SUDDIKSHANA KANNADA NEWS/ DAVANAGERE/ DATE:03-02-2024
ಶಿವಮೊಗ್ಗ: ಕೆಲವು ವ್ಯಕ್ತಿಗಳ ಗೌರವವನ್ನು ಅವರಿಗೆ ಕೊಡುವ ಪ್ರಶಸ್ತಿಗಳು ಹೆಚ್ಚಿಸುತ್ತವೆ,ಆದರೆ ಕೆಲವೊಂದು ಪ್ರಶಸ್ತಿಗಳ ಗೌರವ ಕೆಲವರಿಗೆ ಕೊಟ್ಟಾಗ ಹೆಚ್ಚುತ್ತದೆ, ಎಲ್. ಕೆ. ಅಡ್ವಾಣಿಯವರಿಗೆ ಭಾರತ ರತ್ನ ಕೊಟ್ಟಿದ್ದರಿಂದಾಗಿ ಭಾರತ ರತ್ನದ ಗೌರವ ಹೆಚ್ಚಿದೆ ಎಂದೇ ಭಾವಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅಡ್ವಾಣಿ ಎನ್ನುವ ಹೆಸರೇ ನನಗೆ ರೋಮಾಂಚನ. ಅವರ ರಥಯಾತ್ರೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಆ ಕಾಲದಲ್ಲಿ ಅಡ್ವಾಣಿಯವರ ರಥಯಾತ್ರೆಗೆ ಸಿಕ್ಕ ಜನಮನ್ನಣೆ ಅದೇಷ್ಟಿತ್ತು ಎಂದರೆ, ಅವರ ರಥಯಾತ್ರೆ ಹೋದ ಹಲವು ರಾಜ್ಯಗಳಲ್ಲಿ ಸರ್ಕಾರಗಳು ಬಿದ್ದು ಹೋಗಿವೆ. ಬೇರೆ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ನೂರಾರು ಶಾಸಕರು, ಲೋಕಸಭಾ ಸದಸ್ಯರು ಗೆದ್ದಿದ್ದಾರೆ, ಸೋತಿದ್ದಾರೆ. ಆ ಮಟ್ಟದ ವಾತಾವರಣ (ಹವಾ) ನಿರ್ಮಾಣ ಆಡ್ವಾಣಿಯವರ ರಥಯಾತ್ರೆ ಮೂಲಕ ಆಗುತ್ತಿದ್ದನ್ನು ಈ ದೇಶದ ಜನ ನೋಡಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತದ ಮೂಲೆ ಮೂಲೆಯನ್ನುಅತಿ ಹೆಚ್ಚು ಬಾರಿ ಸುತ್ತಿದ ವ್ಯಕ್ತಿ ಯಾರು ಎನ್ನುವ ಪ್ರಶ್ನೆ ಬಂದರೆ ಈಗಲೂ ಮುಂದೆಯೂ ಅದು ಅಡ್ವಾಣಿ ಎನ್ನುವ ಉತ್ತರವೇ ಖಾಯಾಮಾಗಿ ಇರುತ್ತದೆ. ಅವರ ನಾಲ್ಕು ರಥಯಾತ್ರೆಗಳ ಅಬ್ಬರ ಅದೇಷ್ಟಿತ್ತುಎಂದರೆ ಅದಕ್ಕೆ ಇತ್ತೀಚಿನ ವರ್ಷಗಳಲ್ಲಿ ಗೊತ್ತಾಗಿದೆ. ಇವತ್ತು ಬಿಜೆಪಿ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷ, ಭಾರತದಲ್ಲಿ ಅತ್ಯಂತ ವೈಭವದ ದಿನಗಳನ್ನು ಬಿಜೆಪಿ ನೋಡುತ್ತಿದೆ. ಬಹುಶಃ ಈ ಹಂತದವರೆಗಿನ ಬೆಳವಣಿಗೆಯಲ್ಲಿ ಸಾವಿರ ಸಾವಿರ ಜನರ ಬದುಕಿನ ಸಮರ್ಪಣೆಯ ಜೊತೆಗೆ ಒಂದು ಹೆಜ್ಜೆ ಎಲ್ಲರಿಗಿಂತ ಹೆಚ್ಚೇ ಎನಿಸುವಷ್ಟು ಆಡ್ವಾಣಿಯವರ ಅವರ ರಥಯಾತ್ರೆಗಳ ಪಾತ್ರ ಇದೆ ಎಂದರೇ
ಅದು ಅತಿಶಯೋಕ್ತಿಯಲ್ಲ ಎಂದು ತಿಳಿಸಿದ್ದಾರೆ.
