SUDDIKSHANA KANNADA NEWS/ DAVANAGERE/ DATE:07-02-2024
ದಾವಣಗೆರೆ: ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಅವರು ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಮರಳಿ ಸೇರ್ಪಡೆಯಾದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸಮ್ಮುಖದಲ್ಲಿ ಪಕ್ಷದ ಬಾವುಟ ಹಿಡಿಯುವ ಮೂಲಕ ಕಮಲ ಮುಡಿದರು.
ಬಿಜೆಪಿ ರಾಜ್ಯ ಕಛೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಪಕ್ಷಕ್ಕೆ ಮಾಡಾಳ್ ಮಲ್ಲಿಕಾರ್ಜುನ್ ಸೇರ್ಪಡೆಯಾದರಲ್ಲದೇ, ವಿಜಯೇಂದ್ರ ಅವರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಮಾಡಾಳ್ ವಿರೂಪಾಕ್ಷಪ್ಪ ಸಹ ಹಾಜರಿದ್ದರು. ಕಳೆದ ಮೂರು ದಿನಗಳ ಹಿಂದೆಯಷ್ಚೇ ಸುದ್ದಿಕ್ಷಣ ಮೀಡಿಯಾ ಈ ಸುದ್ದಿ ಮೊದಲು ಪ್ರಕಟಿಸಿತ್ತು. ಈ ಸುದ್ದಿ ಪ್ರಸಾರವಾದ ಬಳಿಕ ಬೇರೆ ಎಲ್ಲಾ ಕಡೆ ಸುದ್ದಿ ಬಿತ್ತರಗೊಂಡಿತ್ತು. ಮೊದಲು ಗೊತ್ತಾಗಿದ್ದೇ ಸುದ್ದಿಕ್ಷಣ ಮೀಡಿಯಾಕ್ಕೆ.
ಸುದ್ದಿಕ್ಷಣ ಮೀಡಿಯಾ ಜೊತೆ ಮಾತನಾಡಿದ್ದ ಮಾಡಾಳ್ ಮಲ್ಲಿಕಾರ್ಜುನ್ ಅವರು ಬಿಜೆಪಿ ಸೇರ್ಪಡೆಯಾಗುತ್ತಿರುವುದು ನಿಜ ಎಂದು ಸ್ಪಷ್ಟವಾಗಿ ಹೇಳಿದ್ದರು. ಇಂದು ಬಿಜೆಪಿ ಸೇರ್ಪಡೆಯಾಗುವ ಮೂಲಕ ಸುದ್ದಿಕ್ಷಣ ಮೀಡಿಯಾ ಬಿತ್ತರಿಸಿದ್ದ ವರದಿ ಪಕ್ಕಾ ಆಗಿತ್ತು ಎಂಬುದು ಸ್ಪಷ್ಟ.
ರಾಜ್ಯಾಧ್ಯಕ್ಷ ಬಿ. ವೈ ವಿಜಯಜೇಂದ್ರ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜ್ ನೇತೃತ್ವದಲ್ಲಿ ಸೇರ್ಪಡೆಗೊಂಡ ಸಂದರ್ಭದಲ್ಲಿ ಕಾರ್ಯಕರ್ತರು, ಮುಖಂಡರುಗಳೊಂದಿಗೆ ಸಂಭ್ರಮಿಸಲಾಯಿತು ಈ ಸಂದರ್ಭದಲ್ಲಿ ನೀವು ತೋರಿದ ಈ ಪ್ರೀತಿ ವಿಶ್ವಾಸಕ್ಕೆ ನಾನೆಂದು ಸದಾ ಚಿರಋಣಿ ಎಂದು ವಿಜಯೇಂದ್ರ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ, ಹಿರಿಯರಾದ ಎಸ್. ಆರ್. ರವೀಂದ್ರನಾಥ್, ಚನ್ನಗಿರಿ ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಬಸವರಾಜ್ ನಾಯ್ಕ್, ಎಂ. ಪಿ. ರೇಣುಕಾಚಾರ್ಯ, ಗುರುಸಿದ್ದನಗೌಡರು, ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ಭದ್ರವಾಗಿ ಬಲವಾಗಿ ಬೇರೂರುವಂತೆ ಮಾಡಿದ್ದು ಮಾಡಾಳ್ ವಿರೂಪಾಕ್ಷಪ್ಪ. ಶಾಸಕರಾಗಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಶ್ರೀರಕ್ಷೆಯಾಗಿದ್ದವು. ಮಾಡಾಳ್ ವಿರೂಪಾಕ್ಷಪ್ಪ
