SUDDIKSHANA KANNADA NEWS/ DAVANAGERE/ DATE:30-11-2024
ದಾವಣಗೆರೆ: ಶಾಲಾ ಮಕ್ಕಳಿಗೆ ಸರ್ಕಾರ ಆಯೋಜಿಸಿರುವ ಬಿಸಿಯೂಟ ಕಾರ್ಯಕ್ರಮ ಅತ್ಯಂತ ಉಪಯುಕ್ತವಾದದ್ದು. ಗುಣಮಟ್ಟದ ಆಹಾರವನ್ನು ಒದಗಿಸಬೇಕು ನಮ್ಮ ಮನೆ ಮಕ್ಕಳಂತೆ ಶಾಲೆಗೆ ಬರುವ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು.
ಅಡುಗೆ ಕೊಠಡಿ ಸೇರಿದಂತೆ ತರಗತಿ ಕೊಠಡಿಗಳಿಗೆ ಭೇಟಿ ನೀಡಿದ ಅವರು ಶಾಲೆ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಮೂಲಭೂತ ಸೌಕರ್ಯ ಕುರಿತು ಚರ್ಚೆ ನಡೆಸಿದರು. ಇದೇವೇಳೆ ಮಕ್ಕಳು ಊಟ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಮಕ್ಕಳೊಂದಿಗೆ ಊಟ ಮಾಡುವ ಮೂಲಕ ಆಹಾರ ರುಚಿ ಸವಿದರು. ಶಾಲೆಯಲ್ಲಿರುವ ಮಕ್ಕಳು ನಮ್ಮ ಮನೆಯ ಮಕ್ಕಳಿದ್ದಂತೆ ಊಟದ ವಿಚಾರದಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು, ಯಾವುದೇ ಲೋಪ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಜೊತೆ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಬಗ್ಗೆ ಚರ್ಚೆ ನಡಸಿದರು. ಶಾಲೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧವಿದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ ಎಂದರು. ಈ ವೇಳೆ ಗ್ರಾಮದ ಮುಖಂಡರು ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.