SUDDIKSHANA KANNADA NEWS/ DAVANAGERE/ DATE:21-03-2025
ದಾವಣಗೆರೆ (Davanagere): ಶಿಕ್ಷಣಕಾಶಿಯಂದೇ ಹೆಸರಾಗಿರುವ ಮಧ್ಯ ಕರ್ನಾಟಕದ ದಾವಣಗೆರೆ ನಗರದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ಕೊಡುಗೆ ನೀಡಿವೆ. ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಾಪೂಜಿ ವಿದ್ಯಾಸಂಸ್ಥೆಯು ಈ ವರ್ಷ ವಿನೂತನ ರೀತಿಯಲ್ಲಿ ಮಹಿಳಾ(Woman) ದಿನಾಚರಣೆಯನ್ನು ಆಚರಿಸುತ್ತಿದೆ.ಇದೇ ಮಾರ್ಚ್ 23 ರಂದು ಬೆಳಗ್ಗೆ 11 ಗಂಟೆಗೆ ನಗರದ ಎಸ್ ಎಸ್ ಎಂ ಕಲ್ಚರಲ್ ಸೆಂಟರ್ ನಲ್ಲಿ ಪಾರ್ವತಿ ಹೆಸರಿನಲ್ಲಿ ಅಂತರಾಷ್ಟ್ರೀಯ ಮಹಿಳಾ (Woman) ದಿನಾಚರಣೆ ಸಮಾರಂಭ ಆಯೋಜಿಸಲಾಗಿದೆ ಎಂದು ಬಾಪೂಜಿ ಆಡಳಿತ ಮಂಡಳಿಯ ಸದಸ್ಯೆ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬಾಪೂಜಿ ವಿದ್ಯಾಸಂಸ್ಥೆಯು ಗೌರವ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಜಂಟಿ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸಾರಥ್ಯದಲ್ಲಿ ಸಾಗುತ್ತಿದೆ. ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ, ಡಾ. ಪ್ರಭಾ ಮಲ್ಲಿಕಾರ್ಜುನ್, ಎ.ಎಸ್. ನಿರಂಜನ್, ಸಂಪತ್ ಮುತಾಲಿಕ್, ಶ್ರೀಮತಿ ಕೆ.ಎ. ಗಿರಿಜಮ್ಮ ಹಾಗೂ ಎ.ಎಸ್. ವೀರಣ್ಣ ಸೇವೆ ಸಲ್ಲಿಸುತ್ತಿದ್ದಾರೆ.
READ ALSO THIS STORY: ಕೇಂದ್ರದ ಜಲಜೀವನ ಮಿಷನ್ ಯೋಜನೆ ವೈಫಲ್ಯ: ಸದನದಲ್ಲೇ ಸಂಸದೆ Prabha Mallikarjun ಆರೋಪ!
ಈ ಸಂಸ್ಥೆಯು ಒಟ್ಟು ಐವತ್ತೆಂಟು ಅಂಗಸಂಸ್ಥೆಗಳನ್ನು ಹೊಂದಿದ್ದು ಎಲ್ ಕೆಜಿಯಿಂದ ಪದವಿ, ಮಾಸ್ಟರ್ ಪದವಿ ಮತ್ತು ಸಂಶೋಧನಾ ಕೇಂದ್ರಗಳವರೆಗೂ ಶಿಕ್ಷಣ ನೀಡುತ್ತಾ ಬರುತ್ತಿರುವ ಈ ಸಂಸ್ಥೆಯು ತನ್ನ ವೃತ್ತಿಯ ಬಾಂಧವರನ್ನ ಕುಟುಂಬದ
ಸದಸ್ಯರಂತೆ ಕಾಣುತ್ತಾ ಬರುತ್ತಿದೆ.ಸಂಸ್ಥೆಯು ಪ್ರತಿವರ್ಷ ಮಹಿಳಾ ದಿನಾಚರಣೆಯೊಂದಿಗೆ ಮಹಿಳೆಯರನ್ನು ಸ್ವಾವಲಂಬಿಗಳಾಗಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದೆ. ಹಾಗೆಯೇ ಈ ವರ್ಷ ಪಾರ್ವತಿ ಎಂಬ ಹೆಸರಿನ ಮಹಿಳಾ ಕೋಶ ಸ್ಥಾಪಿಸಿ, ಅದರ ಅಡಿಯಲ್ಲಿ ವಿನೂತನವಾಗಿ ಮಹಿಳಾ ದಿನಾಚರಣೆ ಯನ್ನು ಆಚರಿಸಲು ಸಜ್ಜಾಗಿದೆ.
