SUDDIKSHANA KANNADA NEWS/ DAVANAGERE/ DATE: 301-09-2024
ದಾವಣಗೆರೆ: ಬಿಜೆಪಿ ಭಿನ್ನಮತ ಸದ್ಯಕ್ಕೆ ಶಮನವಾಗುವ ಲಕ್ಷಣ ಗೋಚರಿಸುತ್ತಿಲ್ಲ. ದಾವಣಗೆರೆ ಜಿಲ್ಲೆಯಲ್ಲಿಯೂ ಬಿಜೆಪಿ ಒಡೆದ ಮನೆಯಾಗಿದೆ. ಕೇಂದ್ರದ ಮಾಜಿ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ, ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಸೇರಿದಂತೆ ಬಿಜೆಪಿ ನಾಯಕರು ಸಭೆ ನಡೆಸಿದ ಬಳಿಕ ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ ಟೀಂ ಕೌಂಟರ್ ನೀಡಲು ಸಭೆ ಕರೆದಿದೆ.
ಅಕ್ಟೋಬರ್ 1ರಂದು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿನ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ನಿವಾಸದಲ್ಲಿ ಸಭೆ ಕರೆಯಲಾಗಿದೆ. ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಸಭೆಯಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು, ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು, ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದು, ಈ ಸಭೆಯಲ್ಲಿ ಸಿದ್ದೇಶ್ವರ ಹಾಗೂ ಯತ್ನಾಳ್ ವಿರುದ್ಧ ಗುಡುಗುವ ಸಾಧ್ಯತೆ ಹೆಚ್ಚಿದೆ.
ಯತ್ನಾಳ್ ಗೆ ಕೌಂಟರ್ ಕೊಟ್ಟಿದ್ದ ಎಂ. ಪಿ. ರೇಣುಕಾಚಾರ್ಯ ಅವರು, ಲೋಕಸಭೆ ಚುನಾವಣೆಯಲ್ಲಿ ಸೋಲಲು ಸ್ವಯಂಕೃತ ಅಪರಾಧವೇ ಕಾರಣ. ಬಿ. ವೈ. ವಿಜಯೇಂದ್ರ ನೇಮಕ ವಿರೋಧಿಸಿದರೆ ಪಕ್ಷದ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ. ಪಿ. ನಡ್ಡಾ ವಿರೋಧಿಸಿದಂತೆ ಎಂದು ಹೇಳಿದ್ದರು. ಯಾವುದೇ ಕಾರಣಕ್ಕೂ ವಿಜಯೇಂದ್ರ ಬದಲಾವಣೆ ಸಾಧ್ಯವಿಲ್ಲ ಎಂದಿದ್ದರು. ಯತ್ನಾಳ್ ಮಾತ್ರ ವಿಜಯೇಂದ್ರ ವಿರುದ್ಧದ ವಾಗ್ದಾಳಿ ಮುಂದುವರಿಸುವುದನ್ನು ನಿಲ್ಲಿಸಿಲ್ಲ. ಇದು ರೇಣುಕಾಚಾರ್ಯ ಅಂಡ್ ಟೀಂ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ 1200 ಕೋಟಿ ರೂಪಾಯಿ ಸಿಎಂ ಖುರ್ಚಿಗೆ ರೆಡಿ ಮಾಡಿಕೊಂಡಿದ್ದಾರೆ ಎಂಬ ಹೇಳಿಕೆ ಸಂಚಲನ ಮೂಡಿಸಿದ್ದು, ಬಿಜೆಪಿಗೂ ಸಾಕಷ್ಟು ಮುಜುಗರ ತಂದಿದೆ. ಈ ವಿಚಾರವೂ ಚರ್ಚಿತವಾಗುವ ವಿಷಯ.
