SUDDIKSHANA KANNADA NEWS/ DAVANAGERE/ DATE:16-03-2024
ದಾವಣಗೆರೆ: ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರು ದಾವಣಗೆರೆಯ ‘ಮದರ್ ಥೆರೇಸಾ’ ಅಂತಾನೇ ಖ್ಯಾತಿ ಗಳಿಸಿದವರು. ಶನಿವಾರ ಸಂಜೆ ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮಾಯಕೊಂಡ ಹಾಗೂ ದಾವಣಗೆರೆ ವಿಧಾನಸಭಾ ಕ್ಷೇತ್ರಗಳಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗಮ್ಮ ಕೇಶವಮೂರ್ತಿ ಅವರು ಎರಡು ಬಾರಿ ಮಂತ್ರಿಯಾಗಿ ಒಮ್ಮೆ ಡೆಪ್ಯೂಟಿ ಸ್ಪೀಕರ್ ಆಗಿ ಕಾರ್ಯ
ನಿರ್ವಹಿಸಿದ್ದರು.
ನಾಗಮ್ಮ ಕೇಶವಮೂರ್ತಿ ಅಪ್ರತಿಮ ಸೇವೆ:
ಗುಂಡೂರಾವ್ ಹಾಗೂ ವೀರಪ್ಪ ಮೊಯ್ಲಿ ಸಿಎಂ ಆಗಿದ್ದ ಅವಧಿಯಲ್ಲಿ ಶಿಕ್ಷಣ ಮಂತ್ರಿಗಳಾಗಿ, ಒಮ್ಮೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿಯಾಗಿ ಅಪ್ರತಿಮ ಸೇವೆ ಸಲ್ಲಿಸಿದ್ದರು. ಕೆಲವ ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದ
ನಾಗಮ್ಮ ಕೇಶವಮೂರ್ತಿ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ವೈಕುಂಠಧಾಮದಲ್ಲಿ ನಾಗಮ್ಮ ಕೇಶವಮೂರ್ತಿ ಅಂತ್ಯಕ್ರಿಯೆ:
ಪುತ್ರ ಡಾ. ಸಿ.ಕೆ.ಜಯಂತ್, ಸೊಸೆ ಡಾ. ಶೀಲಾ ಜಯಂತ್ ಹಾಗೂ ಮೊಮ್ಮಗಳನ್ನು ಅಗಲಿರುವ ನಾಗಮ್ಮನವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ದಾವಣಗೆರೆಯ ವೈಕುಂಠ ಧಾಮದಲ್ಲಿ ನೆರವೇರಲಿದೆ.
ಬೆಂಗಳೂರಿನವರು ನಾಗಮ್ಮ ಕೇಶವಮೂರ್ತಿ:
ಬೆಂಗಳೂರಿನ ಎಂ.ಎನ್.ರಾಮನ್ ಮತ್ತು ಸಾಕಮ್ಮ ದಂಪತಿಗಳ ಪುತ್ರಿಯಾಗಿದ್ದ ನಾಗಮ್ಮನವರು 1951ರಲ್ಲಿ ದಾವಣಗೆರೆಯ ಉದ್ಯಮಿ, ಚನ್ನಗಿರಿ ರಂಗಪ್ಪನವರ 2ನೇ ಪುತ್ರ ಸಿ ಕೇಶವಮೂರ್ತಿ ಅವರನ್ನು ವಿವಾಹವಾಗಿ ದಾವಣಗೆರೆಗೆ ಬಂದರು.
ಅತ್ತೆ ರಾಧಮ್ಮರೇ ಸ್ಫೂರ್ತಿ:
ತಮ್ಮ ಅತ್ತೆ ರಾಧಮ್ಮ ಅವರ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿದರು. 1955ರಲ್ಲಿ ವನಿತಾ ಸಮಾಜವನ್ನು ಆರಂಭಿಸಿ ಅದರಲ್ಲಿ 52 ಅಂಗ ಸಂಸ್ಥೆಗಳನ್ನು ಸ್ಥಾಪಿಸಿದರು. ವನಿತಾ ಸಮಾಜದ ಆತ್ಮ: ‘ಸೇವೆಯೇ ಪರಮೋ ರ್ಮಹ’ ಎಂಬ ಧ್ಯೇಯ ವಾಕ್ಯದಡಿ ಗರ್ಭದಲ್ಲಿರುವ ಮಗುವಿನಿಂದ ಹಿಡಿದು ಸಾಯುವ ಹಂತದವರೆಗೆ ಮಹಿಳೆಗೆ ಎಲ್ಲ ರೀತಿಯ ನೆರವು, ಸೌಲಭ್ಯ, ಸ್ವಾವಲಂಬನೆಗೆ ದಾರಿ ಹುಡುಕಿ ಕೊಟ್ಟ ನಾಗಮ್ಮನವರು ದಾವಣಗೆರೆಯ ಮದರ್ ಥೆರೇಸಾ ಎಂದೇ ಖ್ಯಾತರಾಗಿದ್ದರು.
ವನಿತಾ ಸಮಾಜದ ಆತ್ಮ ನಾಗಮ್ಮ:
ವನಿತಾ ಸಮಾಜ ಅವರ ನಿಜವಾದ ಆತ್ಮವಾಗಿತ್ತು. ರಾಜಕೀಯ, ಶಿಕ್ಷಣ, ಸಮಾಜ ಸೇವೆ, ಮಹಿಳಾ ಜಾಗೃತಿ, ಸಂಗೀತ, ಸಾಹಿತ್ಯ, ಹಾಸ್ಯ, ಆಧ್ಯಾತ್ಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.
ನಾಗಮ್ಮ ಜನ ಮೆಚ್ಚಿದ ನಾಯಕಿ:
ನಾಗಮ್ಮ ಕೇಶವಮೂರ್ತಿ ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಜನಮೆಚ್ಚಿನ ನಾಯಕಿ ಅಂತಾನೂ ಖ್ಯಾತಿ ಗಳಿಸಿದ್ದರು.
ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಪ್ರವೇಶದ ನಂತರ ರಾಷ್ಟ್ರಮಟ್ಟದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ದೇವರಾಜ ಅರಸು, ಎಸ್.ನಿಜಲಿಂಗಪ್ಪ, ಮಾರ್ಗರೇಟ್ ಆಳ್ವ, ಗುಂಡೂರಾವ್, ವೀರಪ್ಪ ಮೊಯ್ಲಿ ಸೇರಿದಂತೆ ಅನೇಕ ಘಟಾನುಘಟಿ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು.