SUDDIKSHANA KANNADA NEWS/ DAVANAGERE/ DATE:20-11-2024
ದಾವಣಗೆರೆ: ಕೊರೊನಾ ವೇಳೆ ಅಧಿಕಾರದಲ್ಲಿದ್ದ ಬಿಜೆಪಿಯು ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆದಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಗಂಭೀರ ಆರೋಪ
ಮಾಡಿದ್ದಾರೆ.
ನಗರದ ಚಿಗಟೇರಿ ಆಸ್ಪತ್ರೆಆವರಣದಲ್ಲಿ ನಡೆದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ವಿಭಾಗಗಳ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಯಂತ್ರೋಪಕರಣ ಖರೀದಿ ಮಾಡದೇ ಹಣ ನುಂಗಿ ಹಾಕಿದ್ದಾರೆ. ಬಿಜೆಪಿ ಮಾಡಿದ ಅವ್ಯವಹಾರ ಬೆಳಕಿಗೆ ಬರುತ್ತಿವೆ. ಎಲ್ಲರಿಗೂ ಲಸಿಕೆ ನೀಡಲು ಆಗಲಿಲ್ಲ. ಆಗ ನಮ್ಮ ಕುಟುಂಬದಿಂದ
ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಕೊರೊನಾ ಲಸಿಕೆ ನೀಡಿದ್ದೇವೆ. ಇದೇ ಕಾರಣಕ್ಕೆ ಶೇಕಡಾ 40 ಕಮೀಷನ್ ಸರ್ಕಾರ ಎಂದು ನಾವು ಬಿಜೆಪಿ ಸರ್ಕಾರ ಕರೆದಿದ್ದು, ಸರ್ಕಾರದಿಂದ ವಿರುದ್ಧ ಆರೋಪ ಮಾಡುವ
ಮೂಲಕ ವಾಗ್ದಾಳಿ ನಡೆಸಿದ್ದು, ರಾಜ್ಯ ಸರ್ಕಾರದ ವಿರುದ್ದ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಎಲ್ಲವೂ ಬಯಲಿಗೆ ಬರುತ್ತಿವೆ. ಯಂತ್ರೋಪಕರಣಗಳು ಗುಣಮಟ್ಟದಲ್ಲಿ ಇರಲಿಲ್ಲ. ಬಿಜೆಪಿಯವರು ತಿಂದು ತೇಗಿ ಎಲ್ಲವೂ ಮುಗಿದು ಹೋಗಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ಈ ವೇಳೆ ಸಚಿವ ದಿನೇಶ್ ಗುಂಡೂರಾವ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಮೇಯರ್ ಕೆ.ಚಮನ್ಸಾಬ್, ದೂಡಾ ಆಧ್ಯಕ್ಷ ಕೆ.ದಿನೇಶ್ ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಶಿವಕುಮಾರ್ ಕೆ.ಬಿ, ಅಭಿಯಾನ ನಿರ್ದೇಶಕರಾದ ಡಾ. ನವೀನ್ ಭಟ್ ರೈ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.