ನವದೆಹಲಿ: ರಾತ್ರಿ ತಡವಾಗಿ ಊಟ ಮಾಡುವುದು, ಹೊಟ್ಟೆತುಂಬಾ ತಿನ್ನುವುದು ಮತ್ತು ಊಟ ಮಾಡಿದ ತಕ್ಷಣ ಮಲಗಿಕೊಳ್ಳುವ ಅಭ್ಯಾಸದಿಂದ ರಾತ್ರಿಯ ವೇಳೆ ಆಮ್ಲೀಯತೆ ಹಾಗೂ ಎದೆಗೆಟ್ಟಲು ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಕುರಿತು ಪ್ರಮುಖ ಜಠರಗರುಳಿನ ತಜ್ಞರಾದ ಡಾ. ಸೌರಭ್ ಬನ್ಸಾಲ್ ಅವರು ದೈನಂದಿನ ಆಹಾರ ಪದ್ಧತಿ ಹಾಗೂ ನಿದ್ರೆಯ ಅಭ್ಯಾಸಗಳು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಮಾಹಿತಿ ನೀಡಿದ್ದಾರೆ.
ದಿನದ ಬಿಡುವಿಲ್ಲದ ಕೆಲಸದ ಒತ್ತಡದಿಂದಾಗಿ ಮಧ್ಯಾಹ್ನದ ಊಟವನ್ನು ತಪ್ಪಿಸುವುದು ಅಥವಾ ತಡವಾಗಿ ಸೇವಿಸುವುದು, ಆಗಾಗ್ಗೆ ಕಾಫಿ-ಚಹಾ ಕುಡಿಯುವುದು ಮತ್ತು ರಾತ್ರಿ ಅತಿ ಹೆಚ್ಚು ತೂಕದ ಊಟ ಸೇವಿಸುವುದು ಆಸಿಡಿಟಿಗೆ ಪ್ರಮುಖ ಕಾರಣಗಳಾಗಿವೆ. ಪುನರಾವರ್ತಿತ ಲಕ್ಷಣಗಳು ಕಂಡುಬಂದಲ್ಲಿ ಇದನ್ನು ನಿರ್ಲಕ್ಷಿಸದೆ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಆಸಿಡಿಟಿಗೆ ಕಾರಣಗಳೇನು?: ತಡರಾತ್ರಿಯ ಊಟದ ಬಳಿಕ ಕೂಡಲೇ ಮಲಗುವುದರಿಂದ ಹೊಟ್ಟೆಯಲ್ಲಿರುವ ಆಹಾರ ಮೇಲ್ಮುಖವಾಗಿ ಚಲಿಸುತ್ತದೆ. ನಿದ್ರೆಯಲ್ಲಿ ಲಾಲಾರಸ ಉತ್ಪತ್ತಿ ಕಡಿಮೆಯಾಗುವುದರಿಂದ ಅನ್ನನಾಳವು ಆಮ್ಲವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ಮಂದಗೊಳ್ಳುತ್ತದೆ.
ವಿವಿಧ ಲಕ್ಷಣಗಳು: ಎದೆ ಉರಿಯ ಜತೆಗೆ ಕೆಲವರಲ್ಲಿ ಬಾಯಿಯಲ್ಲಿ ಕಹಿ ರುಚಿ, ಗಂಟಲಿನಲ್ಲಿ ಕಿರಿಕಿರಿ, ಕೆಮ್ಮು ಅಥವಾ ಆಹಾರ ಕಂಟಲಿಗೆ ಬರುವ ಅನುಭವವಾಗಬಹುದು. ಇದು ಗ್ಯಾಟ್ರೋ-ಎಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆಯ (GERD) ಲಕ್ಷಣವೂ ಆಗಿರಬಹುದು.
ತಡೆಗಟ್ಟುವ ಸರಳ ಉಪಾಯಗಳು: ಊಟಕ್ಕೂ ಮಲಗುವ ಸಮಯಕ್ಕೂ ಕನಿಷ್ಠ 3 ಗಂಟೆಗಳ ಅಂತರವಿಟ್ಟುಕೊಳ್ಳುವುದು, ರಾತ್ರಿ ಹಗುರವಾದ ಊಟ ಮಾಡುವುದು, ಮಲಗುವಾಗ ತಲೆಯ ಭಾಗವನ್ನು ಸ್ವಲ್ಪ ಎತ್ತರದಲ್ಲಿಟ್ಟುಕೊಳ್ಳುವುದು ಅಥವಾ ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಆಸಿಡಿಟಿ ನಿಯಂತ್ರಿಸಬಹುದು.





Leave a comment