SUDDIKSHANA KANNADA NEWS/ DAVANAGERE/ DATE:05-02-2024
ದಾವಣಗೆರೆ: ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿಗೆ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಕಮಲ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರರಾಗಿ ಕಣಕ್ಕಿಳಿದು ಸೋಲುಂಡಿದ್ದರು. ಅಧಿಕೃತ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಅವರಿಗಿಂತ ಮೂರು ಪಟ್ಟ ಅಧಿಕ ಮತಗಳನ್ನು ಪಡೆದಿದ್ದರು. ಮಾಡಾಳ್ ವಿರೂಪಾಕ್ಷಪ್ಪ ಅವರು ಲಂಚ ಪ್ರಕರಣದಲ್ಲಿ ಬಂಧನ ಆಗಿದ್ದ ಕಾರಣ ಹಾಗೂ ಬಿಜೆಪಿಗೆ ಭಾರೀ ಮುಖಭಂಗ ಆದ ಕಾರಣಕ್ಕೆ ಟಿಕೆಟ್ ನಿರಾಕರಿಸಲಾಗಿತ್ತು.
ಫೆಬ್ರವರಿ 7ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ಸಂಸದೀಯ ಮಂಡಳಿ ಸದಸ್ಯರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ರವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿ ಮಾಡಿಕೊಳ್ಳಲಾಗಿದೆ. ಬಿಜೆಪಿ ಸೇರ್ಪಡೆಯಾಗುತ್ತಿರುವುದನ್ನು ಮಾಡಾಳ್ ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ.
ಪಕ್ಷೇತರರಾಗಿ ಮಾಡಾಳ್ ಮಲ್ಲಿಕಾರ್ಜುನ್ ಅವರು ಸ್ಪರ್ಧೆ ಮಾಡಿದ್ದ ಕಾರಣದಿಂದ ಬಿಜೆಪಿಯು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಿ. ವೈ. ವಿಜಯೇಂದ್ರ ಅವರು ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಪಕ್ಷ ಬಿಟ್ಟು ಹೋದವರನ್ನು ಸೇರ್ಪಡೆ ಕಾರ್ಯಕ್ಕೆ ಕೈಹಾಕಲಾಗಿತ್ತು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆ ತರುವ ಮೂಲಕ ಕಾಂಗ್ರೆಸ್ ಗೆ ಶಾಕ್ ನೀಡಿದ್ದರು.
ಇನ್ನು ಮಾಡಾಳ್ ವಿರೂಪಾಕ್ಷಪ್ಪ ಅವರೂ ಸಹ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ. ಚನ್ನಗಿರಿ ಕ್ಷೇತ್ರ ಮಾತ್ರವಲ್ಲ, ದಾವಣಗೆರೆ ಜಿಲ್ಲೆಯಾದ್ಯಂತ ಪ್ರಭಾವ ಹೊಂದಿರುವ ನಾಯಕ. ಶಾಸಕರಾಗಿಯೂ ವಿರೂಪಣ್ಣ ಅಂತಾನೇ ಖ್ಯಾತಿ ಗಳಿಸಿದ್ದರು. ಅಭಿವೃದ್ಧಿ ಕಾರ್ಯಗಳ ಮೂಲಕ ಮನೆ ಮಾತಾಗಿದ್ದರು. ಯಡಿಯೂರಪ್ಪರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಮಾತ್ರವಲ್ಲ ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿದಾಗಲೂ ಚನ್ನಗಿರಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಯಡಿಯೂರಪ್ಪರ ಜೊತೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರಲಿಲ್ಲ.
ಆದ್ರೆ, ಪಕ್ಷೇತರರಾಗಿ ಕಣಕ್ಕಿಳಿದ ಕಾರಣ ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ಮಾತ್ರ ಜಿಲ್ಲಾ ಬಿಜೆಪಿಯು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿರುವುದಾಗಿ ಘೋಷಿಸಿತ್ತು. ಆದ್ರೆ, ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಎಲ್ಲವೂ ಅದಲು ಬದಲಾಗಿದ್ದು, ಹಳೆಯ ಮುಖಂಡರು, ಮಾಜಿ ಶಾಸಕರು, ಮಾಜಿ ಸಂಸದರನ್ನು ಸೆಳೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಮಾಡಾಳ್ ಮಲ್ಲಿಕಾರ್ಜುನ್ ಅವರೂ ಸಹ ತಾಲೂಕಿನಲ್ಲಿ ಉತ್ತಮ ಪ್ರಭಾವ ಹೊಂದಿದ್ದಾರೆ. ಎಲ್ಲೆಡೆ ಪ್ರವಾಸ ಮಾಡಿದ್ದಾರೆ. ತನ್ನದೇ ಆದ ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿ. ವೈ. ವಿಜಯೇಂದ್ರ ಅವರು ಮತ್ತೆ ಮೇಲುಗೈ ಸಾಧಿಸುವ ಜೊತೆಗೆ ಪಕ್ಷ ಮತ್ತಷ್ಟು ಸದೃಢಗೊಳಿಸಲು ಕಾರ್ಯತಂತ್ರದ ಭಾಗವಾಗಿಯೇ ಹಳೆಯ ಮುಖಂಡರು ಮತ್ತೆ ಬಿಜೆಪಿ ಮರಳತ್ತಿರುವುದು ಎಂಬುದು ವಿಶೇಷ.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಬೆಂಗಳೂರಿನಲ್ಲಿ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸುವ ಸಂಬಂಧ ತೀರ್ಮಾನಿಸಲಾಗಿದೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರೂ ಸಮ್ಮತಿಸಿದ್ದಾರೆ. ಹಾಗಾಗಿ, ಫೆಬ್ರವರಿ 7ಕ್ಕೆ ಮತ್ತೆ ಬಿಜೆಪಿ ಪಕ್ಷಕ್ಕೆ ಮರಳುತ್ತಿದ್ದೇನೆ. ಬೆಂಗಳೂರಿನಲ್ಲಿ ಫೆಬ್ರವರಿ 7ರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಮರಳಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.