Home ದಾವಣಗೆರೆ ಮತದಾನದ ಹಕ್ಕಿನ ರಕ್ಷಣೆ ಎಲ್ಲರ ಜವಾಬ್ದಾರಿ: ದೆಹಲಿ ರಾಮಲೀಲಾ ಮೈದಾನದ ‘ಚಲೋ ದಿಲ್ಲಿ’ ಸಮಾವೇಶದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಪ್ರತಿಪಾದನೆ
ದಾವಣಗೆರೆನವದೆಹಲಿಬೆಂಗಳೂರು

ಮತದಾನದ ಹಕ್ಕಿನ ರಕ್ಷಣೆ ಎಲ್ಲರ ಜವಾಬ್ದಾರಿ: ದೆಹಲಿ ರಾಮಲೀಲಾ ಮೈದಾನದ ‘ಚಲೋ ದಿಲ್ಲಿ’ ಸಮಾವೇಶದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಪ್ರತಿಪಾದನೆ

Share
ಪ್ರಭಾ ಮಲ್ಲಿಕಾರ್ಜುನ
Share

ದಾವಣಗೆರೆ/ನವದೆಹಲಿ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸಲು ಸ್ವತಂತ್ರ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆ ಅತ್ಯಂತ ಅಗತ್ಯವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು. 

ನವದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ‘ಚಲೋ ದಿಲ್ಲಿ – ವೋಟ್ ಬಚಾವೋ, ದೇಶ್ ಬಚಾವೋ’ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಮತದಾರರ ಪಟ್ಟಿಯ ಪರಿಷ್ಕರಣೆ, ಮತದಾನದ ಹಕ್ಕಿನ ರಕ್ಷಣೆ ಹಾಗೂ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಸಮಾವೇಶದಲ್ಲಿ ಚರ್ಚಿಸಲಾಯಿತು. ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳ ಕುರಿತು ವಿರೋಧ ಪಕ್ಷಗಳು ವ್ಯಕ್ತಪಡಿಸಿರುವ ಆತಂಕಗಳನ್ನು ನಿವಾರಿಸಿ, ಜನರ ವಿಶ್ವಾಸವನ್ನು ಕಾಪಾಡುವುದು ಅಗತ್ಯವಾಗಿದೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಮತದಾರರ ಹಕ್ಕುಗಳು ಹಾಗೂ ಚುನಾವಣಾ ವ್ಯವಸ್ಥೆಗೆ ಸಂಬಂಧಿಸಿದ ಹಲವು ವಿಚಾರಗಳು ಸಾರ್ವಜನಿಕ ಚರ್ಚೆಗೆ ಬಂದಿವೆ. ಪ್ರತಿಯೊಬ್ಬ ಅರ್ಹ ಮತದಾರನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸಮರ್ಪಕವಾಗಿ ದಾಖಲಿಸುವುದು ಹಾಗೂ ಮತದಾನದ ಹಕ್ಕನ್ನು ಖಚಿತಪಡಿಸುವುದು ಚುನಾವಣಾ ವ್ಯವಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಚುನಾವಣೆಗಳು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಮತದಾರರ ಪಟ್ಟಿಯಲ್ಲಿ ಲೋಪಗಳು ಉಂಟಾದರೆ ಜನರ ನೈಜ ಆಶಯಗಳನ್ನು ಪ್ರತಿಬಿಂಬಿಸುವ ಸರ್ಕಾರವನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಧಕ್ಕೆಯಾಗುವ ಆತಂಕವಿದೆ ಎಂದು ಅಭಿಪ್ರಾಯಪಟ್ಟರು.

ಸಮಾವೇಶದ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಭದ್ರತಾ ವ್ಯವಸ್ಥೆಯ ಕುರಿತು ವ್ಯಕ್ತವಾದ ಪ್ರಶ್ನೆಗಳನ್ನು ಪ್ರಸ್ತಾಪಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಹಕ್ಕನ್ನು ಗೌರವಿಸಬೇಕು ಎಂದು ಪ್ರತಿಪಾದಿಸಿದರು.

‘ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದೆ. ಆ ಹಕ್ಕಿನ ರಕ್ಷಣೆಯೊಂದಿಗೆ ಸ್ವತಂತ್ರ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಕಾಪಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ’ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು, ಕರ್ನಾಟಕದ ಕಾಂಗ್ರೆಸ್ ಸಂಸದರು, ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕಾರ್ಯಕರ್ತರು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles