Home ದಾವಣಗೆರೆ ದುರ್ಗಾ ಪೂಜಾ ಪೆಂಡಾಲ್ ನಂತೆ ಮಂಟಪ, 2 ಲಕ್ಷ ಜನರಿಗೆ ಔತಣ: ಅನಂತ್ ಸಿಂಗ್ ಪುತ್ರಿ ಮದುವೆ ಅಬ್ಬರದ ನಡುವೆ ಬಿಜೆಪಿ ಸಂಸದ ಧುಲು ಮಹತೋ ಮಗಳ ವಿವಾಹ ವೈಭೋಗ!
ದಾವಣಗೆರೆಬೆಂಗಳೂರುವಾಣಿಜ್ಯ

ದುರ್ಗಾ ಪೂಜಾ ಪೆಂಡಾಲ್ ನಂತೆ ಮಂಟಪ, 2 ಲಕ್ಷ ಜನರಿಗೆ ಔತಣ: ಅನಂತ್ ಸಿಂಗ್ ಪುತ್ರಿ ಮದುವೆ ಅಬ್ಬರದ ನಡುವೆ ಬಿಜೆಪಿ ಸಂಸದ ಧುಲು ಮಹತೋ ಮಗಳ ವಿವಾಹ ವೈಭೋಗ!

Share
ಮದುವೆ
Share

ನವದೆಹಲಿ: ಬಿಹಾರದ ಮೊಕಾಮಾ ಶಾಸಕ ಅನಂತ್ ಸಿಂಗ್ ಅವರ ಪುತ್ರಿ ಮದುವೆಯು ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿದ್ದರೆ, ಅದಕ್ಕೆ ಕೇವಲ ಒಂದು ದಿನ ಮುಂಚಿತವಾಗಿ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಬಿಜೆಪಿ ಸಂಸದ ಧುಲು ಮಹತೋ ಅವರು ತಮ್ಮ ಹಿರಿಯ ಮಗಳ ವಿವಾಹವನ್ನು ಅಷ್ಟೇ ಅದ್ಧೂರಿಯಾಗಿ ನೆರವೇರಿಸಿದ್ದಾರೆ.

ದುರ್ಗಾ ಪೂಜಾ ಪೆಂಡಾಲ್‌ಗಳಿಗೆ ಪೈಪೋಟಿ ನೀಡುವಂಥ ಭವ್ಯವಾದ ಅಲಂಕಾರಗಳು, ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಾದರಿಯ ವೇದಿಕೆ ಮತ್ತು ಸುಮಾರು 2 ಲಕ್ಷ ಜನರಿಗೆ ಭರ್ಜರಿ ಔತಣಕೂಟದ ಮೂಲಕ ಈ ಮದುವೆ ಪ್ರಾದೇಶಿಕ ಮಾಧ್ಯಮಗಳಲ್ಲಿ ಭಾರೀ ಗಮನ ಸೆಳೆದಿದೆ.

ನವೆಂಬರ್ 24 ರಂದು ಧುಲು ಮಹತೋ ಅವರ ಹಿರಿಯ ಪುತ್ರಿ ಸಾಕ್ಷಿ ಕುಮಾರಿ ಮತ್ತು ಜಾರ್ಖಂಡ್‌ನ ಬೊಕಾರೊ ಜಿಲ್ಲೆಯ ಡಿಎಸ್‌ಪಿ ರವಿಕಾಂತ್ ಸಾವ್ ಅವರ ವಿವಾಹವು ಧನ್‌ಬಾದ್ ಜಿಲ್ಲೆಯ ಅವರ ಸ್ವಗ್ರಾಮ ಚಿತಹಿಯಲ್ಲಿ ಜರುಗಿತು. ಅನಂತ್ ಸಿಂಗ್ ಅವರಂತೆ ಧುಲು ಮಹತೋ ಕೂಡ ಮದುವೆಗೆ ಬರುವವರಿಗೆ ಮುಕ್ತ ಆಹ್ವಾನ ನೀಡಿದ್ದರು. ರಾಜಕೀಯ ಮುಖಂಡರು, ವಿಐಪಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರೂ, ಯಾವುದೇ ಅವ್ಯವಸ್ಥೆಗೆ ಅವಕಾಶವಿಲ್ಲದೆ ಈ ಅದ್ಧೂರಿ ಮದುವೆ ಸುಸೂತ್ರವಾಗಿ ನೆರವೇರಿದೆ.