ಎಸ್. ಎ. ರವೀಂದ್ರನಾಥ್ ಅವರು ಬಿ. ಎಸ್. ಯಡಿಯೂರಪ್ಪನವರಷ್ಟೇ ಹಿರಿಯರು. ಪಕ್ಷ ಕಟ್ಟಲು ಸಾಕಷ್ಟು ಶ್ರಮಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಬೇರೂರಲು ರವೀಂದ್ರನಾಥ್ ಅವರ ಶ್ರಮ, ಕೊಡುಗೆ ಅಲ್ಲಗೆಳೆಯುವಂತಿಲ್ಲ. ಯಾಕೆಂದರೆ
ಅಷ್ಟು ಕಷ್ಟಪಟ್ಟಿದ್ದಾರೆ. ರವೀಂದ್ರನಾಥ್ ಅವರ ಕೊಡುಗೆ ಬಗ್ಗೆ ಯಾರೂ ಮಾತನಾಡಲ್ಲ. ಸುಮಾರು ನಾಲ್ಕು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದಿರುವ ರವೀಂದ್ರನಾಥ್ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗ ಇದೆ. ಲೋಕಸಭೆ ಚುನಾವಣೆ ಬಳಿಕ ಜಿ. ಎಂ. ಸಿದ್ದೇಶ್ವರ ಅವರು ಲೋಕಸಭೆ ಚುನಾವಣೆಯ ಸೋಲಿನ ಬಳಿಕ ವರಸೆ ಬದಲಿಸಿದ್ದಾರೆ. ಮೊದಲಿನಿಂದಲೂ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಆಪ್ತರಾಗಿದ್ದ ಸಿದ್ದೇಶ್ವರ ಅವರು ಚುನಾವಣೆಯಲ್ಲಿ ಸೋಲಲು ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಮುನಿಸಿಕೊಂಡಿದ್ದಾರೆ. ಇದರ ಮುಂದುವರಿದ ಭಾಗ ಎಂಬಂತೆ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಸಿದ್ದೇಶ್ವರ ಅವರು ಪಾಲ್ಗೊಂಡಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಮಾತ್ರವಲ್ಲ, ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಜಿಎಂಐಟಿ ವಸತಿ ಗೃಹಕ್ಕೆ ಆಗಮಿಸಿ ಸಭೆ ನಡೆಸಿ, ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದರು. ಬಳಿಕ ಗಣೇಶ ಗಲಾಟೆಯಲ್ಲಿ ಬಂಧಿತರಾಗಿದ್ದ ಹಿಂದೂ ಸಂಘಟನೆಯ ಮುಖಂಡರನ್ನು ಜೈಲಿನಲ್ಲಿ ಭೇಟಿಯಾಗಿದ್ದರು. ಅವರ ಮನೆಗಳಿಗೂ ಭೇಟಿ ನೀಡಿ ಸಾಂತ್ವನ
ಹೇಳಿ ಧೈರ್ಯ ತುಂಬಿ ಬಂದಿದ್ದರು.
ಇದಕ್ಕೂ ಮುನ್ನ ರೇಣುಕಾಚಾರ್ಯ ಬಣವು ಜೈಲಿಗೆ ಭೇಟಿ ನೀಡಿತ್ತು. ಆ ಬಳಿಕ ಸಿದ್ದೇಶ್ವರ ಅವರು ಯತ್ನಾಳ್ ಅವರನ್ನು ಕರೆಸಿದ್ದರು. ಪ್ರತಾಪ್ ಸಿಂಹ ಕೂಡ ಬಂದಿದ್ದರು. ಈಗ ಸಭೆ ಕರೆದಿರುವ ರೇಣುಕಾಚಾರ್ಯ ಬಣವು ಯತ್ನಾಳ್ ಹಾಗೂ ಸಿದ್ದೇಶ್ವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ಖಚಿತ.
