SUDDIKSHANA KANNADA NEWS/ DAVANAGERE/ DATE:30-10-2023
ದಾವಣಗೆರೆ: ಅದು ಐದು ದಶಕಗಳ ಕಾಯಕ. ಇದೇ ಅವರಿಗೆ ಜೀವನಧಾರ. ಇದರಲ್ಲಿಯೇ ಬದುಕು ಕಂಡುಕೊಂಡವರು. ಬದುಕಿನ ಬಂಡಿ ನೂಗಲು ಸಹ ಸಹಕಾರಿಯಾಗಿತ್ತು. ಆದ್ರೆ, ಈಗ ಕೃತಕ ಹುಲಿ (Tiger) ಉಗುರು ಸೇರಿದಂತೆ ಪ್ರಾಣಿಗಳ ವಸ್ತುಗಳನ್ನು ಮಾಡುತ್ತಿದ್ದ ಹಕ್ಕಿಪಿಕ್ಕಿ ಕುಟುಂಬಗಳಿಗೆ ಸಂಚಕಾರ ತಂದೊಡ್ಡಿದೆ.
ಹೌದು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೋಪನಾಳ್ ಗ್ರಾಮದಲ್ಲಿ ವಾಸವಿರುವ ಹಕ್ಕಿ ಪಿಕ್ಕಿ ಕುಟುಂಬಗಳಿಗೆ ಈಗ ಸಂಕಷ್ಟ ತಂದೊಡ್ಡಿದೆ. ಬಿಗ್ ಬಾಸ್ ಸ್ಪರ್ಧಿ ಹಾಗೂ ರೈತ ಸಂತೋಷ್ ವರ್ತೂರು ಹುಲಿ ಉಗುರು ಪೆಂಟೆಂಡ್ ಧರಿಸಿ ಬಂಧನವಾದ ಬಳಿಕ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡಿದೆ. ಮಾತ್ರವಲ್ಲ, ಸಾಕಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಂಡಿದೆ.
Read Also This Story:
‘ವಿಷ ಇರುವವರು ವಿಷ ಉಗುಳುತ್ತಲೇ ಇರುತ್ತಾರೆ’: ಸಿಎಂ ವಿಜಯನ್ ಪಿಣರಾಯಿ ಠಕ್ಕರ್ ಕೊಟ್ಟಿದ್ದು ಯಾರಿಗೆ ಗೊತ್ತಾ…?
ದೊಡ್ಡ ದೊಡ್ಡ ನಟರು, ರಾಜಕಾರಣಿಗಳ ಮಕ್ಕಳು ಸೇರಿದಂತೆ ಹುಲಿ ಉಗುರು ಧರಿಸಿದ್ದವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಅಸಲಿಯೋ ನಕಲಿಯೋ ಎಂದು ಪರಿಶೀಲಿಸಿತ್ತು. ಆದ್ರೆ, ಈಗ ಇದನ್ನೇ ನಂಬಿ ಬದುಕುತ್ತಿದ್ದ ಹಕ್ಕಿ ಪಿಕ್ಕಿ ಜನಾಂಗದವರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ.
ಕೃತಕವಾಗಿ ಹುಲಿ ಉಗುರು ತಯಾರಿಸುವ ನೈಪುಣ್ಯತೆಯನ್ನು ಹಕ್ಕಿ ಪಿಕ್ಕಿ ಜನಾಂಗ ಹೊಂದಿದೆ. ಕುಲಕಸುಬು ಕೂಡ ಹೌದು. ಸುಮಾರು ಐವತ್ತು ವರ್ಷಗಳಿಂದಲೂ ಕೃತಕ ಹುಲಿ ಉಗುರು ತಯಾರಿಸಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದವರಲ್ಲಿ ಆತಂಕ ಶುರುವಾಗಿದೆ. ಯಾಕೆಂದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದಾಗ ಇವರ ವಿಳಾಸ ಕೊಡುತ್ತಾರೆ. ಇವರಿಂದ ಖರೀದಿ ಮಾಡಿದ್ದೆ ಎಂಬುದು ಗೊತ್ತಾದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲಿಸುವ ಸಾಧ್ಯತೆಯೂ ಇರುತ್ತದೆ.