ಬಾಪೂಜಿ ವಿದ್ಯಾಸಂಸ್ಥೆ ಅನೇಕ ಕುಟುಂಬಕ್ಕೆ ಅನ್ನ, ಆಶ್ರಯ, ಅರಿವು ನೀಡುವ ಕಾಯಕ ಮಾಡುತ್ತಾ ಬರುತ್ತಿದ್ದು. ಇಂತಹ ಕಾಯಕದೊಂದಿಗೆ ಈ ವರ್ಷ ತಮ್ಮ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ನಾಡಿನ ಮಹಿಳೆಗೆ ಅರ್ಥಪೂರ್ಣವಾದ ಗೌರವ ಸಲ್ಲಿಸಿದೆ. ಅಲ್ಲದೆ ಮಹಿಳೆಯರ ಪ್ರತಿಭೆಯ ಅನಾವರಣಕ್ಕಾಗಿ *ಮಿಸ್ ಪಾರ್ವತಿಗಾಗಿ ಅನೇಕ ಸ್ಪರ್ಧೆಗಳನ್ನು ಮಹಿಳೆಯರಿಗಾಗಿಯೇ ಆಯೋಜನೆ ಮಾಡಲಾಗಿತ್ತು ಈ ಸ್ಪರ್ಧೆಗಳು ಮಹಿಳೆಯರ ಆಂತರಿಕ ಮತ್ತು ಬೌದ್ಧಿಕಮಟ್ಟವನ್ನು (ಆಂತರಿಕ ಸೌಂದರ್ಯ) ಹೆಚ್ಚಿಸುವ ಮೂಲಕ ದೈಹಿಕ ಸಾಮರ್ಥ್ಯವನ್ನು ಸದೃಢಗೊಳಿಸುವ ನೆಲೆಯಲ್ಲಿ ಆಯೋಜಿಸಲಾಗಿತ್ತು.
ಮಿಸ್ ಪಾರ್ವತಿ ಸ್ಪರ್ಧೆಗಾಗಿ 120 ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧಿಸಿದ್ದಾರೆ. ಸ್ಪರ್ಧೆಯನ್ನು ಮೂರು ಹಂತದಲ್ಲಿ ನಡೆಸಲಾಗಿದ್ದು ಮೊದಲ ಹಂತದಲ್ಲಿ ಪ್ರಬಂಧ ಸ್ಪರ್ಧೆ, ಎರಡನೇ ಹಂತದಲ್ಲಿ ಆಶು ಭಾಷಣ ಸ್ಪರ್ಧೆ ಅಂತಿಮ ಹಂತದಲ್ಲಿ ರ್ಯಾಂಪ್ ವಾಕ್ ಸ್ಪರ್ಧೆ ನಡೆಸಿ ಮತ್ತು ಮೌಖಿಕ ಪ್ರಶ್ನೆ ಗಳನ್ನು ಕೇಳುವ ಮೂಲಕ ಮಿಸ್ ಪಾರ್ವತಿಯನ್ನು ಆಯ್ಕೆ ಮಾಡಲಾಗಿದೆ. ಈ ಸ್ಪರ್ಧೆಯನ್ನು ಮಹಿಳಾ (Woman) ಸಬಲೀಕರಣ ವಿಚಾರವನ್ನು ಇಟ್ಟುಕೊಂಡು ನಡೆಸಲಾಗಿದೆ.
