ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ‘ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್’ (ವಿಶ್ವ ಏಕತೆ ಆಚರಣೆ) ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು.
ಶತಾಬ್ದಿ ವರ್ಷದ ಜಾಗತಿಕ ಸಂಪರ್ಕ ಅಭಿಯಾನದ ಭಾಗವಾಗಿ ಸುಮಾರು 5,000ಕ್ಕೂ ಹೆಚ್ಚು ಭಾರತೀಯ ಮೂಲದ ನಿವಾಸಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜಕೀಯ ಹಾಗೂ ಜಾಗತಿಕ ನೀತಿಗಳ ಕುರಿತು:
ತಮ್ಮ ಭಾಷಣದಲ್ಲಿ ರಾಜಕೀಯದ ಕುರಿತು ಮಾತನಾಡಿದ ಮೋಹನ್ ಭಾಗವತ್, “ಇಂದಿನ ರಾಜಕೀಯವು ಕೇವಲ ಸ್ವಾರ್ಥದ ಆಟವಾಗಿದೆ. ಆದರೆ ನಾವು ಜಾಗತಿಕ ಮಟ್ಟದಲ್ಲಿ ಯುದ್ಧಗಳನ್ನು ತಡೆಯಲು ಮತ್ತು ನೀತಿ-ನಿಯಮಗಳು ಜಾರಿಯಾಗುವ ಮುನ್ನವೇ ಅವುಗಳ ಮೇಲೆ ಸರಿಯಾದ ರೀತಿಯಲ್ಲಿ ಪ್ರಭಾವ ಬೀರಲು ಬಯಸುತ್ತೇವೆ. ಅದಕ್ಕಾಗಿ ನಾವು ಸಕ್ರಿಯವಾಗಿ ರಾಜಕೀಯದಲ್ಲಿ ಪ್ರಭಾವ ಬೀರಬೇಕಾಗುತ್ತದೆ” ಎಂದು ಹೇಳಿದರು.
ಹಿಂದೂತ್ವ ಮತ್ತು ಮುಸ್ಲಿಂ ಸಮುದಾಯ:
ಹಿಂದೂತ್ವ ಹಾಗೂ ಅಲ್ಪಸಂಖ್ಯಾತರ ಕುರಿತು ಸ್ಪಷ್ಟನೆ ನೀಡಿದ ಅವರು, “ಯಾರಾದರೂ ತಾನು ಹಿಂದೂ ಎಂದು ಹೇಳಿಕೊಳ್ಳಬೇಕಾದರೆ, ಎಲ್ಲ ಮಾರ್ಗಗಳೂ ಒಂದೇ ಸತ್ಯದೆಡೆಗೆ ಸಾಗುತ್ತವೆ ಎಂಬುದನ್ನು ನಂಬಬೇಕು. ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವ ಯಾವುದೇ ವ್ಯಕ್ತಿ ಎಂದಿಗೂ ನಿಜವಾದ ಹಿಂದೂ ಆಗಿರಲು ಸಾಧ್ಯವಿಲ್ಲ. 1996ರ ಹರಿಯಾಣ ವಿಮಾನ ದುರಂತದ ಸಮಯದಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಹಿಂದೂ-ಮುಸ್ಲಿಂ ಭೇದಭಾವ ಮಾಡದೆ ಸಂತ್ರಸ್ತರ ನೆರವಿಗೆ ಧಾವಿಸಿದ್ದರು” ಎಂದು ಉದಾಹರಿಸಿದರು.
ಮಾನವೀಯತೆ ಒಂದೇ ಎಂಬ ಸಂದೇಶ ನೀಡಿದ ಅವರು, ಸಂಘಟನೆಯ ಜಾಗತಿಕ ಕಾರ್ಯವೈಖರಿ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಿದರು.





Leave a comment