Home ಕ್ರೈಂ ನ್ಯೂಸ್ ಉಗ್ರನಾಗಿ ಬಂದೂಕು ಹಿಡಿದಿದ್ದವನು ಭಾರತೀಯ ಸೇನೆಯ ವೀರ ಯೋಧನಾದ ಕಥೆ: ಅಶೋಕ ಚಕ್ರ ಪುರಸ್ಕೃತ ನಜೀರ್ ವಾನಿ ಸ್ಮರಣೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಉಗ್ರನಾಗಿ ಬಂದೂಕು ಹಿಡಿದಿದ್ದವನು ಭಾರತೀಯ ಸೇನೆಯ ವೀರ ಯೋಧನಾದ ಕಥೆ: ಅಶೋಕ ಚಕ್ರ ಪುರಸ್ಕೃತ ನಜೀರ್ ವಾನಿ ಸ್ಮರಣೆ!

Share
ಭಾರತೀಯ
Share

ನವದೆಹಲಿ: ಒಂದು ಕಾಲದಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕನಾಗಿ ಭಾರತೀಯ ಸೇನೆಯ ವಿರುದ್ಧವೇ ಬಂದೂಕು ಹಿಡಿದಿದ್ದ ಯುವಕ, ಬಳಿಕ ಅದೇ ಭಾರತೀಯ ಸೇನೆಯ ಸಮವಸ್ತ್ರ ಧರಿಸಿ ಉಗ್ರರ ವಿರುದ್ಧ ಹೋರಾಡುತ್ತಾ ದೇಶಕ್ಕಾಗಿ ಹುತಾತ್ಮರಾದ ಅಪರೂಪದ ಮತ್ತು ಸ್ಫೂರ್ತಿದಾಯಕ ಕಥೆ ಲಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಅವರದ್ದು.

ನವೆಂಬರ್ 25, 2018 ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ವಾನಿ ಅವರು ವೀರಮರಣವನ್ನಪ್ಪಿ ಇಂದಿಗೆ ಎಂಟು ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ಶ್ರೀನಗರದ ಮಾಜಿ ಆರ್ಮಿ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ (ನಿವೃತ್ತ) ಅವರು ವಾನಿ ಅವರ ತ್ಯಾಗ ಮತ್ತು ಪರಿವರ್ತನೆಯ ಹಾದಿಯನ್ನು ಸ್ಮರಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚಕ್ ಅಶ್ಮುಜಿ ಗ್ರಾಮದ ಬಡ ರೈತ ಸೊನಾವುಲ್ಲಾ ಅವರ ಪುತ್ರನಾಗಿ ಜನಿಸಿದ ನಜೀರ್ ಅಹ್ಮದ್ ವಾನಿ, ಬಾಲ್ಯದಲ್ಲಿ ಶಾಲಾ ಶಿಕ್ಷಕ ಪಂಡಿತ್ ಶುಭಾನ್ ಜಿ ಹಾಗೂ ಗ್ರಾಮದ ನಿವೃತ್ತ ಸೈನಿಕರೊಬ್ಬರ ಯುದ್ಧದ ಕಥೆಗಳಿಂದ ಪ್ರಭಾವಿತರಾಗಿದ್ದರು. ಆದರೆ, 90ರ ದಶಕದಲ್ಲಿ ಕಾಶ್ಮೀರದಲ್ಲಿ ಭುಗಿಲೆದ್ದ ಉಗ್ರವಾದದ ಸುಳಿಗೆ ಸಿಲುಕಿದ ವಾನಿ, ಹದಿಹರೆಯದಲ್ಲೇ ಭಯೋತ್ಪಾದಕ ಗುಂಪುಗಳೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಹಿಂಸಾಚಾರದ ನಿರರ್ಥಕತೆಯನ್ನು ಅರಿತು ಶರಣಾದ ಅವರು, ಭಯೋತ್ಪಾದನೆ ನಿಗ್ರಹಕ್ಕಾಗಿ ಶರಣಾಗತ ಉಗ್ರರಿಂದ ರಚಿಸಲಾಗಿದ್ದ ‘ಇಖ್ವಾನ್’ (Ikhwan) ಪಡೆಯ ಮೂಲಕ ಮುಖ್ಯವಾಹಿನಿಗೆ ಮರಳಿದರು.

