SUDDIKSHANA KANNADA NEWS/ DAVANAGERE/ DATE:06-11-2024
ದಾವಣಗೆರೆ: 40 ಲಕ್ಷ ರೂಪಾಯಿ ಇನ್ಶೂರೆನ್ಸ್ ಆಸೆಗೆ ವ್ಯಕ್ತಿ ಕೊಲೆ ಮಾಡಿದ್ದ ಆರೋಪಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಬಂಬೂ ಬಜಾರ್ ರಸ್ತೆಯ 1ನೇ ಕ್ರಾಸ್ ನ ಒಂದನೇ ಮೇನ್ ವಾಸಿ ಗಣೇಶ (24), ಹಳೇಚಿಕ್ಕನಹಳ್ಳಿಯ ಹರಳಯ್ಯನಗರದ ಅನಿಲ (18), ದುರ್ಗಾಂಬಿಕಾ ದೇವಸ್ಥಾನದ ಹತ್ತಿರದ ವಾಸಿ ಶಿವಕುಮಾರ (25) ಹಾಗೂ ಭಾರತ್ ಕಾಲೋನಿಯ ಆರನೇ ಕ್ರಾಸ್ ವಾಸಿ ಮಾರುತಿ (24) ಬಂಧಿತ ಆರೋಪಿಗಳು. ಕೃತ್ಯಕ್ಕೆ ಉಪಯೋಗಿಸಿದ್ದ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಘಟನೆ ಹಿನ್ನೆಲೆ:
ದಾವಣಗೆರೆ ನಗರದ ಇಮಾಮ್ ನಗರ 2ನೇ ಕ್ರಾಸ್ ನಿವಾಸಿ ದುಗ್ಗೆಶೀ ಎಂಬ 32 ವರ್ಷದ ವ್ಯಕ್ತಿಯನ್ನು ಕಳೆದ ನವೆಂಬರ್ 4ರಂದು ಯಾರೋ ಕೊಲೆ ಮಾಡಿ ಶವವನ್ನು ಮೃತ ವ್ಯಕ್ತಿಯ ಮನೆಯಲ್ಲಿ ತಂದು ಹಾಕಿ ಹೋಗಿದ್ದರ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ್, ದಾವಣಗೆರೆ ನಗರ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೂಡಲೇ ಕಾರ್ಯ ಪ್ರವೃತ್ತರಾದ ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಶ್ವಿನ್ ಕುಮಾರ್ ಆರ್. ಜಿ. ಮತ್ತು ಸಿಬ್ಬಂದಿಗಳನ್ನೋಳಗೊಂಡ ತಂಡವು ಪ್ರಕರಣದಲ್ಲಿ ಕೃತ್ಯ ನಡೆದ 24 ಗಂಟೆಯ ಒಳಗಡೆ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಮೃತನ ಸಂಬಂಧಿಯಾದ ಆರೋಪಿತ ಗಣೇಶನು ಮೃತ ದುಗ್ಗೇಶ್ ಹೆಸರಲ್ಲಿ ದಾವಣಗೆರೆ ಆಕ್ಸಿಸ್ ಬ್ಯಾಂಕ್ ನಲ್ಲಿ ಇನ್ಸೂರೆನ್ಸ್ ಬಾಂಡ್ ಮಾಡಿಸಿದ್ದ. ಈ ವ್ಯಕ್ತಿಯನ್ನು ಕೊಲೆ ಮಾಡಿದರೆ ಬಾಂಡ್ ಮೊತ್ತ.40 ಲಕ್ಷ ರೂ ಹಣ ಬರುತ್ತದೆ ಎಂಬ ದುರಾಸೆಯಿಂದ ತನ್ನ ಸ್ನೇಹಿತರ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಕ್ಷಿಪ್ರ ಕಾರ್ಯಚರಣೆ ನಡೆಸಿ ಕೊಲೆ ನಡೆದ 24 ಗಂಟೆಯ ಒಳಗಡೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಸೇರಿದಂತೆ ಆಜಾದ್ ನಗರ ಪೊಲೀಸ್ ಠಾಣೆಯ ಪಿಎಸ್ಐ ಇಮ್ಮಿಯಾಜ್, ಸಿಬ್ಬಂದಿಗಳಾದ ನರೇಶ್ ಎ.ಪಿ., ಮಂಜುನಾಥ ನಾಯ್ಕ್, ಕೃಷ್ಣ ನಂದ್ಯಾಲ್, ವೆಂಕಟೇಶ್ ಜಿ ಆರ್., ಗುಗ್ಗರಿ ಲೋಕೇಶ್, ಖಾಜಾ ಹುಸೇನ್, ಸಲಾವುದ್ದೀನ್, ಮಹಾಂತೆಶ್ ಕೆಳಗಿನಮನಿ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿಗಳಾದ ರಾಮಚಂದ್ರ ಜಾಧವ್, ರಾಘವೇಂದ್ರ, ಶಾಂತರಾಜ್ ಅವರನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.