
ಮನಿಲಾ (ಫಿಲಿಪೈನ್ಸ್): ಕಳೆದ ಕೆಲವು ವರ್ಷಗಳಿಂದ ಜಗತ್ತು ಸರಣಿ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದು, ಇಂದಿನ ಪರಿಸ್ಥಿತಿಯಲ್ಲಿ ಜಗತ್ತಿಗೆ ಶಾಂತಿ, ಸ್ಥಿರತೆ ಮತ್ತು ನಿರೀಕ್ಷಿತ ವಾತಾವರಣದ ತುರ್ತು ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಫಿಲಿಪೈನ್ಸ್ನ ಮನಿಲಾದಲ್ಲಿ ಮಂಗಳವಾರ ನಡೆದ 23ನೇ ಭಾರತ-ಆಸಿಯಾನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಪೈಪೋಟಿಯ ಬದಲು ಪರಸ್ಪರ ಸಹಕಾರದ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತ ಮತ್ತು ಆಸಿಯಾನ್ ಒಕ್ಕೂಟವು ಒಟ್ಟಾಗಿ ವಿಶ್ವದ ಜನಸಂಖ್ಯೆಯ ಸುಮಾರು ಕಾಲು ಭಾಗವನ್ನು ಪ್ರತಿನಿಧಿಸುತ್ತವೆ ಎಂದು ತಿಳಿಸಿದ ಮೋದಿ, ಭಾರತದ ‘ಆಕ್ಟ್ ಈಸ್ಟ್ ಪಾಲಿಸಿ’ ಈ ಸಂಬಂಧಗಳಿಗೆ ಹೊಸ ವೇಗ ಮತ್ತು ಆಳವನ್ನು ನೀಡಿದೆ ಎಂದರು. ಭಾರತ ಮತ್ತು ಆಸಿಯಾನ್ ಪಾಲುದಾರಿಕೆಯು ಈಗ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಬಂಧಗಳನ್ನು ಮೀರಿ ಡಿಜಿಟಲ್ ತಂತ್ರಜ್ಞಾನ, ರಕ್ಷಣೆ ಮತ್ತು ಬಾಹ್ಯಾಕಾಶ ಸಹಕಾರದಂತಹ ಆಧುನಿಕ ಕ್ಷೇತ್ರಗಳಿಗೆ ವಿಸ್ತರಿಸುತ್ತಿದೆ ಎಂದು ಪ್ರಧಾನಿ ವಿವರಿಸಿದರು.
ಸಹಕಾರದ ಮಂತ್ರ: ಭಾರತದ ಅಭಿವೃದ್ಧಿ ಮತ್ತು ಆಸಿಯಾನ್ನ ಸಮೃದ್ಧಿ ಪರಸ್ಪರ ಬೆಸೆದುಕೊಂಡಿವೆ. ‘ವಿಕಸಿತ ಭಾರತ 2047’ ಮತ್ತು ‘ಆಸಿಯಾನ್ ಸಮುದಾಯ ವಿಷನ್ 2045’ ಹಂಚಿಕೆಯ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಪ್ರಮುಖ ಪಾತ್ರ ವಹಿಸಲಿವೆ ಎಂದು ಮೋದಿ ಹೇಳಿದರು.
12 ವರ್ಷಗಳ ಪ್ರಗತಿ: 2014ರಿಂದ ಜನರ ನಡುವಿನ ಬಾಂಧವ್ಯ ಬಲಪಡಿಸಲು 100ಕ್ಕೂ ಹೆಚ್ಚು ಉಪಕ್ರಮಗಳು, ಸುಮಾರು 250 ಕ್ವಿಕ್ ಇಂಪ್ಯಾಕ್ಟ್ ಪ್ರಾಜೆಕ್ಟ್ಗಳು ಹಾಗೂ ಕೌಶಲ್ಯಾಭಿವೃದ್ಧಿಗಾಗಿ 10,000ಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ನೀಡಲಾಗಿದೆ.
ಇಂಡೋ-ಪೆಸಿಫಿಕ್ ಭದ್ರತೆ: ಸುರಕ್ಷಿತ, ಸಮಗ್ರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶವನ್ನು ನಿರ್ಮಿಸುವಲ್ಲಿ ಈ ಶೃಂಗಸಭೆಯು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.