ಸೇನಾ ಸೇರ್ಪಡೆ ಮತ್ತು ಶೌರ್ಯ: 2004ರಲ್ಲಿ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್‌ಫೆಂಟ್ರಿಯ 162ನೇ ಇನ್‌ಫೆಂಟ್ರಿ ಬೆಟಾಲಿಯನ್ (ಟೆರಿಟೋರಿಯಲ್ ಆರ್ಮಿ) ಸೇರಿದ ವಾನಿ, ನಂತರ ರಾಷ್ಟ್ರೀಯ ರೈಫಲ್ಸ್ (RR) ಪಡೆಯಲ್ಲಿ ಸೇವೆ ಸಲ್ಲಿಸಿದರು. ಸ್ಥಳೀಯ ಭೂಪ್ರದೇಶದ ಆಳವಾದ ಜ್ಞಾನ ಹೊಂದಿದ್ದ ಅವರು, 2007 ಮತ್ತು 2018ರಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಅಸಾಧಾರಣ ಶೌರ್ಯ ಮೆರೆದು ಎರಡು ಬಾರಿ ‘ಸೇನಾ ಪದಕ’ಕ್ಕೆ  ಭಾಜನರಾದರು.

ಶೋಪಿಯಾನ್‌ನ ಅಂತಿಮ ಹೋರಾಟ: ನವೆಂಬರ್ 25, 2018 ರಂದು ಶೋಪಿಯಾನ್ ಜಿಲ್ಲೆಯ ಬಟಗುಂಡ್ ಗ್ರಾಮದಲ್ಲಿ ಆರು ಮಂದಿ ಶಸ್ತ್ರಸಜ್ಜಿತ ಉಗ್ರರ ವಿರುದ್ಧ 34ನೇ ರಾಷ್ಟ್ರೀಯ ರೈಫಲ್ಸ್ ನಡೆಸಿದ ಕಾರ್ಯಾಚರಣೆಯಲ್ಲಿ ವಾನಿ ಸ್ವಯಂಪ್ರೇರಿತರಾಗಿ ಮುಂಚೂಣಿ ತಂಡದಲ್ಲಿ ಭಾಗವಹಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದರೂ ಲಷ್ಕರ್-ಎ-ತೊಯ್ಬಾ ಜಿಲ್ಲಾ ಕಮಾಂಡರ್ ಸೇರಿದಂತೆ ಇಬ್ಬರು ಉಗ್ರರನ್ನು ಮುಖಾಮುಖಿ ಕಾದಾಟದಲ್ಲಿ ಹತ್ಯೆಗೈದು, 38ನೇ ವಯಸ್ಸಿನಲ್ಲಿ ಹುತಾತ್ಮರಾದರು.

ಕಾಶ್ಮೀರದ ಮೊದಲ ಅಶೋಕ ಚಕ್ರ ಪುರಸ್ಕೃತ: ಕರ್ತವ್ಯ ನಿಷ್ಠೆ ಮತ್ತು ಅಪ್ರತಿಮ ಪರಾಕ್ರಮಕ್ಕಾಗಿ 2019ರ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮರಣೋತ್ತರವಾಗಿ ‘ಅಶೋಕ ಚಕ್ರ’ ಪ್ರಶಸ್ತಿ ಪ್ರದಾನ ಮಾಡಿದರು. ಈ ಮೂಲಕ ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ ಪಡೆದ ಜಮ್ಮು ಮತ್ತು ಕಾಶ್ಮೀರದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ವಾನಿ ಪಾತ್ರರಾದರು.

ನವೆಂಬರ್ 26, 2018 ರಂದು ತ್ರಿವರ್ಣ ಧ್ವಜದಲ್ಲಿ ಸುತ್ತಿದ್ದ ವಾನಿ ಅವರ ಪಾರ್ಥಿವ ಶರೀರಕ್ಕೆ ಹುಟ್ಟೂರಿನಲ್ಲಿ 500ಕ್ಕೂ ಹೆಚ್ಚು ಗ್ರಾಮಸ್ಥರ ಸಮ್ಮುಖದಲ್ಲಿ 21 ಸುತ್ತಿನ ಕುಶಾಲತೋಪು ಸಿಡಿಸಿ ಸಕಲ ಸೇನಾ ಗೌರವಗಳೊಂದಿಗೆ ಅಂತಿಮ ವಿದಾಯ ಹೇಳಲಾಗಿತ್ತು. ಪತ್ನಿ ಮಹಾಜಬೀನ್ ಹಾಗೂ ಇಬ್ಬರು ಪುತ್ರರನ್ನು ಅಗಲಿದ ವಾನಿ ಅವರ ಬದುಕಿನ ಪಯಣವನ್ನು ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಅವರು ತಮ್ಮ 2024ರ ಪುಸ್ತಕ ‘ಎ ಜನರಲ್ ರೆಮಿನಿಸಸ್: ಎ ಲೈಫ್ ಅಂಡರ್ ಫೈರ್ ಇನ್ ಕಾಶ್ಮೀರ್’ ನಲ್ಲಿ ದಾಖಲಿಸಿದ್ದು, “ಭಾರತೀಯ ಸೇನೆಯ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಪರಿವರ್ತನೆಯ ಕಥೆಗಳಲ್ಲಿ ಇದೂ ಒಂದು” ಎಂದು ಬಣ್ಣಿಸಿದ್ದಾರೆ.
Share

Recent Comments

No comments to show.
Related Articles