ಜೈಪುರ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ ಯುಜಿ (NEET UG 2026) ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ರಾಜಸ್ಥಾನದ ಜೈಪುರದಲ್ಲಿ ಅಭ್ಯರ್ಥಿಗಳಿಗೆ ವಿತರಿಸಲಾಗಿದ್ದ ‘ಗೆಸ್ ಪೇಪರ್’ (Guessed Paper) ಎಂಬ ಕೈಬರಹದ ಪಿಡಿಎಫ್ ಪ್ರತಿ, ವಾಸ್ತವದಲ್ಲಿ ಅಸಲಿ ಪ್ರಶ್ನೆ ಪತ್ರಿಕೆಯೇ ಆಗಿತ್ತು ಎಂಬ ಭೀಕರ ಸತ್ಯವನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಿವೆ.
60 ಪುಟಗಳ ಪಿಡಿಎಫ್, 135 ಪ್ರಶ್ನೆಗಳು ಡಿಟೋ!
ತನಿಖಾಧಿಕಾರಿಗಳು ನಡೆಸಿರುವ ಪ್ರಾಥಮಿಕ ತನಿಖೆಯ ಪ್ರಕಾರ, ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್‌ಗಳು ಹಾಗೂ ಕೋಚಿಂಗ್ ಸೆಂಟರ್‌ಗಳಲ್ಲಿ ಹರಿದಾಡಿದ್ದ 60 ಪುಟಗಳ ಕೈಬರಹದ ಪಿಡಿಎಫ್ ಫೈಲ್‌ನಲ್ಲಿ ಒಟ್ಟು 135 ಪ್ರಶ್ನೆಗಳು ಮೇ 3 ರಂದು ನಡೆದ ಅಸಲಿ ನೀಟ್ ಪರೀಕ್ಷೆಯ ಪ್ರಶ್ನೆಗಳಿಗೆ ತದ್ರೂಪವಾಗಿ ಹೊಂದಿಕೆಯಾಗಿವೆ. ಈ ‘ಗೆಸ್ ಪೇಪರ್’ ಜಾಲದ ಹಿಂದೆ ದೊಡ್ಡ ಅಂತರರಾಜ್ಯ ಮಾಫಿಯಾ ಕೆಲಸ ಮಾಡಿರುವುದು ಈಗ ದೃಢಪಟ್ಟಿದೆ.
ಕೋಚಿಂಗ್ ಸೆಂಟರ್ ಮಾಲೀಕನ ಬಂಧನ:
ಈ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಈಗಾಗಲೇ 10 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದೆ. ಮಹಾರಾಷ್ಟ್ರದ ಲಾತೂರ್ ಮೂಲದ ಪ್ರಸಿದ್ಧ ‘ರೇಣುಕಾಯಿ ಕೆಮಿಸ್ಟ್ರಿ ಕ್ಲಾಸಸ್’ (RCC) ಸಂಸ್ಥಾಪಕ ಶಿವ್‌ರಾಜ್ ರಘುನಾಥ್ ಮೊಟೇಗಾಂಕರ್ ಎಂಬಾತನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಈತನ ಮೊಬೈಲ್‌ನಲ್ಲಿ ಪರೀಕ್ಷೆಗಿಂತ 10 ದಿನ ಮುಂಚಿತವಾಗಿಯೇ ಅಂದರೆ ಏಪ್ರಿಲ್ 23 ರಂದೇ ಸೋರಿಕೆಯಾದ ಪ್ರಶ್ನೆ ಪತ್ರಿಕೆ ತಲುಪಿತ್ತು ಎನ್ನಲಾಗಿದೆ. ಈತ ತನ್ನ ಕೋಚಿಂಗ್ ಸೆಂಟರ್‌ನ ಮಾದರಿ ಪರೀಕ್ಷೆಗಳಲ್ಲಿ ಇದೇ ಪ್ರಶ್ನೆಗಳನ್ನು ನೀಡಿದ್ದ ಎನ್ನಲಾಗಿದ್ದು, ಈ ಕುರಿತ ವಿಡಿಯೋ ಸಾಕ್ಷ್ಯಗಳು ಸಿಬಿಐಗೆ ಲಭ್ಯವಾಗಿವೆ.
ಹಗರಣ ಬೆಳಕಿಗೆ ಬಂದಿದ್ದು ಹೇಗೆ?
ಮೇ 3 ರಂದು ನೀಟ್ ಪರೀಕ್ಷೆ ಮುಗಿದ ಬೆನ್ನಲ್ಲೇ, ರಾಜಸ್ಥಾನದ ಪ್ರಮುಖ ಕೋಚಿಂಗ್ ಹಬ್ ಆದ ‘ಸೀಕರ್’ (Sikar) ಜಿಲ್ಲೆಯ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿಯೊಬ್ಬ ತನಗೆ ಪರೀಕ್ಷೆಗೆ ಮುನ್ನ ಸಿಕ್ಕಿದ್ದ ಪಿಡಿಎಫ್ ಒಂದನ್ನು ತೋರಿಸಿದ್ದನು. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಶಿಕ್ಷಕರು, ಅಸಲಿ ಪರೀಕ್ಷೆಯ ಪ್ರಶ್ನೆಗಳಿಗೂ ಹಾಗೂ ಪಿಡಿಎಫ್‌ನಲ್ಲಿದ್ದ ಪ್ರಶ್ನೆಗಳಿಗೂ ನಿಕಟ ಸಾಮ್ಯತೆ ಇರುವುದನ್ನು ಕಂಡು ತಕ್ಷಣವೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ದೂರು ನೀಡಿದ್ದರು. ಇದೀಗ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿದ್ದು, ಇಡೀ ಜಾಲವನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಿದೆ.
- CBI probe NEET UG
- Jaipur guess paper controversy
- NEET 135 questions matched
- NEET UG 2026 paper leak
- NTA NEET controversy 2026
- Renukai Chemistry Classes Latur
- Shivraj Raghunath Motegaonkar arrest
- Sikar coaching center leak
- ಜೈಪುರ ಗೆಸ್ ಪೇಪರ್ ಸೋರಿಕೆ
- ನೀಟ್ ಪತ್ರಿಕೆ ಸೋರಿಕೆ 2026
- ನೀಟ್ ಯುಜಿ ಹಗರಣ
- ಪ್ರಶ್ನೆ ಪತ್ರಿಕೆ ಲೀಕ್
- ರಾಜಸ್ಥಾನ ಸೀಕರ್ ಕೋಚಿಂಗ್ ಸೆಂಟರ್
- ವೈದ್ಯಕೀಯ ಪ್ರವೇಶ ಪರೀಕ್ಷೆ
- ಶಿವ್‌ರಾಜ್ ಮೊಟೇಗಾಂಕರ್ ಬಂಧನ
- ಸಿಬಿಐ ತನಿಖೆ ನೀಟ್





Leave a comment