SUDDIKSHANA KANNADA NEWS/ DAVANAGERE/ DATE:24-12-2024
ದಾವಣಗೆರೆ: ಜನಸೇವೆ ಮಾಡಲು ಅಧಿಕಾರವೇ ಬೇಕೆಂದೇನಿಲ್ಲ. ಅಧಿಕಾರ ಇಲ್ಲದೆಯೋ ಮಾಡಬಹುದು. ಈ ಹಿಂದೆ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಜನಸೇವೆ ಮಾಡಿ ಜನಪ್ರಿಯತೆ ಗಳಿಸಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಜನರೊಳಿತಿಗಾಗಿ ಹಗಲಿರುಳು ಕೆಲಸ ಮಾಡಿದ್ದಾರೆ. ನಾನೇ ಕಣ್ಣಾರೆ ನೋಡಿದ್ದೇನೆ ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿಯೂ ಆದ ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸ್ವಪಕ್ಷೀಯ ಶಾಸಕನಿಗೆ ಟಾಂಗ್ ನೀಡಿದ್ದಾರೆ.
ಎಂಸಿಸಿ ಬಿ ಬ್ಲಾಕ್ ನ ಗೃಹ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೆಸರು ಪ್ರಸ್ತಾಪಿಸಲಿಲ್ಲ. ದಾವಣಗೆರೆ ನಗರ ಹಾಗೂ ಜಿಲ್ಲೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಕೊಡುಗೆ ಏನು ಎಂಬುದು ಎಲ್ಲರಿಗೂ ಗೊತ್ತು. ಇದು ಸ್ಕೂಲ್ ಅಲ್ಲ. ರಾಜಕಾರಣ. ರಾಜಕೀಯಕ್ಕೋಸ್ಕರ ಏನೋ ಉದ್ದೇಶ ಇಟ್ಟುಕೊಂಡು ಮಾತನಾಡಿದರೆ ನಾವೇನು ಮಾಡಲು ಆಗುತ್ತದೆ. ಇದಕ್ಕೆಲ್ಲ ಉತ್ತರ ಕೊಡುವ ಸಮಯವೂ ಇಲ್ಲ ಎಂದು ಕಿಡಿಕಾರಿದರು.
ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರು ಎಲ್ಲಾ ಕಡೆಗಳಲ್ಲಿಯೂ ಮಾತನಾಡುತ್ತಾರೆ. ಪಾರ್ಕ್, ರಸ್ತೆ ಸೇರಿದಂತೆ ಪ್ರತಿಯೊಂದು ಕಡೆಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿವೆ. ಆದರೂ ವಿನಾಕಾರಣ ಮಾತನಾಡುವುದು ಸರಿಯಲ್ಲ ಎಂಬುದು ತಮ್ಮ ಭಾವನೆ ಎಂದು ಹೇಳಿದರು.
ರಾಜಕೀಯ ಎಂದರೆ ಅವಕಾಶವಾದ. ಎಲ್ಲವನ್ನೂ ಅಧಿಕಾರದಲ್ಲಿ ಇದ್ದೇ ಮಾಡಲಾಗದು. ಅಧಿಕಾರ ಇಲ್ಲದೆಯೋ ಮಾಡಬಹುದು ಎಂಬುದನ್ನು ಈ ಹಿಂದೆಯೇ ಮಲ್ಲಿಕಾರ್ಜುನ್ ಅವರು ಸಾಧಿಸಿ ತೋರಿಸಿದ್ದಾರೆ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಮಾತನಾಡಿದರೆ ಅದಕ್ಕೆಲ್ಲಾ ಉತ್ತರ ಕೊಡಲು ಆಗದು ಎಂದು ಪ್ರಭಾ ಮಲ್ಲಿಕಾರ್ಜುನ್ ಕೆಂಡಮಂಡಲರಾದರು.
ಜನಪ್ರತಿನಿಧಿಗಳು ಸಮಾಜ ಸೇವೆ ಮಾಡಲು ಬಂದಿರುವುದು. ಈ ಕೆಲಸದತ್ತ ಮಾತ್ರ ಚಿತ್ತ ನೆಟ್ಟಿರಬೇಕು. ಮುಂದಿನ ದಿನಗಳಲ್ಲಿ ಸಚಿವರಾಗಬೇಕೆಂಬ ಕನಸು ಕಂಡಿದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಅದರ ಬಗ್ಗೆ ಅವರಲ್ಲಿಯೇ ಕೇಳಿ ಎಂದು ಶಿವಗಂಗಾ ಬಸವರಾಜ್ ಹೆಸರು ಪ್ರಸ್ತಾಪಿಸದೇ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಉತ್ತರಿಸಿದರು.