ಮುಂಬೈ: ಖ್ಯಾತ ಕನ್ನಡಕ ಮಾರಾಟ ಸಂಸ್ಥೆ ‘ಲೆನ್ಸ್‌ಕಾರ್ಟ್’ (Lenskart) ನೌಕರರಿಗೆ ಬಿಂದಿ ಮತ್ತು ತಿಲಕ ಧರಿಸುವುದನ್ನು ನಿರ್ಬಂಧಿಸಿದೆ ಎಂಬ ಆರೋಪದ ಬೆನ್ನಲ್ಲೇ, ಮುಂಬೈನಲ್ಲಿ ಹೈಡ್ರಾಮಾ ನಡೆದಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕಿ ನಾಜಿಯಾ ಇಲಾಹಿ ನೇತೃತ್ವದ ಪ್ರತಿಭಟನಾಕಾರರು ಮುಂಬೈನ ಶೋರೂಂಗೆ ಮುತ್ತಿಗೆ ಹಾಕಿ, ಅಲ್ಲಿದ್ದ ಸಿಬ್ಬಂದಿಗೆ ತಿಲಕ ಹಚ್ಚಿ ಹಾಗೂ ಕೈಗೆ ಕಂಕಣ ಕಟ್ಟುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ವಿವರ:
ಲೆನ್ಸ್‌ಕಾರ್ಟ್‌ನ ಆಂತರಿಕ ತರಬೇತಿ ದಾಖಲೆಯೊಂದರಲ್ಲಿ ಹಿಜಾಬ್‌ಗೆ ಅವಕಾಶ ನೀಡಿ, ಹಿಂದೂ ಧಾರ್ಮಿಕ ಚಿಹ್ನೆಗಳಾದ ಬಿಂದಿ ಮತ್ತು ತಿಲಕಕ್ಕೆ ನಿರ್ಬಂಧ ಹೇರಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಕೆರಳಿದ ನಾಜಿಯಾ ಇಲಾಹಿ ಮತ್ತು ಕಾರ್ಯಕರ್ತರು ಶೋರೂಂ ಮ್ಯಾನೇಜರ್ ಮೊಹ್ಸಿನ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡರು. “ಇದು ಹಿಂದೂ ರಾಷ್ಟ್ರ, ಇಲ್ಲಿ ಧಾರ್ಮಿಕ ತಾರತಮ್ಯಕ್ಕೆ ಅವಕಾಶವಿಲ್ಲ” ಎಂದು ಎಚ್ಚರಿಸಿದ ಅವರು, ಬಲವಂತವಾಗಿ ಸಿಬ್ಬಂದಿಗೆ ತಿಲಕವಿಟ್ಟು ಪ್ರತಿಭಟಿಸಿದರು.
ಲೆನ್ಸ್‌ಕಾರ್ಟ್ ಸ್ಪಷ್ಟನೆ:
ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಲೆನ್ಸ್‌ಕಾರ್ಟ್ ಸಿಇಒ ಪೇಯೂಷ್ ಬನ್ಸಾಲ್, ವೈರಲ್ ಆಗಿರುವ ದಾಖಲೆಯು ಹಳೆಯದಾದ ತರಬೇತಿ ಟಿಪ್ಪಣಿಯಾಗಿದ್ದು, ಅದು ಕಂಪನಿಯ ಅಧಿಕೃತ ನೀತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕಂಪನಿಯು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.
ಹೊಸ ಮಾರ್ಗಸೂಚಿ:
ಈಗ ಕಂಪನಿಯು ಹೊಸ ‘ಇನ್-ಸ್ಟೋರ್ ಸ್ಟೈಲ್ ಗೈಡ್’ ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಂದಿ, ತಿಲಕ, ಸಿಂಧೂರ, ಕಳವ (ಪವಿತ್ರ ದಾರ), ಮಂಗಳಸೂತ್ರ, ಕಡಾ, ಹಿಜಾಬ್ ಮತ್ತು ಟರ್ಬನ್ ಸೇರಿದಂತೆ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಹ್ನೆಗಳನ್ನು ಧರಿಸಲು ಅಧಿಕೃತವಾಗಿ ಅನುಮತಿ ನೀಡಲಾಗಿದೆ.






Leave a comment