SUDDIKSHANA KANNADA NEWS/ DAVANAGERE/ DATE:27-12-2024
ದಾವಣಗೆರೆ: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದ ಶ್ರೇಷ್ಠ ಆರ್ಥಿಕ ತಜ್ಞ. ಸರಳತೆಯ ರಾಜಕಾರಣಿ, ಶಿಸ್ತು ಬದ್ಧ ಆರ್ಥಿಕ ಸಲಹೆಗಾರರಾಗಿ, ವಿತ್ತ ಸಚಿವರಾಗಿ ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಇತಿಹಾಸದಲ್ಲಿ ಎಂದೆಂದೂ ಮರೆಯಲಾಗದ ಧ್ರುವತಾರೆ ಎಂದು ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ, ಕ. ಹೆಚ್. ಪ್ರೇಮಾ, ಶಿಲ್ಪಾ ಪರಶುರಾಮ್, ಫಯಾಜ್ ಅಹ್ಮದ್ ಹಾಗೂ ಮಂಜುಸ್ವಾಮಿ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಆರ್ಥಿಕ ಉದಾರೀಕರಣದ ರೂವಾರಿ. ಭಾರತದ ಬೆಳವಣಿಗೆಗೆ ನೀಡಿರುವ ಕೊಡುಗೆ ಅಪಾರ. ಭಾರತ ಕಂಡ ಅಪರೂಪದ ವಿನಯವಂತ ಪಾಂಡಿತ್ಯ ಮೂರ್ತಿ. ಯಾವ ರಾಜಕಾರಣಿಗಳು, ಪಕ್ಷಗಳೊಂದಿಗೆ ವೈರತ್ವ ಕಟ್ಟಿಕೊಳ್ಳದೇ ಶಿಸ್ತು ಬದ್ಧ
ಆರ್ಥಿಕತೆಯಲ್ಲಿ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದ ಶ್ರೇಷ್ಢ ಆಡಳಿತಗಾರ ಎಂದು ಬಣ್ಣಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್’ನ ಗವರ್ನರ್ ಆಗಿ, ದೇಶದ ವಿತ್ತ ಸಚಿವರಾಗಿ ಮನಮೋಹನ್ ಸಿಂಗ್ ಅವರು ತೆಗೆದುಕೊಂಡ ಹೆಜ್ಜೆಗಳು ಆರ್ಥಿಕ ಸುಧಾರಣೆಯ ಮಹತ್ವದ ತಿರುವು. ಜನಸಾಮಾನ್ಯರು, ಕಡು ಬಡವರು ಆರ್ಥಿಕ ಚೇತನ ಹೊಂದುವಂತಾಗಲು ಎಲ್ಲಾ ಹಂತದಲ್ಲೂ ದೇಶಕ್ಕೆ ಬಂಡವಾಳ ಹರಿದುಬರುವಂತಾಗಲು ಮನಮೋಹನ್ ಸಿಂಗ್ ಅವರು ತೋರಿಸಿದ ಆರ್ಥಿಕ ಶ್ರದ್ಧೆ, ಜಾಣ್ಮೆಯೇ ಕಾರಣ. ಭಾರತದ ಕೈಗಾರಿಕೆ, ಕೃಷಿ, ಶಿಕ್ಷಣ, ವಾಣಿಜ್ಯ ಸೇರಿದಂತೆ ಇತರ ಕ್ಷೇತ್ರಗಳು ಚೈತನ್ಯ ತುಂಬಿಕೊಳ್ಳಲು ಕಾರಣವಾಯಿತು ಎಂದು ಹೇಳಿದ್ದಾರೆ.
ಸಜ್ಜನಿಕೆ ಆಡಳಿತಗಾರ, ಮೃದು ಭಾಷೆಯ ಒಬ್ಬ ಮಹಾನ್ ನಾಯಕನನ್ನು ದೇಶ ಕಳೆದುಕೊಂಡಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕೈಗೊಂಡಿದ್ದ ಯೋಜನೆಗಳು ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿವೆ. ಮಾಹಿತಿ ಹಕ್ಕು ಕಾಯ್ದೆ, ಲೋಕಪಾಲ್, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆ, ಶಿಕ್ಷಣ ಹಕ್ಕು ಕಾಯ್ದೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ದೇಶದ ಭದ್ರ ಬುನಾದಿಗೆ ಸಹಕಾರಿಯಾಗಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.