ಭವ್ಯವಾದ ವ್ಯವಸ್ಥೆ ಮತ್ತು ಅಲಂಕಾರ: ಧನ್‌ಬಾದ್‌ನ ಚಿತಹಿ ಫುಟ್‌ಬಾಲ್ ಮೈುದಾನ, ರಾಮರಾಜ್ ದೇವಸ್ಥಾನದ ಆವರಣ ಸೇರಿದಂತೆ 8 ಕಡೆಗಳಲ್ಲಿ ದೊಡ್ಡ ಪ್ರಮಾಣದ ಭೋಜನ ಮಂಟಪಗಳನ್ನು ನಿರ್ಮಿಸಲಾಗಿತ್ತು. ಇಡೀ ಗ್ರಾಮಕ್ಕೆ ದೀಪಾಲಂಕಾರ ಮಾಡಲಾಗಿದ್ದು, ಸ್ಥಳೀಯ ವ್ಲಾಗರ್‌ಗಳು ಇದನ್ನು ದುರ್ಗಾ ಪೂಜಾ ಪೆಂಡಾಲ್‌ಗಳಿಗೆ ಹೋಲಿಸಿದ್ದಾರೆ.

ತಿರುಪತಿ ಮಾದರಿಯ ಜೈಮಾಲಾ ವೇದಿಕೆ: ಮದುವೆಯ ಪ್ರಮುಖ ಆಕರ್ಷಣೆಯೆಂದರೆ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದ್ದ ಅದ್ಧೂರಿ ಜೈಮಾಲಾ ವೇದಿಕೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಆರು ರಾಜ್ಯಗಳಿಂದ ಕಲಾವಿದರನ್ನು ಕರೆಸಲಾಗಿತ್ತು.

ದಿಗ್ಗಜರ ದಂಡು ಮತ್ತು ಗಣ್ಯರ ಭೇಟಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಅವರ ಪತ್ನಿ ಕಲ್ಪನಾ ಸೊರೇನ್, ಕೇಂದ್ರ ಸಚಿವೆ ಅನ್ನಪೂರ್ಣ ದೇವಿ, ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಸೇರಿದಂತೆ ವಿವಿಧ ಪಕ್ಷಗಳ ಗಣ್ಯರು ಹಾಗೂ ಭೋಜ್‌ಪುರಿ ಗಾಯಕ ಖೇಸರಿ ಲಾಲ್ ಯಾದವ್ ಮದುವೆಗೆ ಆಗಮಿಸಿ ನವದಂಪತಿಗಳನ್ನು ಹರಸಿದರು.

ಅನಂತ್ ಸಿಂಗ್ ಅವರ ಮಗಳ ಮದುವೆಯಲ್ಲಿ ಆಹಾರಕ್ಕಾಗಿ ಮುಗಿಬಿದ್ದ ಜನಸಂದಣಿ ಮತ್ತು ಟ್ರಾಫಿಕ್ ಜಾಮ್ ಸುದ್ದಿಯಾಗಿದ್ದರೆ, ಧುಲು ಮಹತೋ ಅವರ ಮಗಳ ಮದುವೆಯು ಅಷ್ಟೇ ಅದ್ದೂರಿಯಾಗಿದ್ದರೂ ಯಾವುದೇ ಗದ್ದಲವಿಲ್ಲದೆ ಸರಾಗವಾಗಿ ನಡೆದು ಸೈ ಎನಿಸಿಕೊಂಡಿದೆ. ಕೇವಲ 24 ಗಂಟೆಗಳ ಅಂತರದಲ್ಲಿ ನೆರೆಹೊರೆಯ ರಾಜ್ಯಗಳಲ್ಲಿ ನಡೆದ ಈ ಎರಡು ಕೋಟ್ಯಂತರ ರೂ. ಮೌಲ್ಯದ ಮದುವೆಗಳು ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿವೆ.

Share
Related Articles