ದಾವಣಗೆರೆ ಬಿಜೆಪಿ ಭಿನ್ನಮತ ತಣ್ಣಗಾದಂತೆ ಕಂಡು ಬಂದಿತ್ತು. ಆದ್ರೆ, ಒಳಗೊಳಗೆ ಬುಸುಗುಡುತಿತ್ತು. ಈಗ ಮತ್ತೆ ಬೀದಿಗೆ ಬಂದಿದ್ದು, ಬಿಜೆಪಿ ಜಿಲ್ಲಾಧ್ಯಕ್ಷರೇ ನಮಗೆ ಸುಪ್ರೀಂ ಎನ್ನುವ ರೇಣುಕಾಚಾರ್ಯ ಬಣವು ಸಿದ್ದೇಶ್ವರ ಬಣದ ವಿರುದ್ಧ ಅತೃಪ್ತಿ ಹೊರ ಹಾಕುತ್ತಲೇ ಇದೆ. ಜಿಲ್ಲಾಧ್ಯಕ್ಷರ ಕಾರ್ಯವೈಖರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರೇಣುಕಾಚಾರ್ಯ ಬಹುಪರಾಕ್ ನೀಡಿದ್ದರು. ರಾಜ್ಯದಲ್ಲಿ ವಿಜಯೇಂದ್ರ ಹಾಗೂ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರು ನೀಡುವ ಸೂಚನೆಯಂತೆ ಕಾರ್ಯನಿರ್ವಹಿಸುತ್ತೇವೆ ಎಂದಿದ್ದರು. ಆದ್ರೆ, ಸಭೆ ಕರೆದಿರುವುದು ಯಾವ ವಿಚಾರಕ್ಕೆ ಎನ್ನುವುದಕ್ಕಿಂತ ಸಿದ್ದೇಶ್ವರ ಅವರ ನಡೆ ವಿರುದ್ಧ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದ್ದಾರೆ. ವಿಜಯೇಂದ್ರ ಭ್ರಷ್ಟ, ರಾಜ್ಯ ಘಟಕದ ಅಧ್ಯಕ್ಷರಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಬದಲಾವಣೆ ಆಗಬೇಕು ಎಂಬ ಬಹಿರಂಗ ಹೇಳಿಕೆ ನೀಡಿದ್ದ ರಮೇಶ್ ಜಾರಕಿಹೊಳಿ ದಾವಣಗೆರೆಗೆ ಬರಲಿಲ್ಲ. ಫೈರ್ ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಂದಿದ್ದರು. ಜಿಎಂಐಟಿ ಅತಿಥಿ ಗೃಹದಲ್ಲಿ ಪ್ರತಾಪ್ ಸಿಂಹ, ಯತ್ನಾಳ್, ಸಿದ್ದೇಶ್ವರ ಅವರು ರಹಸ್ಯ ಸಭೆ ನಡೆಸಿದ್ದರು. ಕೌಂಟರ್ ಆಗಿ ಸಭೆ ಕರೆದಿರುವುದು ಕುತೂಹಲ ಗರಿಗೆದರುವಂತೆ ಮಾಡಿದೆ.
ಈ ಹಿಂದೆ ಭಿನ್ನಮತೀಯರ ಸಭೆಯಲ್ಲಿ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರೂ ಪಾಲ್ಗೊಂಡಿದ್ದರು. ಈಗ ಪ್ರತಾಪ್ ಸಿಂಹ ಸಹ ಆಗಮಿಸುತ್ತಿದ್ದು, ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಆಗಮನ ಸಂಚಲನ ಸೃಷ್ಟಿಸುವಂತೆ ಮಾಡಿದೆ. ಮಾತ್ರವಲ್ಲ, ವಿಜಯೇಂದ್ರ ವಿರುದ್ಧ ಬಂಡೆದ್ದಿರುವುದರಿಂದ ಸಹಜವಾಗಿಯೇ ಕುತೂಹಲ ಗರಿಗೆದರಿದೆ. ಪ್ರಸ್ತುತ ಬಿಜೆಪಿಯಲ್ಲಿನ ಬೆಳವಣಿಗೆಗಳು, ವಿಜಯೇಂದ್ರ ವಿರುದ್ಧದ ತಂತ್ರಗಾರಿಕೆ ರೂಪಿಸುವ ಕುರಿತಂತೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದ್ರೆ, ಈಗ ರೇಣುಕಾಚಾರ್ಯ ಟೀಂ ಸಭೆ ಎಲ್ಲರ ಚಿತ್ತ ನೆಡುವಂತೆ ಮಾಡಿದೆ.