
ದಾವಣಗೆರೆ/ಬೆಂಗಳೂರು: ಶಿಕ್ಷಣ, ಸಂಪರ್ಕ ಹಾಗೂ ಮೂಲಸೌಕರ್ಯದ ಬಲ ಹೊಂದಿರುವ ದಾವಣಗೆರೆ, ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಕೇಂದ್ರವಾಗಿ ಬೆಳೆಯಲು ಸಜ್ಜಾಗಿದೆ. ಜಾಗತಿಕ ಕಂಪನಿಗಳು ತಮ್ಮ ಮುಂದಿನ ಕಾರ್ಯಕೇಂದ್ರಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಹ್ವಾನಿಸಿದರು.
ಬೆಂಗಳೂರು ನಗರದಲ್ಲಿ ಬುಧವಾರ ನಡೆದ ಮ್ಯಾಕ್ಸ್ಪೋ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಣಗೆರೆಯ ಹೂಡಿಕೆ ಅವಕಾಶಗಳು, ಮಾನವ ಸಂಪನ್ಮೂಲ ಹಾಗೂ ಉದ್ಯಮ ಬೆಳವಣಿಗೆಗೆ ಪೂರಕವಾಗಿರುವ ಸೌಲಭ್ಯಗಳನ್ನು ವಿವರಿಸಿದರು.
ಹತ್ತಿ ಗಿರಣಿಗಳಿಂದ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಗುರುತಿಸಿಕೊಂಡಿದ್ದ ದಾವಣಗೆರೆ, ನಂತರ ಶಿಕ್ಷಣ ಕ್ಷೇತ್ರದಲ್ಲಿ ಬೆಳೆದು ವಿದ್ಯಾನಗರಿಯಾಯಿತು. ಈಗ ಐಟಿ–ಐಟಿಇಎಸ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸುವ ಸಾಮರ್ಥ್ಯ ಹೊಂದಿದೆ. ಕಂಪನಿಗಳು ತಮ್ಮ ಪ್ರಧಾನ ಕಚೇರಿಗಳನ್ನು ಸ್ಥಳಾಂತರಿಸಬೇಕೆಂಬುದು ನಮ್ಮ ನಿರೀಕ್ಷೆಯಲ್ಲ. ಹೊಸ ತಂಡಗಳನ್ನು ದಾವಣಗೆರೆಯಲ್ಲಿ ಆರಂಭಿಸಬೇಕು ಎಂಬುದು ನಮ್ಮ ಆಶಯ ಎಂದರು.
ದಾವಣಗೆರೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ಎಂಜಿನಿಯರ್ಗಳು ದೇಶ–ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತವರಿನಲ್ಲೇ ಸೂಕ್ತ ಉದ್ಯೋಗ ದೊರೆತರೆ ಮರಳಲು ಬಯಸುವ ಪ್ರತಿಭಾವಂತರೂ ಇದ್ದಾರೆ. ಅವಕಾಶಗಳ ಕೊರತೆಯಿಂದ ಯುವಜನರು ಊರು ತೊರೆಯುವ ಪರಿಸ್ಥಿತಿ ಬದಲಾಗಬೇಕು ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ 30 ಸಾವಿರಕ್ಕೂ ಹೆಚ್ಚು ಎಂಜಿನಿಯರ್ಗಳು ಪದವಿ ಪಡೆದಿದ್ದಾರೆ. ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳ ಜೊತೆಗೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಮಾನವ ಸಂಪನ್ಮೂಲ ಲಭ್ಯವಿದೆ ಎಂದು ತಿಳಿಸಿದರು.
ಪದವೀಧರರನ್ನು ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಸಿದ್ಧಗೊಳಿಸಲು ‘ವಿಷನ್ ದಾವಣಗೆರೆ’ ಮೂಲಕ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ. ‘ಸಕ್ಷಮ, ‘ಸಂಕಲ್ಪ’ ಹಾಗೂ ‘ಕೌಶಲ್ಯ’ ಕಾರ್ಯಕ್ರಮಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಉದ್ಯೋಗ ಕೌಶಲ್ಯ ಕಲ್ಪಿಸಲಾಗುತ್ತಿದೆ. ‘ಟೆಕ್ರೈಸ್ ದಾವಣಗೆರೆ’ ಮೂಲಕ ಶಿಕ್ಷಣ ಸಂಸ್ಥೆಗಳು, ಉದ್ಯಮಗಳು ಹಾಗೂ ಹೂಡಿಕೆದಾರರನ್ನು ಒಂದೇ ವೇದಿಕೆಗೆ ತರಲಾಗುತ್ತಿದೆ ಎಂದರು.