ಅಂದರೆ ಬಿಜೆಪಿಯ ಅಜಾತಶತ್ರು. ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಒಟ್ಟುಗೂಡಿಸಿಕೊಂಡು ಹೋಗುತ್ತಿದ್ದ ಮಾಡಾಳ್ ವಿರೂಪಾಕ್ಷಪ್ಪರ ಕೆಲಸಗಳಿಗೆ ಅವರೇ ಸಾಟಿ. ಇವರ ಅವಧಿಯಲ್ಲಿ ಹೆಚ್ಚಾಗಿ ಚನ್ನಗಿರಿ ಅಭಿವೃದ್ಧಿ ಆಗಿದ್ದು ಎಂಬ ಮಾತೂ ಕೇಳಿ ಬರುತ್ತಿದ್ದವು. ಈಗ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿ ಸೇರ್ಪಡೆಯಾಗಿರುವುದು ಬಿಜೆಪಿಗೆ ಬಲ ಬಂದಿದೆ.
ದಾವಣಗೆರೆ ಜಿಲ್ಲೆ ಬಿಜೆಪಿ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿರಲಿಲ್ಲ. ಕಳೆದ ಚುನಾವಣೆಯಲ್ಲಿ ಏಳು ಕ್ಷೇತ್ರಗಳ ಪೈಕಿ ಐದರಲ್ಲಿ ಜಯಗಳಿಸಿದ್ದ ಕೇಸರಿ ಪಡೆ ಸಂಪೂರ್ಣವಾಗಿ ನೆಲಕಚ್ಚಲು ಕಾರಣ ಏನು ಎಂಬುದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತಾಗಿತ್ತು. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಜಿಲ್ಲೆಯ ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಾರ ಮಾಡದಿರುವುದು ಬಿಜೆಪಿ ಭಾರೀ ಹಿನ್ನೆಡೆ ತಂದಿತ್ತು. ಚನ್ನಗಿರಿ ಕ್ಷೇತ್ರವೂ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಪಡೆದ ಮತ ಹಾಗೂ ಮಾಡಾಳ್ ಮಲ್ಲಿಕಾರ್ಜುನ್ ಪಡೆದ ಮತಗಳು ಬಿಜೆಪಿ ಪಕ್ಷಕ್ಕೆ ಬಿದ್ದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಷ್ಟವಾಗಿತ್ತು.
ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಡಾಳ್ ಮಲ್ಲಿಕಾರ್ಜುನ್ ಗೆಲ್ಲುವ ಕುದುರೆ ಎನಿಸಿಕೊಂಡಿದ್ದರು. ಆದ್ರೆ, ಫಲಿತಾಂಶ ಕಾಂಗ್ರೆಸ್ ಪರ ಬಂದಿತ್ತು. ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜ್ ಗೆದ್ದು ಬಂದರು. ಆದ್ರೆ, ಬಿಜೆಪಿ ಇಲ್ಲಿ ಮೂರನೇ ಸ್ಥಾನಕ್ಕೆ ತಳ್ಳಿದಾಗಲೇ ಮಾಡಾಳ್ ವಿರೂಪಾಕ್ಷಪ್ಪರ ಬಲ, ವರ್ಚಸ್ಸು ಗೊತ್ತಾಗಿದ್ದು. 2013ರಲ್ಲಿ ಕೆಜೆಪಿಯಿಂದ ಕಣಕ್ಕಿಳಿದಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರು ವಡ್ನಾಳ್ ರಾಜಣ್ಣರ ವಿರುದ್ಧ ಸೆಣಸಾಡಿದ್ದರು. ಆಗಲೂ ಇಲ್ಲಿ ಬಿಜೆಪಿ ಗೌಣ ಎಂಬಂತಾಗಿತ್ತು. ಈಗ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿ ಸೇರ್ಪಡೆಯಿಂದ ಚನ್ನಗಿರಿಯಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ.