SUDDIKSHANA KANNADA NEWS/ DAVANAGERE/ DATE:26-02-2024
ದಾವಣಗೆರೆ: ಮಹೀಂದ್ರ ಪಿಕ್ ಅಪ್ ವಾಹನದ ಹಿಂಬದಿ ಟೈರ್ ಸ್ಫೋಟಗೊಂಡು ಪಲ್ಟಿಯಾದ ಪರಿಣಾಮ ಮೂವರು ದುರ್ಮರಣಕ್ಕೀಡಾದ ಘಟನೆ ಚಿತ್ರದುರ್ಗದಿಂದ ಹರಿಹರ ಕಡೆ ಹೋಗುವ ಎನ್.ಹೆಚ್ -48 ರಸ್ತೆಯ ಪಂಜಾಬಿ ಡಾಬಾ ಎದುರು ಭಾನುವಾರ ತಡರಾತ್ರಿ ನಡೆದಿದೆ. ಮಂತ್ರಾಲಯ ಮೂಲದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪದ ಸಿಂಗರಾಜನಹಳ್ಳಿ ಗ್ರಾಮದ ತಗರಂ ಈರಣ್ಣ (55), ಪದ್ಮ ಕಡಬೂರು ಮಂಡಲದ ನಾಗಲಾಪುರ ಗ್ರಾಮದ ಪಿಂಜಾರಿ ಮಸ್ತಾನ್ ಸಾಬ್ (55) ಚಿನ್ನ ತುಂಬಳ
ಪಂಚಾಯಿತಿ ವ್ಯಾಪ್ತಿಯ ನಾಗಲಾಪುರ ಗ್ರಾಮದ ಪೆದ್ದವೆಂಕಣ್ಣ (46) ಸಾವು ಕಂಡ ದುರ್ದೈವಿಗಳು. ಹುಸೇನ್, ಬಿ. ಲಿಂಗಣ್ಣ, ಸುಧಾಕರ ಹಾಗೂ ನಾಗಣ್ಣ ಮತ್ತಿತರರು ಗಾಯಗೊಂಡಿದ್ದಾರೆ.
ಘಟನೆ ಹಿನ್ನೆಲೆ ಏನು…?
ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಗೆ ಹೋಗುತ್ತಿರುವಾಗ ಭಾನುವಾರ ರಾತ್ರಿ 11. 25ರ ಸುಮಾರಿಗೆ ಶಾಮನೂರು ಅಂಡರ್ ಪಾಸ್ ದಾಟಿದ ನಂತರ ಬರುವ ದಾವಣಗೆರೆ ಪಂಜಾಬಿ ಡಾಬಾ ಎದುರು ಚಿತ್ರದುರ್ಗದಿಂದ ಹರಿಹರ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ -48ರಲ್ಲಿ ಹುಸೇನ್ ಎಂಬಾತ ಮಹಿಂದ್ರಾ ಪಿಕ್ ಅಪ್ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ತನ್ನ ಪಕ್ಕದ ಸೀಟಿನ ಕ್ಯಾಂಬಿನ್ ನಲ್ಲಿ ಹುಸವಿ, ಹುಸೇನಿ ಮಚ್ಚ ಬಜಾರಿ ಅವರನ್ನು ಕೂರಿಸಿಕೊಂಡು ವಾಹನದಲ್ಲಿ ಮೆಣಸಿನಕಾಯಿ ಲೋಡ್ ಮೇಲೆ ತಗರಂ ಈರಣ್ಣ, ಸುಧಾಕರ, ಪಿಂಜಾರಿ ಮಸ್ತಾನ್ ಸಾಬ್, ಪದ್ಯವಂಕಣ್ಣ ಬೋಯಾ, ಚಿನ್ನರಡ್ಡಿ ಲಿಂಗಣ್ಣ ನಾಗಣ್ಣ ಎಂಬುವವರನ್ನು ಕೂರಿಸಿಕೊಂಡು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋದ ಪರಿಣಾಮ ವಾಹನದ ಹಿಂಭಾಗದ ಎಡಬದಿಯ ಟೈರ್ ಬರ್ಸ್ಟ್ ಬರ್ಸ್ ಆಗಿ ವಾಹನ ರಸ್ತೆಯಲ್ಲಿ ಎಡಕ್ಕೆ ಪಲ್ಟಿಯಾಗಿ ಬಿದ್ದಿದೆ.
ವಾಹನದ ಮೇಲಿದ್ದ ತಗರಂ ಈರಣ್ಯ , ಪಿಂಜಾರಿ ಮಸ್ತಾನ್ ಸಾಬ್ , ಪದ್ಮವಂಕಣ , ಬೋಯಾ ಅವರಿಗೆ ಬಲವಾದ ಪಟ್ಟು ಬಿದ್ದು ರಕ್ತಸಿಕ್ತರಾಗಿದ್ದರು. ತಗರಂ ಈರಣ್ಣ, ಪಿಂಜಾಸಿ ಮಸ್ತಾನ್ ಸಾಬ್ ಹಾಗೂ ಪೆದ್ದವೆಂಕಣ್ಣ ಬೋಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದವರಾದ ವಾಹನ ಚಾಲಕ ಹುಸೇನ್, ಬಿ. ಲಿಂಗಣ್ಣ, ಸುಧಾಕರ ಹಾಗೂ ನಾಗಣ್ಣ ಅವರ ಮೈಕೈಗೆ ಪೆಟ್ಟು ಬಿದ್ದಿದೆ. ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತರ ಶವಗಳನ್ನು ದಾವಣಗೆರೆ ಸಿಜಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿಕೊಟ್ಟರು. ಈ ಅಪಘಾತಕ್ಕೆ ಕಾರಣನಾದ AP 39 / TV – 1776 ವಾಹನ ಚಾಲಕ ಹುಸೇನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.