ಶ್ರೀರಾಮನ ಕ್ಷೇತ್ರ ಅಯೋಧ್ಯೆಯಲ್ಲಿ ಭದ್ರತಾ ಲೋಪವಾಗಿರುವ ಬಗ್ಗೆ ವರದಿಯಾಗಿದೆ. ವ್ಯಕ್ತಿಯೊಬ್ಬ ಕನ್ನಡಕದಲ್ಲಿ ಎರಡು ಕ್ಯಾಮೆರಾಗಳನ್ನು ಅಳವಡಿಸಿಕೊಂಡು ರಾಮಮಂದಿರಕ್ಕೆ ಎಂಟ್ರಿಯಾಗಿದ್ದ. ಕ್ಯಾಮೆರಾದಲ್ಲಿ ಗೌಪ್ಯವಾಗಿ ದೇಗುಲದ ಫೋಟೋವನ್ನು ತೆಗೆಯುತ್ತಿದ್ದ. ಇದು ಭದ್ರತಾ ಸಿಬ್ಬಂದಿಗೆ ಗೊತ್ತಾಗಿ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗ್ತಿದೆ.
ಹೆಚ್ಚಿನ ವಿಚಾರಣೆಗಾಗಿ ಆತನನ್ನು ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ವರದಿಗಳ ಪ್ರಕಾರ, ಆರೋಪಿ ಸೋಮವಾರ ರಾಮಲಲ್ಲಾನ ದರ್ಶನ ಪಡೆಯಲು ಅಯೋಧ್ಯೆಗೆ ಆಗಮಿಸಿದ್ದ. ಕ್ಯಾಮೆರಾ ಇರುವ ಕನ್ನಡಕ ಧರಿಸಿದ್ದ ಈತ, ದೇಗುಲದ ಎಲ್ಲಾ ಭದ್ರತಾ ಚೆಕ್ ಪಾಯಿಂಟ್ ದಾಟಿ ಬಂದರೂ ಸಿಬ್ಬಂದಿಗೆ ಗೊತ್ತಾಗಲಿಲ್ಲ.
ಅದೇ ರೀತಿ ರಾಮಮಂದಿರ ಸಂಕಿರ್ಣಕ್ಕೆ ಆಗಮಿಸಿದ್ದ ಆರೋಪಿ ಫೋಟೋ ತೆಗೆಯಲು ಆರಂಭಿಸಿದ್ದ. ಇದು ಅಲ್ಲಿರುವ ಭದ್ರತಾ ಸಿಬ್ಬಂದಿಗೆ ಗೊತ್ತಾಗಿ ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಹೆಚ್ಚಿನ ತನಿಖೆಗಾಗಿ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಆತನನ್ನು ನೀಡಿದ್ದಾರೆ. ಆತ ಧರಿಸಿದ್ದ ಕನ್ನಡಕದ ಎರಡೂ ಬದಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿತ್ತು. ಅದರ ಮೂಲಕ ಗೊತ್ತಾಗದ ರೀತಿಯಲ್ಲಿ ಸುಲಭವಾಗಿ ಫೋಟೋಗಳನ್ನು ತೆಗೆಯಬಹುದು.
ಅಯೋಧ್ಯೆ ರಾಮಮಂದಿರದ ಭದ್ರತಾ ಜವಾಬ್ದಾರಿ ವಿಶೇಷ ಭದ್ರತಾ ಪಡೆ (ಎಸ್ಎಸ್ಎಫ್) ಬಳಿ ಇದೆ. ಯೋಗಿ ಆದಿತ್ಯನಾಥ ಸರ್ಕಾರ ವಿಶೇಷ ಭದ್ರತಾ ಪಡೆಯನ್ನು ನೇಮಿಸಿದೆ. ಪಿಎಸಿ ಮತ್ತು ಉತ್ತರ ಪ್ರದೇಶ ಪೊಲೀಸ್ನ ಅತ್ಯುತ್ತಮ ಸಿಬ್ಬಂದಿಯನ್ನು ಸಂಯೋಜಿಸುವ ಎಸ್ಎಸ್ಎಫ್ ಪಡೆ ರಚನೆ ಮಾಡಲಾಗಿದೆ.