್ಯದಿಂದಾಗಿ ಅಡಿಕೆ ಫಸಲು ತುಂಬಾ ಕಡಿಮೆ ಬಂದಿದೆ. ಈ ಬಾರಿ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಬೇಸರದಲ್ಲಿದ್ದಾರೆ.
ರಾಜ್ಯದೆಲ್ಲೆಡೆ ಭೀಕರ ಬರಗಾಲ ತಲೆದೋರಿದೆ. ದಾವಣಗೆರೆ ಜಿಲ್ಲೆಯೂ ಇದಕ್ಕೆ ಹೊರತಲ್ಲ. ಈಗಾಗಲೇ ಕೊರೆಸಲಾಗಿರುವ ಬೋರ್ ವೆಲ್ ಗಳಲ್ಲಿ ಅಂತರ್ಜಲ ಕಡಿಮೆಯಾಗುತ್ತಿದೆ. ಈ ವರ್ಷ ಬಿಸಿಲಿನ ಝಳಕ್ಕೆ ತೋಟ ಉಳಿಸಿಕೊಳ್ಳುವುದೇ ಅಡಿಕೆ
ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ.
2023ರ ಜುಲೈ ತಿಂಗಳಿನಲ್ಲಿ ಪ್ರತಿ ಕ್ವಿಂಟಲ್ ಅಡಿಕೆ 57 ಸಾವಿರ ರೂಪಾಯಿ ಗಡಿ ದಾಟಿದ್ದು ಬಿಟ್ಟರೆ, ಮತ್ತೆ ಏರಿಕೆ ಆಗಲಿಲ್ಲ. ಆಮೇಲೆ ಕುಸಿದ ಅಡಿಕೆ ಧಾರಣೆ ಜನವರಿ ತಿಂಗಳ ಮೊದಲ ವಾರದಲ್ಲಿ 50 ಸಾವಿರ ರೂಪಾಯಿ ಗಡಿ ದಾಟಿದ್ದು ಬಿಟ್ಟರೆ, ಮತ್ತೆ
ಏರಿಕೆಯಾಗಲಿಲ್ಲ. ಈಗ ಅಡಿಕೆ ಧಾರಣೆಯು 48 ಸಾವಿರ ರೂಪಾಯಿಗೆ ಕುಸಿದಿದೆ.
ಚನ್ನಗಿರಿ ವಹಿವಾಟಿನಲ್ಲಿ ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 46,529 ರೂ, ಗರಿಷ್ಠ ಬೆಲೆ 48,479 ಹಾಗೂ ಸರಾಸರಿ ಬೆಲೆ 47,534 ರೂ.ಗೆ ವಹಿವಾಟು ನಡೆಸಿದೆ. ಬೆಟ್ಟೆ ಅಡಿಕೆ ಗರಿಷ್ಠ 33,729 ರೂ.ಗೆ ಮಾರಾಟವಾಗಿದೆ. ಬರೋಬ್ಬರಿ
2200 ರೂಪಾಯಿ ಕಳೆದ ತಿಂಗಳಿಗೆ ಹೋಲಿಸಿದರೆ ಕಡಿಮೆಯಾಗಿದ್ದು, ಮತ್ತೆ ದರ ಏರಿಕೆಯಾಗುವ ಆಶಾಭಾವನೆಯನ್ನು ರೈತರು ಬಿಟ್ಟಿಲ್ಲ.