SUDDIKSHANA KANNADA NEWS/ DAVANAGERE/ DATE:14-06-2024
ದಾವಣಗೆರೆ: ಪೋಕ್ಸೋ ಕೇಸ್ ನಡಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಬಂಧಿಸಿದರೆ ರಾಜ್ಯದ ಕಾಂಗ್ರೆಸ್ ಪತನ ಆಗುತ್ತೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ರಣದೀಪ್ ಸುರ್ಜೀವಾಲಾ ಅವರು ಸಿಎಂ ಸಿದ್ದರಾಮಯ್ಯರ ಮೇಲೆ ಒತ್ತಡ ಹೇರಿ ಯಡಿಯೂರಪ್ಪ ಬಂಧನಕ್ಕೆ ಷಡ್ಯಂತ್ರ ರೂಪಿಸಲಾಗಿದ. ನಾವು ಸುಮ್ಮನೆ ಕೈ ಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಯಡಿಯೂರಪ್ಪರ ಪರ ಇದ್ದೇವೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಪೋಕ್ಸೋ ಕೇಸ್ ನಡಿ ಬಂಧಿಸಬಹುದು ಎಂಬ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿರುವುದು ರಾಜಕೀಯ ಪ್ರೇರಿತ. ಪೋಕ್ಸೋ ಕೇಸ್ ಆಗಿ 45 ದಿನಗಳಿಗೂ ಹೆಚ್ಚು ದಿನಗಳು ಕಳೆದಿವೆ. ಗೃಹ ಸಚಿವ ಪರಮೇಶ್ವರ್ ಅವರೇ ಹೇಳಿದಂತೆ ಮಮತಾ ಎಂಬ ಹೆಣ್ಣುಮಗಳು ಐಎಎಸ್, ಐಪಿಎಸ್ ಸೇರಿ 53 ಅಧಿಕಾರಿಗಳು, ಉದ್ಯಮಿಗಳ ಮೇಲೆ ಕೇಸ್ ಹಾಕಿದ್ದಳು. ಈಕೆ ಮಾನಸಿಕ ಅಸ್ವಸ್ಥೆ ಎಂದಿದ್ದರು. ಮಮತಾ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಆದ್ರೆ, ಇದ್ದಕ್ಕಿದ್ದಂತೆ ಯಡಿಯೂರಪ್ಪರಿಗೆ ಅರೆಸ್ಟ್ ವಾರೆಂಟ್ ನೀಡಿರುವುದು ಯಾಕೆ ಎಂದು ಪ್ರಶ್ನಿಸಿದರು.
ಮಮತಾ ಎಂಬ ಮಹಿಳೆ ಬದುಕಿದ್ದಾಗ ಯಡಿಯೂರಪ್ಪರನ್ನು ಭೇಟಿ ಮಾಡಿ ಮಗಳಿಗೆ ಅನ್ಯಾಯ ಆಗಿದೆ, ಗಂಡನ ಸಹೋದರ ಸಂಬಂಧಿಗಳು ಮುಗ್ದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದು ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. 5 ಸಾವಿರ ಕೋಟಿ ರೂ. ಬಜಾಜ್ ಕಂಪೆನಿ ನನಗೆ ವಾಪಸ್ ನೀಡಬೇಕು ಎಂದು ಆಗ್ರಹಿಸಿದ್ದರು. ಈಗ ಆ ಮಹಿಳೆ ತೀರಿಕೊಂಡಿದ್ದಾರೆ. ಆಕೆಯ ಪುತ್ರನಿಗೆ ಆಸೆ, ಆಮೀಷವೊಡ್ಡಿ ಪ್ರಭಾವಿ ಮಂತ್ರಿಯೊಬ್ಬರು ಯಡಿಯೂರಪ್ಪ ಅವರನ್ನು ಸಂಕಷ್ಟಕ್ಕ ಸಿಲುಕಿಸಲು ಹೂಡಿರುವ ಹುನ್ನಾರ. ಎಲ್ಲಾ ಮಾಹಿತಿ ನನ್ನಲಿವೆ. 53 ಜನರ ವಿಚಾರಣೆ ಯಾಕೆ ನಡೆಸಿಲ್ಲ. ಅತ್ಯಾಚಾರ ಎಸಗಿದ ಇಬ್ಬರನ್ನು ಯಾಕೆ ಇದುವರೆಗೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.