ಉಕ್ಕಿನ ಮನುಷ್ಯನ ಬದುಕು, ಅವರ ಜೀವನ ಶೈಲಿ ಲಕ್ಷ ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ಮಾದರಿಯೇ ಸರಿ. ಉಪ ಪ್ರಧಾನಿಯಾದಾಗ ನೈತಿಕತೆ ಪ್ರಶ್ನಿಸುವ ಸಂದರ್ಭ ಬಂದಾಗ ರಾಜೀನಾಮೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದು ಗಮನಿಸಿದವರಿಗೆ ಅಡ್ವಾಣಿಯವರಿಗೆ ಅಡ್ವಾಣಿಯೇ ಸಾಟಿ ಎಂದೆನಿಸಿತ್ತು. ಅಡ್ವಾಣಿಯವರು ಮೂರು ಬಾರಿ ತೀರ್ಥಹಳ್ಳಿಗೆ ಬಂದಿದ್ದು ಅವರೊಂದಿಗೆ ನನಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ಇವೆಲ್ಲವೂ ನನ್ನ ಜೀವನದ ಸೌಭಾಗ್ಯಗಳು ಎಂದು ಭಾವಿಸುವೆ ಎಂದು ನೆನಪು ಮಾಡಿಕೊಂಡಿದ್ದಾರೆ.
ಮೊನ್ನೆಯ ರಾಮ ಮಂದಿರ ಇವತ್ತು ರಾಷ್ಟ್ರಮಂದಿರವಾಗಿ ಉದ್ಘಾಟನೆಯಾಗಿ ನೂರಾರು ಕೋಟಿ ಭಾರತೀಯರ ಹೃದಯದೊಳಗೆ ರಾಮನ ಪ್ರತಿಷ್ಟಾಪನೆ ಆಗಿದೆ. ಪ್ರಪಂಚದ ಮೂಲೆ ಮೂಲೆಯಲ್ಲಿ ರಾಮನ ಪದೊಚ್ಚಾರವಾಗಿದೆ ಎಂದರೇ ಅದರಲ್ಲಿ ಆಡ್ವಾಣಿಯವರ ಪಾತ್ರ ಬಹಳ ದೊಡ್ಡದು, ಐದು ನೂರು ವರ್ಷಗಳ ಹೋರಾಟವನ್ನು ಕಳೆದ ಶತಮಾನದಲ್ಲಿ ಜೀವಂತವಾಗಿಟ್ಟು ಜನಾಂದೋಲನ ರೂಪಿಸಿದವರಲ್ಲಿ ಅಡ್ವಾಣಿಯವರೇ ಅಗ್ರಗಣ್ಯರು. ಈ ಹೋರಾಟದಲ್ಲಿ ಅವರು ಹಾಕಿಸಿಕೊಂಡ ಕೇಸುಗಳು ಕೋರ್ಟ್ ಕಛೇರಿ ಹೋರಾಟ , ತುರ್ತು ಪರಿಸ್ಥಿತಿ ಜೈಲುವಾಸ ಹೋರಾಟ ಅಬ್ಬಾ ಇದನ್ನೇಲ್ಲಾ ಗಮನಿಸಿದಾಗ ಆಡ್ವಾಣಿಯವರ ಸಾರ್ವಜನಿಕ ಬದುಕು ಈ ಜಗತ್ತಿನ ಶ್ರೇಷ್ಠ ಹೋರಾಟಗಾರರ ಸಾಲಿಗೆ ಸಮಾನವಾಗಿ ನಿಂತಿದೆ ಎಂದೆನಿಸುತ್ತದೆ ಎಂದಿದ್ದಾರೆ.
2009 ರ ಲೋಕಸಭಾ ಚುನಾವಣೆಗೆ ಆಡ್ವಾಣಿಯವರ ನೇತೃತ್ವದಲ್ಲಿ ಹೋದಾಗ ಈ ದೇಶದ ಜನ ಈ ಉಕ್ಕಿನ ಮನುಷ್ಯನಿಗೆ ಈ ಭೀಷ್ಮನಿಗೆ ಈ ಭಾರತದ ಪ್ರಧಾನಿಯಾಗಲು ಎಲ್ಲಾ ಅರ್ಹತೆ ಇದ್ದರೂ ಕೂಡ ಅವಕಾಶ ಕೊಡಲಿಲ್ಲ. ಸಮಾಜ ಮತ್ತು ಸಂಘಟನೆ ಸಮರ್ಪಿತ ಬದುಕು ಬದುಕಿದ ಈ ರಾಷ್ಟ್ರ ನಾಯಕ ಪ್ರಧಾನಿ ಸ್ಥಾನಕ್ಕೆ ಹೋಗದೇ ಇದ್ದಿದ್ದರ ಬಗ್ಗೆ ನನಗೆ ಈಗಲೂ ನೋವಿದೆ. ಭಾರತದ ನಿಜವಾದ ರತ್ನಕ್ಕೆ ಭಾರತ ರತ್ನ ದೊರೆತಿದೆ, ಸ್ವಯಂ ತಮಗೆ ತಾವೇ ಭಾರತ ರತ್ನ ಘೋಷಿಸಿಕೊಂಡಂತವರನ್ನು ನೋಡಿದ ಭಾರತಕ್ಕೆ, ಅಡ್ವಾಣಿಯವರಿಗೆ ಭಾರತ ರತ್ನ ನೀಡುವುದರ ಮೂಲಕ ಅಡ್ವಾಣಿಯವರನ್ನು ಪರಮೋಚ್ಚ ಗೌರವದ ಗರಿಯೊಂದಿಗೆ ವಿರಾಜಮಾನರಾಗುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಜೆಪಿ ಲಕ್ಷಾಂತರ ಕಾರ್ಯಕರ್ತರ ಪರವಾಗಿ ಪ್ರಣಾಮಗಳು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.