SUDDIKSHANA KANNADA NEWS/ DAVANAGERE/ DATE:20-11-2024
ದಾವಣಗೆರೆ: ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತಂತೆ ನ್ಯಾ. ಮೈಕಲ್ ಕುನ್ಙಾ ವರದಿ ನೀಡಿದ್ದು, ಬಿಜೆಪಿಯು ಭ್ರಷ್ಟಾಚಾರ ಎಸಗಿದ್ದು ಪ್ರಾಥಮಿಕ ಹಂತದಲ್ಲಿ ಸಾಬೀತಾಗಿದೆ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂಬುದಷ್ಟೇ ನಮ್ಮ ಅಭಿಮತ. ಯಾರ ಮೇಲೂ ದ್ವೇಷ ಮಾಡಲ್ಲ, ಜಿದ್ದು ಸಾಧಿಸುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ವರ್ಷ ಅವಧಿ ತೆಗೆದುಕೊಂಡು ಸಮಗ್ರವಾದ ಪ್ರಥಮ ವರದಿ ನೀಡಿದ್ದಾರೆ. ಎಲ್ಲಾ ಮಾಹಿತಿಗಳೂ ಇದೆ. ಎಲ್ಲಿ ಹೆಚ್ಚು ಖರೀದಿ, ಭ್ರಷ್ಟಾಚಾರ ನಡೆದಿರುವ ಕುರಿತಂತೆ ಸ್ಪಷ್ಟವಾಗಿ ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ಹಗುರವಾಗಿ ಪರಿಗಣಿಸಬಾರದು. ಬಿಜೆಪಿ ಭ್ರಷ್ಟಾಚಾರ ಮಾಡಿರುವುದು ಸಾಬೀತಾಗಿದೆ ಎಂದು ಹೇಳಿದರು.
ಮೊದಲನೇ ಹಂತದಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ. ಎರಡನೇ ಹಂತ ಶಿಕ್ಷೆಯಾಗಬೇಕು. ಹಾಗಾಗಿ, ಎಸ್ ಐ ಟಿ ರಚನೆ ಮಾಡಿದ್ದೇವೆ. ಕಾನೂನು ಪ್ರಕಾರ ತೆಗೆದುಕೊಳ್ಳುತ್ತೇವೆ. ಯಾರ ಮೇಲೂ ದ್ವೇಷ ಸಾಧನೆ ಮಾಡಲ್ಲ. ಯಾರ ಮೇಲೆ ಜಿದ್ದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೊರೊನಾದಂಥ ಸಂಕಷ್ಟದ ವೇಳೆಯಲ್ಲಿ ಘೋರ ಅನ್ಯಾಯ ಮಾಡಿದ್ದನ್ನು ಸಹಿಸಿಕೊಳ್ಳಬೇಕೇ? ಕಷ್ಟ ಕಾಲದಲ್ಲಿ ಲೂಟಿ ಮಾಡಲು ಯೋಚನೆ ಮಾಡಿದ್ದಕ್ಕೆ ಕಾನೂನಾತ್ಮಕವಾಗಿ ಶಿಕ್ಷೆಯಾಗಬೇಕು. ಬಿ. ಎಸ್. ಯಡಿಯೂರಪ್ಪ, ಶ್ರೀರಾಮುಲು, ಬಸವರಾಜ್ ಬೊಮ್ಮಾಯಿ, ಡಾ. ಕೆ. ಸುಧಾಕರ್ ಸೇರಿದಂತೆ ಯಾರಾದರೂ ಸರಿ. ವರದಿ ಆಧರಿಸಿ ಕ್ರಮ ಖಚಿತ ಎಂದರು.
ಯಾವುದೇ ಕಾರಣಕ್ಕೂ ಅರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಿಲ್ಲ. ನಾನು ಆಹಾರ ಇಲಾಖೆ ಸಚಿವನಾಗಿದ್ದಾಗ ಅಕ್ರಮವಾಗಿದ್ದ 20 ಲಕ್ಷ ಕಾರ್ಡ್ ರದ್ದುಪಡಿಸಲಾಗಿತ್ತು ಎಂದು ಹೇಳಿದರು.
ಕೇಂದ್ರದಿಂದ ನಬಾರ್ಡ್ ನಿಂದ ಅನ್ಯಾಯವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿ. ವೈ. ವಿಜಯೇಂದ್ರ, ಆರ್. ಅಶೋಕ್ ಯಾಕೆ ಮಾತನಾಡುತ್ತಿಲ್ಲ. ಬಿಪಿಎಲ್ ಕಾರ್ಡ್ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.