ಪೇ ಸಿಎಂ ಕೇಸ್ ನಡಿ ಕೋರ್ಟ್ ಗೆ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಹಾಜರಾಗಿದ್ದರು. ರಾಹುಲ್ ಗಾಂಧಿ ಅವರು ವಿಚಾರಣೆಗೆ ಇಲ್ಲಿಗೆ ಬಂದಿದ್ದು, ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆ, ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಕೇಸ್ ಸಿಬಿಐಗೆ ಹೋಗಿದ್ದು, ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದು ಸೇರಿದಂತೆ ಕಾಂಗ್ರೆಸ್ ಭ್ರಷ್ಟಾಚಾರ ಮುಚ್ಚಿಹಾಕಲು ಯಡಿಯೂರಪ್ಪರ ಮೇಲೆ ಸೇಡಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಮತಾರ ಮಗ, ಬಾಲಕಿಯ ಸಹೋದರ ದೂರು ನೀಡಿದ್ದಾನೆ. ಆತ ತಾಯಿ, ಸಹೋದರಿಯಿಂದ ದೂರ ಇದ್ದ. ನಾಲ್ಕು ದಿನಗಳ ಹಿಂದೆ ಪ್ರಭಾವಿ ಸಚಿವರು ಸಹೋದರನನ್ನು ಕರೆಯಿಸಿ ಆಮೀಷವೊಡ್ಡಿ ಬಲವಂತದಿಂದ ಕೇಸ್ ಕೊಡಿಸಿದ್ದಾರೆ. ಎರಡು ದಿನಗಳ ಹಿಂದೆ ಸಿಐಡಿ ನೊಟೀಸ್ ಕೊಟ್ಟಿದ್ದಾರೆ. ಜೂನ್ 17ಕ್ಕೆ ವಿಚಾರಣೆಗೆ ಹಾಜರಾಗ್ತೇನೆ ಎಂದಿದ್ದ ಯಡಿಯೂರಪ್ಪ ತಲೆಮರೆಸಿಕೊಂಡಿಲ್ಲ. ಸಾಕ್ಷ್ಯ ನಾಶ ಮಾಡ್ತಾರೆ ಎಂಬ ಕಾರಣವೊಡ್ಡಿ ವಶಕ್ಕೆ ಸಿಐಡಿ ಅಧಿಕಾರಿಗಳು ಕೇಳುತ್ತಿದ್ದಾರೆ. ಯಡಿಯೂರಪ್ಪ ಮತ್ತು ಕೆಲವರನ್ನು ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು, ಸರ್ಕಾರ ಪತನವಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಈ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು.
ಮುಗ್ಧ ಬಾಲಕಿ ಮೇಲೆ ರೇಪ್ ಮಾಡಿದವರ ಕೇಸ್ ಏನಾಯ್ತು. 52 ಜನರ ವಿರುದ್ಧದ ಪ್ರಕರಣ ತನಿಖೆ ಯಾಕೆ ನಡೆಸಿಲ್ಲ. ಯಡಿಯೂರಪ್ಪ ವಿರುದ್ಧದ ಕೇಸ್ ನಲ್ಲಿ ಷಡ್ಯಂತ್ರ ಅಡಗಿದೆ. ಬಿಜೆಪಿ, ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಲು ಈ ರೀತಿಯ ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ದ್ವೇಷದ ರಾಜಕಾರಣ ರಾಜ್ಯದ ಜನತೆ ಒಪ್ಪಲ್ಲ. 53 ಜನರನ್ನು ಮೊದಲು ಬಂಧಿಸಿ. ಬಾಲಕಿ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತು. ಸದ್ಯದಲ್ಲಿಯೇ ಬಹಿರಂಗಪಡಿಸುತ್ತೇನೆ. ಆಸೆ, ಆಮೀಷವೊಡ್ಡಿ ನಾಲ್ಕು ದಿನಗಳ ಹಿಂದೆ ಕೇಸ್ ಗೆ ಮರುಜೀವ ನೀಡಲಾಗಿದೆ. ರುದ್ರೇಶ್ ಮೊಬೈಲ್ ಗೆ ಲೋಕೇಶನ್ ಹಾಕಿ ಮಮತಾ ಬದುಕಿದ್ದಾಗ ಸಹಾಯ ಕೇಳಿದ್ದು ಸೇರಿದಂತೆ ವಾಟ್ಸಪ್ ಸಂದೇಶ ನಾನು ನೋಡಿದ್ದೇನೆ. ರಾಹುಲ್ ಗಾಂಧಿ, ಸುರ್ಜೆವಾಲರ ಮೂಲಕ ಯಡಿಯೂರಪ್ಪರನ್ನು ಬಂಧಿಸುವಂತೆ ಸೂಚನೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಯಡಿಯೂರಪ್ಪ ವಿರುದ್ಧದ ಮೇಲಿನ ಸುಳ್ಳು ಕೇಸ್ ಗೆ ಬಿ ಎಸ್ ವೈ ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ. ಯಡಿಯೂರಪ್ಪ ಅವರಿಗೆ ನ್ಯಾಯ ಸಿಗುತ್ತೆ ಎಂದು ರೇಣುಕಾಚಾರ್ಯ ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಬಿಜೆಪಿ ಜಿಲ್ಲಾ ಘಟಕದ ಎನ್. ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಕಡ್ಲೇಬಾಳು ಧನಂಜಯ, ವಕ್ತಾರ ಕೊಳೇನಹಳ್ಲಿ ಸತೀಶ್ ಮತ್ತಿತರರು ಹಾಜರಿದ್ದರು.