ಹಂತ ಹಂತವಾಗಿ ವಿಸ್ತರಣೆಗೆ ಅವಕಾಶ
ದಾವಣಗೆರೆಯ ಎಸ್ಟಿಪಿಐ ಕೇಂದ್ರದಲ್ಲಿ ತಕ್ಷಣ ಬಳಸಬಹುದಾದ 102 ಆಸನಗಳ ಕಾರ್ಯಸ್ಥಳವಿದೆ. ಮುಂದಿನ ಹಂತಗಳಲ್ಲಿ ಉತ್ತಮ ಗುಣಮಟ್ಟದ ಕಚೇರಿ ಸ್ಥಳ ಮತ್ತು ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಸೇರಿದಂತೆ ಒಟ್ಟು 520ಕ್ಕೂ ಹೆಚ್ಚು ಆಸನಗಳ ಕಾರ್ಯಸ್ಥಳ ರೂಪುಗೊಳ್ಳುತ್ತಿದೆ. ಭವಿಷ್ಯದ ಐಟಿ ಪಾರ್ಕ್ಗಾಗಿ ಮೂರು ಎಕರೆ ಜಾಗ ಮೀಸಲಿರಿಸಲಾಗಿದೆ ಎಂದು ವಿವರಿಸಿದರು.
ಕಂಪನಿಗಳು ಸಣ್ಣ ಪ್ರಾಯೋಗಿಕ ತಂಡದೊಂದಿಗೆ ಕಾರ್ಯಾರಂಭಿಸಿ, ಫಲಿತಾಂಶದ ಆಧಾರದಲ್ಲಿ ಹಂತ ಹಂತವಾಗಿ ವಿಸ್ತರಿಸಬಹುದು. ಮೊದಲ ವರ್ಷದ ಬಾಡಿಗೆ ವಿನಾಯಿತಿ ಹಾಗೂ ರಾಜ್ಯ ಸರ್ಕಾರದ ಐಟಿ ನೀತಿಯಡಿ ದೊರೆಯುವ ಪ್ರೋತ್ಸಾಹಗಳು ಹೂಡಿಕೆಗೆ ನೆರವಾಗಲಿವೆ’ ಎಂದರು.
ರಾಷ್ಟ್ರೀಯ ಹೆದ್ದಾರಿ–48, ವಂದೇ ಭಾರತ್ ರೈಲು ಸೇವೆ ಹಾಗೂ ಸಮೀಪದ ವಿಮಾನ ನಿಲ್ದಾಣಗಳು ದಾವಣಗೆರೆಯ ಸಂಪರ್ಕವನ್ನು ಬಲಪಡಿಸಿವೆ. ಉತ್ತಮ ಶಾಲೆಗಳು, ಆಸ್ಪತ್ರೆಗಳು ಮತ್ತು ನಗರ ಜೀವನಕ್ಕೆ ಅಗತ್ಯ ಸೌಲಭ್ಯಗಳು ಉದ್ಯೋಗಿಗಳ ಕುಟುಂಬಗಳಿಗೂ ಅನುಕೂಲಕರವಾಗಿವೆ ಎಂದು ಹೇಳಿದರು.
ಆರೋಗ್ಯ ಮತ್ತು ಜೀವವಿಜ್ಞಾನ, ಬ್ಯಾಂಕಿಂಗ್, ವಿಮೆ, ಎಂಜಿನಿಯರಿಂಗ್ ಸೇವೆ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಹಾಗೂ ಬಹುಭಾಷಾ ಗ್ರಾಹಕ ಸೇವಾ ಕ್ಷೇತ್ರಗಳಿಗೆ ದಾವಣಗೆರೆಯಲ್ಲಿ ಅವಕಾಶಗಳಿವೆ ಎಂದು ತಿಳಿಸಿದರು.
‘ಪ್ರತಿಭೆ ಇರುವಲ್ಲಿಗೆ ಉದ್ಯೋಗವನ್ನು ಕೊಂಡೊಯ್ಯೋಣ. ದಾವಣಗೆರೆಗೆ ಭೇಟಿ ನೀಡಿ, ಇಲ್ಲಿನ ಅವಕಾಶಗಳನ್ನು ಪರಿಶೀಲಿಸಿ. ಸರ್ಕಾರ, ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳು ಒಟ್ಟಾಗಿ ದಾವಣಗೆರೆ ಐಟಿ–ಐಟಿಇಎಸ್ ಕ್ಲಸ್ಟರ್ ನಿರ್ಮಿಸೋಣ’ ಎಂದು ಕರೆ ನೀಡಿದರು. ಈ ಪ್ರಯತ್ನಕ್ಕೆ ಬೆಂಬಲ ನೀಡುತ್ತಿರುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಪ್ರಮುಖರು ಹಾಗೂ ಉದ್ಯಮ ನಾಯಕರೊಂದಿಗೆ ಸಂವಾದ ನಡೆಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆಯನ್ನು ಜಿಸಿಸಿ ಹಬ್ ಆಗಿ ಅಭಿವೃದ್ಧಿಪಡಿಸಲು ಇರುವ ಅವಕಾಶಗಳ ಕುರಿತು ಚರ್ಚಿಸಿ, ನಗರದಲ್ಲಿ ತಮ್ಮ ಕಾರ್ಯಕೇಂದ್ರಗಳನ್ನು ಸ್ಥಾಪಿಸುವಂತೆ ಆಹ್ವಾನಿಸಿದರು.
ಈ ವೇಳೆ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.




