Home ಕ್ರೀಡೆ ಪದಕ ಗೆದ್ದರೂ ಬದಲಾಗದ ಬದುಕು: ಕಸ ಗುಡಿಸುವ ಕೆಲಸ ಮಾಡುವ ಚಿನ್ನದ ಪದಕ ವಿಜೇತೆ ಗೋಲ್ಡನ್ ಗರ್ಲ್ ಸುನೀತಾ ಓರಾನ್!
ಕ್ರೀಡೆದಾವಣಗೆರೆಬೆಂಗಳೂರು

ಪದಕ ಗೆದ್ದರೂ ಬದಲಾಗದ ಬದುಕು: ಕಸ ಗುಡಿಸುವ ಕೆಲಸ ಮಾಡುವ ಚಿನ್ನದ ಪದಕ ವಿಜೇತೆ ಗೋಲ್ಡನ್ ಗರ್ಲ್ ಸುನೀತಾ ಓರಾನ್!

Share
ಪದಕ
Share

ರಾಂಚಿ: ಕ್ರೀಡಾಂಗಣದಲ್ಲಿ ತಮ್ಮ ಅಪ್ರತಿಮ ಸಾಮರ್ಥ್ಯದಿಂದ ಮಿಂಚಿ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದ ಜಾರ್ಖಂಡ್‌ನ ಪ್ರಸಿದ್ಧ ಮಹಿಳಾ ಕ್ರೀಡಾಪಟು ಸುನೀತಾ ಓರಾನ್ ಅವರ ಇಂದಿನ ದಿನಚರಿ ಇಡೀ ಕ್ರೀಡಾಲೋಕ ಹಾಗೂ ಕ್ರೀಡಾಭಿಮಾನಿಗಳ ಮನಕಲಕುವಂತೆ ಮಾಡಿದೆ.

ಥ್ರೋಬಾಲ್ ಹಾಗೂ ವಾಲಿಬಾಲ್ ಸ್ಪರ್ಧೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿ ಎರಡು ಚಿನ್ನದ ಪದಕಗಳು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದ ಈ ಕ್ರೀಡಾಪಟು, ಇಂದು ತಮ್ಮ ಸಂಸಾರ ನಿರ್ವಹಣೆಗಾಗಿ ಕಸ ಗುಡಿಸುವ ಸ್ಥಿತಿಗೆ ತಲುಪಿದ್ದಾರೆ.

ಕ್ರೀಡಾ ಇಲಾಖೆಯಲ್ಲೇ ಸ್ವಚ್ಛತಾ ಸಿಬ್ಬಂದಿ!

ಅತ್ಯಂತ ಆಘಾತಕಾರಿ ವಿಷಯವೆಂದರೆ, ಸುನೀತಾ ಅವರು ಯಾವ ರಾಂಚಿಯ ಕ್ರೀಡಾಂಗಣ ಮತ್ತು ಕ್ರೀಡಾ ನಿರ್ದೇಶನಾಲಯದಲ್ಲಿ ಅಭ್ಯಾಸ ನಡೆಸಿ ಪ್ರಶಸ್ತಿಗಳನ್ನು ಗೆದ್ದಿದ್ದರೊ, ಅದೇ ರಾಂಚಿ ಕ್ರೀಡಾ ಇಲಾಖೆ ಕಾಂಪೌಂಡ್‌ನಲ್ಲಿ ಪ್ರಸ್ತುತ ಗುತ್ತಿಗೆ ಆಧಾರದ ಸ್ವಚ್ಛತಾ ಕಾರ್ಯಕರ್ತೆಯಾಗಿ (Sweeper/Cleaner) ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ಬೂಟು ತೊಟ್ಟು ಕ್ರೀಡಾಂಗಣಕ್ಕಿಳಿಯುತ್ತಿದ್ದ ಕಾಲ ಹೋಗಿ, ಇಂದು ಕೈಯಲ್ಲಿ ಪೊರಕೆ ಹಾಗೂ ಬಕೆಟ್ ಹಿಡಿದು ನೆಲ ಒರೆಸುವ ಸ್ಥಿತಿ ಅವರಿಗೆ ಒದಗಿದೆ.