ಈ ಪ್ರಕರಣ ಗಂಭೀರತೆ ಪಡೆದ ಮೇಲೆ ಕೆಲವರಂತೂ ಹುಲಿ ಉಗುರು ಕೃತಕವೂ ಬೇಡ, ಯಾವುದೂ ಬೇಡ, ಇದರ ಸಹವಾಸವೇ ಬೇಡಪ್ಪ ಅನ್ನೋ ಮಟ್ಟಕ್ಕೆ ಬಂದುಬಿಟ್ಟಿದ್ದಾರೆ. ಅಷ್ಟು ಬಿಗಿ ಕ್ರಮ ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿದೆ.
ರುದ್ರಾಕ್ಷಿ, ಹರಳು, ಮಸಾಜ್ ಎಣ್ಣೆ ಜೊತೆಗೆ ಹುಲಿ ಉಗುರು, ಹುಲಿ, ಜಿಂಕೆಗಳ ನಕಲಿ ಚರ್ಮ ರೂಪಿಸಿ, ರಾಜ್ಯ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಿಗೂ ಹಕ್ಕಿ ಪಿಕ್ಕಿ ಜನಾಂಗದವರು ಹೋಗಿ ಮಾರಾಟ ಮಾಡುವುದು ವಾಡಿಕೆ. ಕಳೆದೊಂದು ವಾರದಿಂದ ವ್ಯಾಪಾರ ಇಲ್ಲದೇ ಕಂಗೆಟ್ಟು ಹೋಗಿದ್ದಾರೆ. ಇಷ್ಟು ವರ್ಷಗಳಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದೆವು. ಇಷ್ಟವಿದ್ದವರು ಹಣ ಕೊಟ್ಟು ಖರೀದಿ ಮಾಡುತ್ತಿದ್ದರು. ಆದ್ರೆ, ಈಗ ಯಾರೂ ಖರೀದಿ ಮಾಡಲು ಮುಂದೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಹೇಗೆ ರೂಪಿಸಲಾಗುತ್ತೆ..?
ಕಸಾಯಿಖಾನೆಗಳಿಂದ ಹಸು- ಎಮ್ಮೆಯ ಕೊರಬು, ಗೊರಸುಗಳನ್ನು ತಂದು ಮೊದಲು ಕ್ಲೀನ್ ಮಾಡಲಾಗುತ್ತದೆ. ಆ ಬಳಿಕ ಯಂತ್ರದಿಂದ ಕತ್ತರಿಸಿ ಹತ್ತು ನಿಮಿಷದಲ್ಲಿಯೇ ಹುಲಿ ಉಗುರಿನಂತೆ ರೂಪ ಕೊಡಲಾಗುತ್ತದೆ. ಆದ್ರೆ, ಪೆಂಟೆಂಡ್ ಮಾಡುವುದು ನಮಗೆ ಗೊತ್ತಿಲ್ಲ ಎಂದು ಹಕ್ಕಿ ಪಿಕ್ಕಿ ಜನಾಂಗದವರು ಹೇಳುತ್ತಾರೆ.