ಕಲೋತ್ಸವ ಸ್ಪರ್ಧೆಯಲ್ಲಿ ಬೆಂಕಿಗೆ ರಹಿತ ಆಹಾರ ಸಿದ್ಧತೆ, (ಕುಕ್ಕಿಂಗ್ ವಿಥೌಟ್ ಫೈರ್), ರಂಗೋಲಿ, ಗೀತ ಗಾಯನ (ಏಕವ್ಯಕ್ತಿ), ಸಮೂಹ ಗಾಯನ, ವಾದ್ಯ ಸಹಿತ ಏಕವ್ಯಕ್ತಿ ಗೀತ ಗಾಯನ ಸ್ಪರ್ಧೆಯನ್ನು ನಡೆಸಲಾಯಿತು.
ಕ್ರೀಡೋತ್ಸವ ಸ್ಪರ್ಧೆ ಯಲ್ಲಿ ಥ್ರೋ ಬಾಲ್, ಸೆಟಲ್ ಬ್ಯಾಡ್ಮಿಂಟನ್, ಚೆಸ್, ಕೇರಮ್ ಸ್ಪರ್ಧೆಯನ್ನು ಆಟ ಆಡಿಸಲಾಯಿತು. ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ವೃತ್ತಿ ನಿರ್ವಹಣೆ ಮಾಡುತ್ತಿರುವ ಪ್ರತಿಯೊಬ್ಬರನ್ನು ಈ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಹುರಿದುಂಬಿಸಲಾಗಿದೆ.
ಮಹಿಳೆ ನಾಲ್ಕು ಗೋಡೆಯ ಮಧ್ಯೆ ಬದುಕುವುದಲ್ಲ. ಸಮಾಜದ ಮುಖ್ಯ ವಾಹಿನಿಗೆ ಬಂದು, ಸ್ವತಂತ್ರವಾಗಿ ಬದುಕಬೇಕು. ಅವಳ ಜ್ಞಾನ ದೇಶದ ಎಲ್ಲಾ ರಂಗದಲ್ಲೂ ಹಂಚಿಕೆ ಆಗಬೇಕು. ಆ ಮೂಲಕ ಅವಳು ಪುರುಷನ ಸಮಾನವಾಗಿ ಘನತೆಯಿಂದ ಬದುಕಬೇಕು ಹಾಗಾಗಿಯೇ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸದಸ್ಯರು ಹಾಗೂ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಪತ್ರಿಕಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಜಗತ್ತಿನಲ್ಲಿ ಹೆಣ್ಣು ಶೋಷಣೆಗೆ ಒಳಗಾಗಿ ತನ್ನತನವನ್ನು ಕಳೆದುಕೊಂಡಿದ್ದಳು. ಆಧುನಿಕ ಶಿಕ್ಷಣ ಅವಳನ್ನು ಸ್ವಲ್ಪ ಮಟ್ಟಿಗೆ ಮುನ್ನೆಲೆಗೆ ತಂದಿತು. ಆದರೆ ಈಗ ತಾಂತ್ರಿಕ, ವೈದ್ಯಕೀಯ, ಇತರೆ ಶಿಕ್ಷಣ ಪಡೆಯುವ ಮೂಲಕ ಈ ಶತಮಾನದ ಹೆಣ್ಣು ತನ್ನ ಜ್ಞಾನ ಶಕ್ತಿಯನ್ನು ಲೋಕಕ್ಕೆ ತೋರಿದ್ದಾಳೆ. ಉದಾಹರಣೆ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ಮಾಡಿದ ಸಾಧನೆಯನ್ನು ಇಲ್ಲಿ ಸ್ಮರಿಸಬಹುದು. ಅಂತಹ ಶಕ್ತಿ ನಮ್ಮ ಸಂಸ್ಥೆಯ ಎಲ್ಲಾ ಮಹಿಳೆಯರಿಗೆ ಒದಗುವಂತಾಗಲಿ ಎಂದು ಈ ಕಾರ್ಯಕ್ರಮ ವಿವಿಧ ಹಂತದಲ್ಲಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಳೆದ ಮಾ. 8 ರಿಂದ 23 ರವರೆಗೂ ಈ ಸ್ಪರ್ಧೆಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು ಎಂದು ಆಯೋಜಕರು ತಿಳಿಸಿದ್ದಾರೆ.