ನೋಯ್ಡಾ: ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿಬಂದಿದೆ ಎಂದು ಹೆದರಿಸಿದ ಸೈಬರ್ ವಂಚಕರು, ಅಮೆರಿಕ ಮೂಲದ ನಿವೃತ್ತ ವಕೀಲರೊಬ್ಬರನ್ನು ಸುಮಾರು 20 ದಿನಗಳ ಕಾಲ ‘ಡಿಜಿಟಲ್ ಅರೆಸ್ಟ್’ (Digital Arrest) ಮಾಡಿ ಬರೋಬ್ಬರಿ 4 ಕೋಟಿ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ನೋಯ್ಡಾದಲ್ಲಿ ನಡೆದಿದೆ.
ನ್ಯೂಯಾರ್ಕ್ನಲ್ಲಿ ವಕೀಲರಾಗಿ ನಿವೃತ್ತರಾಗಿದ್ದ ಅತುಲ್ ತಲ್ವಾರ್ ವಂಚನೆಗೊಳಗಾದವರು.
ಜುಲೈ 31ರಂದು ಭಾರತಕ್ಕೆ ಬಂದಿದ್ದ ಅತುಲ್ ತಲ್ವಾರ್ ನೋಯ್ಡಾದ ತಮ್ಮ ಪೂರ್ವಿಕರ ಮನೆಯ ನವೀಕರಣ ಕಾರ್ಯ ನೋಡಿಕೊಳ್ಳುತ್ತಿದ್ದರು. ಅಕ್ಟೋಬರ್ 17ರಂದು ಮುಂಬೈನ ಕೊಲಾಬಾ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ವಂಚಕರು, ಪಹಲ್ಗಾಮ್ ಉಗ್ರ ದಾಳಿ ಪ್ರಕರಣದಲ್ಲಿ ನಿಮ್ಮ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ನಿಮ್ಮ ಹೆಸರಿನ ಬ್ಯಾಂಕ್ ಖಾತೆಯಲ್ಲಿ 53 ಕೋಟಿ ರೂ. ಅಕ್ರಮ ವಹಿವಾಟು ನಡೆದಿದೆ ಎಂದು ಬೆದರಿಸಿದ್ದಾರೆ.
ಬಳಿಕ ಸಿಬಿಐ ಮತ್ತು ಎನ್ಐಎ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮೂಲಕ ‘ಆನ್ಲೈನ್ ವಿಚಾರಣೆ’ ನಡೆಸಿ, ಅವರ ನಿವೃತ್ತಿ ಉಳಿತಾಯದ ಹಣ ಮತ್ತು ಕ್ರಿಪ್ಟೋಕರೆನ್ಸಿ ಮೂಲಕ ಸುಮಾರು 4 ಕೋಟಿ ರೂಪಾಯಿಯನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
20 ದಿನಗಳ ಕಣ್ಗಾವಲು: ನಕಲಿ ಸಿಬಿಐ ಪತ್ರ ಕಳುಹಿಸಿ, ನಿರಂತರ ಆಡಿಯೋ ಮತ್ತು ವಿಡಿಯೋ ಕರೆಗಳ ಮೂಲಕ ವೃದ್ಧ ವಕೀಲರ ಚಲನವಲನಗಳ ಮೇಲೆ ವಂಚಕರು ನಿಗಾ ಇಟ್ಟಿದ್ದರು.
4 ಕೋಟಿ ರೂ. ವಂಚನೆ: ತೆರಿಗೆ ಪಾವತಿ ಹೆಸರಿನಲ್ಲಿ 1.5 ಕೋಟಿ ರೂ. ಹಾಗೂ ಎಥೆರಿಯಮ್ (Ethereum) ಕ್ರಿಪ್ಟೋಕರೆನ್ಸಿ ಮೂಲಕ ಸುಮಾರು 2.5 ಕೋಟಿ ರೂ.ಗಳನ್ನು ವಂಚಕರು ದೋಚಿದ್ದಾರೆ.
ಪೊಲೀಸ್ ಹಾಗೂ ಎಫ್ಬಿಐಗೆ ದೂರು: ಹಣ ವಾಪಸ್ ಬಾರದಿದ್ದಾಗ ಮೋಸ ಹೋಗಿರುವುದು ಅರಿವಾಗಿ ಗೌತಮ್ ಬುದ್ಧ ನಗರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ನವೆಂಬರ್ 11ರಂದು ನ್ಯೂಯಾರ್ಕ್ಗೆ ಮರಳಿದ ಬಳಿಕ ಅಮೆರಿಕದ ಎಫ್ಬಿಐಗೂ (FBI) ದೂರು ಸಲ್ಲಿಸಿದ್ದಾರೆ.





Leave a comment