ತಿಂಗಳಿಗೆ ಕೇವಲ ₹10,000 ವೇತನ:

ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಈ ಆಟಗಾರ್ತಿಗೆ ಪ್ರಸ್ತುತ ಸಿಗುತ್ತಿರುವುದು ತಿಂಗಳಿಗೆ ಕೇವಲ ₹10,000 ಸಂಬಳ. ದಿನೇ ದಿನೇ ಏರುತ್ತಿರುವ ಜೀವನಾವಶ್ಯಕ ವೆಚ್ಚಗಳು ಹಾಗೂ ಕುಟುಂಬ ನಿರ್ವಹಣೆಯ ಜವಾಬ್ದಾರಿಯ ನಡುವೆ ಈ ಸಣ್ಣ ಮೊತ್ತದಲ್ಲಿ ಜೀವನ ನಡೆಸುವುದು ಅವರಿಗೆ ಸವಾಲಾಗಿ ಪರಿಣಮಿಸಿದೆ. “ಕ್ರೀಡೆಯಲ್ಲಿ ಗೆದ್ದಾಗ ಎಲ್ಲರೂ ಸನ್ಮಾನಿಸಿದರು, ಶ್ಲಾಘಿಸಿದರು. ಆದರೆ ಕ್ರೀಡಾ ಜೀವನ ಮುಗಿಯುತ್ತಿದ್ದಂತೆ ನಮ್ಮ ಭವಿಷ್ಯವನ್ನು ಎಲ್ಲರೂ ಮರೆತರು” ಎಂದು ಸುನೀತಾ ತಮ್ಮ ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾರೆ.

ಶಾಶ್ವತ ಉದ್ಯೋಗಕ್ಕಾಗಿ ಸಿಎಂ ಗೆ ಮನವಿ:

ಪದಕಗಳು ಬದುಕಿಗೆ ಶಾಶ್ವತ ಆಸರೆಯಾಗದ ಹಿನ್ನೆಲೆಯಲ್ಲಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಹಾಗೂ ಕ್ರೀಡಾ ಇಲಾಖೆ ತಮಗೆ ಕ್ರೀಡಾ ಕೋಟಾದಡಿ ಶಾಶ್ವತ ಸರ್ಕಾರಿ ಉದ್ಯೋಗ ನೀಡಿ ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಸುನೀತಾ ಓರಾನ್ ಮನವಿ ಮಾಡಿದ್ದಾರೆ. ಕನಿಷ್ಠ ಪಕ್ಷ ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕೋಚ್ ಅಥವಾ ಕ್ರೀಡಾ ಮಾರ್ಗದರ್ಶಕಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದರೆ ತಮ್ಮ ಅನುಭವ ಕ್ರೀಡಾರಂಗಕ್ಕೆ ನೆರವಾಗುತ್ತದೆ ಎಂಬುದು ಅವರ ಆಶಯವಾಗಿದೆ.

ವ್ಯವಸ್ಥೆಯ ವಿರುದ್ಧ ಆಕ್ರೋಶ:

ಸುನೀತಾ ಅವರ ಈ ಕಷ್ಟದ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರು ಮತ್ತು ಕ್ರೀಡಾಪ್ರೇಮಿಗಳು ಸರ್ಕಾರದ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕ್ರೀಡಾಪಟುಗಳು ಪದಕ ಗೆದ್ದಾಗ ಮಾತ್ರ ಪೋಸ್ ನೀಡುವ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಅವರ ನಿವೃತ್ತಿಯ ನಂತರ ಅಥವಾ ಸಂಕಷ್ಟದಲ್ಲಿದ್ದಾಗ ಅವರ ಕಡೆ ತಿರುಗಿಯೂ ನೋಡುವುದಿಲ್ಲ ಎಂಬ ಆರೋಪಗಳು ಮತ್ತೊಮ್ಮೆ ಕೇಳಿಬಂದಿವೆ.

Share

Leave a comment

Leave a Reply

Your email address will not be published. Required fields are marked *