SUDDIKSHANA KANNADA NEWS/ DAVANAGERE/ DATE:24-12-2024
ದಾವಣಗೆರೆ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಬಗ್ಗೆ ಮಾತನಾಡುವ ಮೊದಲು ಸ್ವಲ್ಪ ಯೋಚಿಸಬೇಕು. ಅನ್ನ ತಿಂದ ಮನೆಗೆ ಕನ್ನ ಹಾಕುವ ಕೆಲಸಕ್ಕೆ ಕೈ ಹಾಕಬಾರದು ಎಂದು ಮಹಾನಗರ ಪಾಲಿಕೆ ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಇಟ್ಟಿಗುಡಿ ಮಂಜುನಾಥ್ ಹಾಗೂ ಪಾಲಿಕೆ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮೀನಾಕ್ಷಿ ಎಂ. ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಈರ್ವರು, ಶಿವಗಂಗಾ ಬಸವರಾಜ್ ಪಾಲಿಕೆ ಸದಸ್ಯರಾಗಿದ್ದು, ಹೇಗೆಂಬುದನ್ನು ಅವರು ಇತಿಹಾಸದ ಪುಟ ತಿರುಗಿಸಿ ನೋಡಬೇಕು. ಮಲ್ಲಿಕಾರ್ಜುನ ಅವರಿಂದಲೇ ರಾಜಕೀಯ ಪ್ರವೇಶ ಮಾಡಿದ್ದು ಎಂದು ಹೇಳಿಕೆ ನೀಡಿದ್ದ ಅವರೀಗ ಸಚಿವರ ವಿರುದ್ಧವೇ ಹೇಳಿಕೆ ನೀಡಿರುವುದು ತರವಲ್ಲ ಎಂದಿದ್ದಾರೆ.
ಶಾಮನೂರು ಶಿವಶಂಕ್ರಪ್ಪ ಅವರು ಆರೇಳು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ದುಡಿಯುತ್ತಿದ್ದು, ಅವರ ಕುಟುಂಬ ವರ್ಗ ಸರ್ವಜನಾಂಗದ ಶಾಂತಿಯ ತೋಟದಂತೆ ಪಕ್ಷ ಬೆಳೆಸಿದ್ದಕ್ಕೆ ಇಂದು ನೀವು ಚನ್ನಗಿರಿ ಶಾಸಕರಾಗಿದ್ದೀರಿ ಎಂಬುದು ಮರೆಯಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಬಗ್ಗೆ ಹೈಕಮಾಂಡ್ಗೆ ಪತ್ರ ಬರೆದು ನೀವೇನೂ ದೊಡ್ಡವರಾಗುವುದಿಲ್ಲ. ಹೈಕಮಾಂಡ್ಗೆ ಶಾಮನೂರು ಕುಟುಂಬದವರು ಪಕ್ಷಕ್ಕೆ ಎಷ್ಟು ಸೇವೆ ಸಲ್ಲಿಸಿದ್ದಾರೆ ಎನ್ನುವುದು ಗೊತ್ತಿದೆ. ಲೋಕಸಭಾ ಚುನಾವಣೆಯಲ್ಲಿ, ಅತಿ ಹೆಚ್ಚು ಮತ ಕಾಂಗ್ರೆಸ್ ಗೆ ಬರುವಂತೆ ಮಾಡಿದೆ ಎಂದು ಹೇಳಿದ್ದೀರಿ, ಮುಸ್ಲಿಂ ಸಮಾಜ ಮತ್ತು ಶೋಷಿತ ಸಮುದಾಯಗಳು ನೀವು ಇರಲಿ ಬಿಡಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾ ಬಂದಿವೆ. ಉಳಿದ ಮತದಾರರು ಮತ್ತು ಮುಖಂಡರುಗಳು ಪ್ರಭಾ ಮಲ್ಲಿಕಾರ್ಜುನ್ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಆಡಳಿತ ವೈಖರಿಯನ್ನು ಗಮನಿಸಿ ಮತ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.