SUDDIKSHANA KANNADA NEWS/ DAVANAGERE/ DATE:24-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಭಿನ್ನಮತೀಯರ ತಂಡ ಸಭೆ ಮೇಲೆ ಸಭೆ ನಡೆಸಿತ್ತು. ಅಭ್ಯರ್ಥಿ ಬದಲಾಗಲೇಬೇಕು ಎಂಬ ಪಟ್ಟು ಹಿಡಿದಿದೆ. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಹಾಗೂ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನೇತೃತ್ವದ ತಂಡವು ತಾಲೂಕು ಮಟ್ಟದಲ್ಲಿಯೂ ಸಭೆ ನಡೆಸುವುದಾಗಿ ತಿಳಿಸಿತ್ತು. ಅದರಂತೆ ಹೊನ್ನಾಳಿ – ನ್ಯಾಮತಿ ತಾಲೂಕಿನಲ್ಲಿ ಸಭೆ ನಡೆಸಲಾಗಿದೆ.
ಹೊನ್ನಾಳಿ ಪಟ್ಟಣದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಬಿಜೆಪಿಯ ಪ್ರಮುಖ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮುಖಂಡರು ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದ್ರು. ಮಾತ್ರವಲ್ಲ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೇಣುಕಾಚಾರ್ಯ ಸೋಲಲು ಕಾರಣವೇನು ಎಂಬುದು ಎಲ್ಲರಿಗೂ ಗೊತ್ತು. ರೇಣುಕಾಚಾರ್ಯ ಅವರು ಕೊರೊನಾದಂಥ ಸಂಕಷ್ಟದ ವೇಳೆಯಲ್ಲಿ ಪ್ರಾಣ ಭಯ ಲೆಕ್ಕಿಸದೇ ಜನರ ಪರವಾಗಿ ನಿಂತಿದ್ದರು. ತಾಲೂಕಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಆದ್ರೂ ಸೋತಿದ್ದು ಎಲ್ಲರಿಗೂ ಬೇಸರ ತರಿಸಿತ್ತು ಎಂದು ಹೇಳಿದರು.
ರೇಣುಕಾಚಾರ್ಯ ಹೇಳಿದಂತೆ ಕೇಳುತ್ತೇವೆ
ರೇಣುಕಾಚಾರ್ಯ ಹೊನ್ನಾಳಿ – ನ್ಯಾಮತಿ ತಾಲೂಕಿನ ಪ್ರತಿ ಹಳ್ಳಿಗಳಿಗೂ ಹೋಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರ ಜೊತೆ ಒಡನಾಟ ಹೊಂದಿದ್ದಾರೆ. ಆದರೂ ಕಾಣದ ಕೈಗಳು ರೇಣುಕಾಚಾರ್ಯ ಅವರ ಸೋಲಿಗೆ ಕಾರಣ ಎಂಬುದು ಎಲ್ಲರಿಗೂ ಗೊತ್ತು. ಆ ಕಾಣದ ಕೈಗಳಿಗೆ ತಕ್ಕ ಪಾಠ ಕಲಿಸಲೇಬೇಕಿದೆ. ನಾವೆಲ್ಲರೂ ರೇಣುಕಾಚಾರ್ಯ ಯಾವುದೇ ನಿರ್ಧಾರ ತೆಗೆದುಕೊಂಡರೂ ಬದ್ಧ. ಅವರು ಹೇಳಿದಂತೆ ಕೆಲಸ ಮಾಡುತ್ತೇವೆ ಎಂದು ಸಭೆಯಲ್ಲಿ ಘಂಟಾಘೋಷವಾಗಿ
ಹೇಳಿದರು.
ರವೀಂದ್ರನಾಥ್ ನಿರ್ಧಾರಕ್ಕೆ ಬದ್ಧ
ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು, ಲೋಕಸಭೆ ಚುನಾವಣೆಯು ಬಿಜೆಪಿಗೆ ಮಹತ್ವದ್ದು. ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಿದೆ. ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನಲ್ಲಿ ರೇಣುಕಾಚಾರ್ಯ ಅವರು, ಸಚಿವರಾಗಿ, ಶಾಸಕರಾಗಿ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಆಲೋಚನೆಗಳು ಸರಿಯಾಗಿರುತ್ತವೆ. ಹಾಗಾಗಿ, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಿರುತ್ತೇವೆ. ಅವರು ಹೇಳಿದಂತೆ ಕೆಲಸ ನಿರ್ವಹಿಸುತ್ತೇವೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೆ, ಅದು ನನ್ನ ಒಬ್ಬನ ತೀರ್ಮಾನ ಆಗಲ್ಲ.ನಮ್ಮ ಪಕ್ಷದ ಹಿರಿಯ ಮುಖಂಡರು, ಮಾಜಿ ಸಚಿವರು, ಹಿರಿಯರೂ ಆದ ಎಸ್. ಎ. ರವೀಂದ್ರನಾಥ್ ಹಾಗೂ ನಮ್ಮ ಟೀಮ್ ಜೊತೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಯಾರ ವಿರುದ್ಧವೂ ಇಲ್ಲ
ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಯಾರ ವಿರುದ್ಧವೂ ಮಾತನಾಡಿಲ್ಲ. ನಮ್ಮ ಅಭಿಪ್ರಾಯ ಹೇಳಿದ್ದೇನೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೆ, ಈಗ ಘೋಷಿಸಲಾಗಿರುವ ಅಭ್ಯರ್ಥಿ ಬದಲಿಸಬೇಕು. ಆಗ ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. ಪಕ್ಷದ ಅಭ್ಯರ್ಥಿ ಗೆಲುವಿಗೆ ಹಗಲಿರುಳು ಶ್ರಮಿಸುತ್ತೇವೆ. ಇಲ್ಲದಿದ್ದರೆ ರವೀಂದ್ರನಾಥ್ ಅವರು ಏನು ಹೇಳುತ್ತಾರೋ ಅದನ್ನು ಕೇಳುತ್ತೇವೆ. ಚಿತ್ರದುರ್ಗ – ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು. ಬಿಜೆಪಿ ಭೀಷ್ಮ ಅಂತಾನೇ ಎಲ್ಲರೂ ಕರೆಯುತ್ತಾರೆ. ಪಕ್ಷಕ್ಕಾಗಿ ದುಡಿದ, ಸಂಘಟನೆಗೆ ಶ್ರಮಿಸಿವದರ ವಿಶ್ವಾಸಕ್ಕೆ ಪಡೆಯಬೇಕು. ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂಬುದು ನಮ್ಮ ಒತ್ತಾಸೆ ಎಂದು ರೇಣುಕಾಚಾರ್ಯ ಹೇಳಿದರು.