ದಿನಕ್ಕೆ ಜಾನುವಾರುಗಳ ಗೊರಸಿನಿಂದ ಏನಿಲ್ಲಾ ಅಂದರೂ 50 ರಿಂದ 60 ಕೃತಕ ಹುಲಿ ಉಗುರು ರೂಪಿಸಬಹುದು. ಇಲ್ಲಿ ತಯಾರಾದ ಕೃತಕ ಹುಲಿ ಉಗುರು ದೇವಸ್ಥಾನಗಳ ಮುಂದೆಯೂ ಮಾರಾಟ ಮಾಡಲಾಗುತ್ತದೆ. ಕಡಿಮೆ ಎಂದರೆ ಜೋಡಿ
ಉಗುರುಗಳಿಗೆ ಐದು ನೂರು ರೂಪಾಯಿಯಿಂದ 1 ಸಾವಿರ ರೂಪಾಯಿ ಮೌಲ್ಯವಾಗಿರುತ್ತದೆ. ಇದರ ಜೊತೆಗೆ ಮರಣ ಹೊಂದಿದ ದನದ ಚರ್ಮ ಹದಗೊಳಿಸಿ ಯಂತ್ರದ ಮೂಲಕ ಕಲರಿಂಗ್ ಮಾಡಿ ಹುಲಿ, ಜಿಂಕೆಯ ನಕಲಿ ಚರ್ಮ
ಮಾರಾಟ ಮಾಡಿಕೊಂಡು ಬರುತ್ತಿದ್ದೇವೆ. ಇದು ಇಂದು ನಿನ್ನೆಯದ್ದಲ್ಲ. ಸುಮಾರು ಐದು ದಶಕಗಳದ್ದು. ಗೋಪನಾಳ್ ಗ್ರಾಮದ ಮೂರು ಕುಟುಂಬಗಳು ಇದನ್ನು ತಯಾರಿಸುವುದರಲ್ಲಿ ಖ್ಯಾತಿ ಪಡೆದಿದೆ.
ನಾವು ಯಾರಿಗೂಯಾವುದೇ ತೊಂದರೆ ಕೊಟ್ಟಿಲ್ಲ, ಯಾವ ಪ್ರಾಣಿನೂ ಕೊಂದಿಲ್ಲ, ಆದರೂ ಪೊಲೀಸರು ಹಾಗೂ ಅರಣ್ಯ ಇಲಾಖೆಯವರು ಹುಲಿ ಉಗುರು ವಿವಾದ ಭುಗಿಲೆದ್ದ ಬಳಿಕ ತೊಂದರೆ ಕೊಡುತ್ತಿದ್ದಾರೆ. ಪರಿಶೀಲಿಸಲು ನಮಗೇನೂ ಅಭ್ಯಂತರ ಇಲ್ಲ. ಇದರಿಂದ ದೊಡ್ಡ ಸಮಸ್ಯೆಯಾಗಿರುವುದಂತೂ ನಿಜ ಎನ್ನುತ್ತಾರೆ ತಯಾರಕರು.
ಕರ್ನಾಟಕ ಹಕ್ಕಿ ಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ಆರ್. ಪುನೀತ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಕಾಯಕ. ವನ್ಯಜೀವ ಸಂರಕ್ಷಣಾ ಕಾಯ್ದೆ ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ವನ್ಯಜೀವಿಗಳನ್ನು ಸಾಯಿಸುವುದನ್ನು ಯಾರೂ ಒಪ್ಪಲ್ಲ, ನಾವು ಸಹ ಒಪ್ಪುವುದಿಲ್ಲ. ನಮ್ಮಂಥ ಬುಡಕಟ್ಟು ಸಮುದಾಯದವರಿಗೆ ಬದುಕಲು ಅವಕಾಶ ಕೊಡಬೇಕು. ಇದನ್ನೇ ನಂಬಿ ಜೀವನ ಮಾಡುತ್ತಿದ್ದವರು ಈಗ ಏನು ಮಾಡಬೇಕು ಎಂಬ ಪ್ರಶ್ನೆ ಕಾಡಲಾರಂಭಿಸಿದೆ ಎನ್ನುತ್ತಾರೆ.
ಒಟ್ಟಿನಲ್ಲಿ ಹುಲಿ ಉಗುರಿನ ಸದ್ದು ಜೋರಾಗುತ್ತಿದ್ದಂತೆ ಗೋಪನಾಳ್ ಗ್ರಾಮದ ಬುಡಕಟ್ಟು ಸಮುದಾಯದವರಲ್ಲಿ ಆತಂಕ ದಿನಕಳೆದಂತೆ ಹೆಚ್ಚಾಗತೊಡಗಿರುವುದಂತೂ ಸತ್ಯ.